ದಾವಣಗೆರೆ:
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಜಾಮೀಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳ ಪೊಲೀಸರು ಗುಂಡಿನ ದಾಳಿ ನಡೆಸಿರುವುದನ್ನು ಖಂಡಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‍ಓ)ಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಎಐಡಿಎಸ್‍ಓ ನೇತೃತ್ವದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿರುವ ಪೊಲೀಸರ ಕ್ರಮ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ನಾಗಜ್ಯೋತಿ, ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮುಂಚಿತವಾಗಿ ತಿಳಿಸಿಯೇ, ಹಿಂಸೆಗೆ ಆಸ್ಪದ ನೀಡದೇ ತಮ್ಮ ಬೇಡಿಕೆಗಳಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಕೆಲವು ಸಮಾಜ ಘಾತುಕ ಶಕ್ತಿಗಳು ಹಿಂಸಾಚಾರಕ್ಕೆ ಇಳಿದಿದ್ದಾರೆಂಬ ನೆಪದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹೇಡಿಗಳಂತೆ ಪೊಲೀಸರು ಗುಂಡಿನ ದಾಳಿ ನಡೆಸಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರು ನಡೆಸಿರುವ ಗುಂಡಿನ ದಾಳಿಯಲ್ಲಿ ಹಲವರು ಗುಂಡಿನೇಟಿಗೆ ತುತ್ತಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿರುವ ದಿನ ದೇಶದ ವಿದ್ಯಾರ್ಥಿ ಚಳುವಳಿಯ ಇತಿಹಾಸದಲ್ಲಿ ಕರಾಳ ದಿನವಾಗಿದೆ ಎಂದು ಕಿಡಿಕಾರಿದರು.
ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಕೋಮು ಪಕ್ಷಪಾತದ ಆಧಾರಿತವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶದಾದ್ಯಂತ ವಿದ್ಯಾರ್ಥಿ ಸಮುದಾಯ ಪ್ರತಿಭಟನೆ ನಡೆಸುವ ಮೂಲಕ ಪ್ರಜಾತಾಂತ್ರಿಕ ಹಕ್ಕು ಎತ್ತಿ ಹಿಡಿಯುತ್ತಿದ್ದು, ತಕ್ಷಣವೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ಪೊಲೀಸರು ಪ್ರತಿಭಟನಾನಿರತರ ಮೇಲೆ ನಿರ್ದಾಕ್ಷಿಣ್ಯ ಹಾಗೂ ಮಾರಣಾಂತಿಕ ದಾಳಿ ನಡೆಸುವ ಪ್ರಯತ್ನವನ್ನು ತಕ್ಷಣವೇ ನಿಲ್ಲಿಸಬೇಕು. ಈ ಹಿಂಸಾಚಾರಗಳ ಹಿಂದಿರುವ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಹಚ್ಚಬೇಕು. ವಿದ್ಯಾರ್ಥಿಗಳ ಗುಂಡಿನ ದಾಳಿ ನಡೆಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿರು.ಪ್ರತಿಭಟನೆಯ ನೇತೃತ್ವವನ್ನು ಎಐಡಿಎಸ್‍ಓ ಜಿಲ್ಲಾಧ್ಯಕ್ಷೆ ಸೌಮ್ಯ, ಕಾವ್ಯಮ ಸ್ವಪ್ನ, ಪುಷ್ಪ, ಪರಶುರಾಮ್, ನೇತ್ರ, ಭಾರತಿ, ಜ್ಯೋತಿ ಕುಕ್ಕವಾಡ, ತಿಪ್ಪೆಸ್ವಾಮಿ ಮತ್ತಿತರರು ವಹಿಸಿದ್ದರು.