ತುರುವೇಕೆರೆ:
ತಾಲೂಕಿನ ಸಂಗಾಲಪುರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಒಂದರ ಮೇಲೊಂದರಂತೆ ಈಗಾಗಲೇ 10 ಹುಲ್ಲಿನ ಮೆದೆ (ಬಣವೆ) ಗಳು ಸುಟ್ಟು ಹೋಗಿರುವ ಘಟನೆ ಮಂಗಳವಾರ ನೆಡೆದಿದೆ.
ಸೋಮವಾರ ರಾತ್ರಿ ಹುಲ್ಲಿನ ಮದೆಗೆ ಕಾಣಿಸಿಕೊಂಡಿದೆ ಗ್ರಾಮಸ್ಥರು ಸೇರಿ ಬೆಂಕಿ ನಂದಿಸಿದ್ದಾರೆ. ನಂತರ ಇದ್ದಕ್ಕಿದ್ದಂತೆ ಸುಮಾರು 50 ಮೀಟರ್ ದೂರದಲ್ಲಿ ಮತ್ತೊಂದು ಹುಲ್ಲಿನ ಬಣವೆಗೆ ಬೆಂಕಿ ಕಾಣಿಸಿಕೊಂಡು ಉರಿಯಲಾರಂಬಿಸಿದೆ. ಕೂಡಲೇ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಮಂಗಳವಾರ ಒಂದೆರಡು ಗಂಟೆಗೊಮ್ಮೆ ಹುಲ್ಲಿನ ಮೆದೆಗಳಲ್ಲಿ ಬೆಂಕಿ ಕಾಣಿಸಿಕೊಂಡು ದಗದಗ ಹುರಿಯಲಾರಂಬಿಸಿ ಇದೇ ರೀತಿ ಸುಮಾರು 10 ಮೆದೆಗಳು ಸುಟು ಹೋಗಿತ್ತಿದ್ದು ಗ್ರಾಮಸ್ಥರು ಹಾಗೂ 2 ಆಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಹರ ಸಾಹಸ ಪಡುವಂತಾಗಿದೆ.
ರೈತರಾದ ರಂಗನಾಥ, ಗಂಗಾಧರ, ರುದ್ರಯ್ಯ, ಎಸ್.ಎಂ. ತಾತಯ್ಯ, ಮಹಾಲಿಂಗಯ್ಯ, ರುದ್ರಣ್ಣ, ಶಂಕರಣ್ಣ, ಮಂಜಣ್ಣ, ಸೇರಿದಂತೆ ಇನ್ನು ಹಲವು ರೈತರ ಮೆದೆಗಳು ಸುಟ್ಟು ಹೋಗಿದ್ದು ಸುಮಾರು ಮೂರ್ನಾಕು ಲಕ್ಷಕ್ಕೂ ಅಧಿಕ ನಷ್ಟ ಸಂಬವಿಸಿದೆ.ಚಿಂತೆಗೀಡಾದ ಗ್ರಾಮಸ್ಥರು: ಇದ್ದಕಿಂದಂತೆ ಹುಲ್ಲಿನ ಬಣವೆಗಳು ಬೆಂಕಿಯಿಂದ ಸುಟ್ಟು ಹೋಗುತ್ತಿದ್ದರಿಂದ ಗ್ರಾಮಸ್ಥರು ತಮ್ಮ ಬಣವೆಗಳನ್ನು ರಕ್ಷಿಸಿ ಕೊಳ್ಳುವುದೆ ಚಿಂತೆಯಾಗಿದೆ. ಈಗಾಗಲೇ 8 ಮೆದೆಗಳು ಸುಟ್ಟು ಹೋಗಿದ್ದು ರೈತರಲ್ಲಿ ಆತಂಕ ಹೆಚ್ಚಿದೆ.
ಸ್ಥಳದಲ್ಲಿಯೇ ಬೀಡು ಬಿಟ್ಟ ಅಗ್ನಿ ಶಾಮಕ ಧಳ: ಮಂಗಳವಾರ ಸರಣಿಯೋಪಾದಿಯಲ್ಲಿ ಹುಲ್ಲಿನ ಬಣವೆಗಳು ಬೆಂಕಿಗೆ ಆವುತಿಯಾಗುತ್ತಿದ್ದರಿಂದ ತುರುವೇಕೆರೆ ಹಾಗೂ ಚಿ.ನಾ.ಹಳ್ಳಿ ಅಗ್ನಿ ಶಾಮಕದಳದವರು ಸ್ಥಳದಲ್ಲಿಯೇ ಮಕ್ಕಾಂ ಹೂಡಿದ್ದಾರೆ. ಸಾಲು ಮೆದೆಗಳಿರುವುದರಿಂದ ಬೆಂಕಿ ಕಾಣಿಸಿಕೊಂಡ ಕೂಡಲೇ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ರೈತರು ವರ್ಷವಿಡಿ ಕಷ್ಟ ಪಟ್ಟು ಬೆಳದು ರಾಸುಗಳ ಮೇವಿಗಾಗಿ ಮೆದೆಒಟ್ಟಿ ಸಂಗ್ರಹಿಸಿಕೊಂಡಿದ್ದರು. ಮೆದೆಗಳು ಸುಟ್ಟು ಹೋಗಿದ್ದು ಮನೆಯಲ್ಲಿರುವ ರಾಸುಗಳನ್ನು ಸಾಕುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ದೇವರೇ ನಾವೇನಾದರೂ ಅನ್ಯಾಯ ಮಾಡಿದ್ದರೆ ನಮಗೆ ಶಿಕ್ಷೆ ಕೊಡಲಿ. ಅದು ಬಿಟ್ಟು ಮೂಕ ಪ್ರಾಣಿಗಳ ಆಹಾರವನ್ನು ಕಿತ್ತು ಅವುಗಳ ಹೊಟ್ಟೆಯ ಮೇಲೆ ಹೊಡೆಯಬೇಡಪ್ಪ ಎಂದು ರೈತ ಮಹಿಳೆಯರು ಗೋಳಿಡುತ್ತಿದ್ದ ದೃಷ್ಯ ಕರುಣಾಜನಕವಾಗಿತ್ತು.
ದೇವಸ್ಥಾನ ಕಿತ್ತಿದ್ದರ ಶಾಪನಾ: ಇತ್ತೀಚೆಗಷೆ ಶಿಥಿಲಾವಸ್ತೆಯಲ್ಲಿದ್ದ ಚನ್ನಕೇಶವ ಸ್ವಾಮಿ ದೇವಸ್ಥಾನವನ್ನು ಕೀಳಲಾಗಿತ್ತು. ನಂತರ ಪುನರ್ ಪ್ರತಿಷ್ಟಾಪನೆ ಮಾಡಲು ಆಯಾ ಮಾಡಿದ್ದು ಆಯಾ ಸರಿ ಇಲ್ಲವೆಂದು ಜ್ಯೋತಿಷಿಗಳು ತಿಳಿಸಿದ್ದು ಅದರ ದೋಷದಿಂದ ಈಗಾಗಿರಬಹುದೇ? ಎಂಬ ಚೆರ್ಚೆಗಳು ಗ್ರಾಮಸ್ಥರಲ್ಲಿ ಕೇಳಿಬರುತ್ತಿವೆ. ತಹಶೀಲ್ದಾರ್ ನಯೀಂ ಉನ್ನೀಸಾ, ಸಂಬಂದಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ತಾ|| ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ಸೇರಿದಮತೆ ಇತರರು ಸ್ಥಳಕ್ಕೆ ಭೇಟಿ ನೀಡಿ ಆಗಿರುವ ದುರಂತವನ್ನು ವೀಕ್ಷಿಸಿದರು. ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
