ದಾಬಸ್ ಪೇಟೆ:
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆತ್ಮಸ್ಥೆರ್ಯದಿಂದ ಪರೀಕ್ಷೆ ಎದುರಿಸಿ ಅತ್ಯುತ್ತಮ ಸಾಧನೆ ಮಾಡಿ ತಾಲ್ಲೂಕಿಗೆ ಹೆಸರು ತರಬೇಕು ಎಂಬ ಉದ್ದೇಶದಿಂದ ಪ್ರತಿವರ್ಷದಂತೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ನೆಲಮಂಗಲ ಶಾಸಕರಾದ ಎನ್.ಶ್ರೀನಿವಾಸ್ ಇಡೀ ಕ್ಷೇತ್ರದಾದ್ಯಂತ ನೀಡಿರುವುದು ಸಂತಸ ತಂದಿದೆ ಎಂದು ಮುಖಂಡ ಅಗಳಕುಪ್ಪೆ ಗೋವಿಂದರಾಜು ತಿಳಿಸಿದರು.
ಪಟ್ಟಣದ ಎಸ್.ಆರ್.ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು ಕಳೆದ ತಿಂಗಳು ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ೩೬ ಶಾಲೆಗಳ ೧೫೯೫ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಭಾವಿ ಮಾರ್ಗದರ್ಶನ, ಒತ್ತಡ ನಿವಾರಣೆ, ಆತ್ಮಸ್ಥೆರ್ಯ ತುಂಬುವ ಕಾರ್ಯಾಗಾರವನ್ನು ಶಾಸಕರ ನೇತೃತ್ವದಲ್ಲಿ ನಡೆಸಲಾಗಿತ್ತು, ಜೊತೆಗೆ ನೆಲಮಂಗಲ ಪಟ್ಟಣದಲ್ಲೂ ನಗರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ್ದರು,
ಈಗ ಪರೀಕ್ಷೆಗೆ ಧೈರ್ಯ ತುಂಬಲು ಪತ್ರ ಬರೆದು ಪರಿಕರಗಳನ್ನು ನೀಡಿದ್ದು ಜೊತೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಬ್ಯಾಗ್ ನೀಡುವ ಕೆಲಸವೂ ನಿರಂತರವಾಗಿ ನಡೆಸುತ್ತಾ ಬಂದಿದ್ದು ಶಿಕ್ಷಣಕ್ಕೆ ಅವರು ಕೊಡುವ ಪ್ರಾತಿನಿಧ್ಯ ಇದರಿಂದ ತಿಳಿಯುತ್ತದೆ, ಶಿಕ್ಷಣ ಪಡೆದ ಪ್ರತಿ ಮಗುವೂ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತದೆ ಎನ್ನುವ ಆಶಾಭಾವನೆ ಹೊಂದಿರುವ ಇಂತಹ ಶಾಸಕರು ನಮಗೆ ಸಿಕ್ಕಿರುವುದು ಪುಣ್ಯವೇ ಸರಿ ಎಂದರು.
ಬಿಇಓ ರಮೇಶ್ ಪ್ರಜಾಪ್ರಗತಿಯೊಂದಿಗೆ ಮಾತನಾಡಿ ಶಾಸಕರು ಶಿಕ್ಷಣ ಪ್ರೇಮಿಯಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೈಕ್ಷಣಿಕ ಕಾರ್ಯಾಗಾರ ಕಾರ್ಯಕ್ರಮ ನೆರವೇರಿಸಿದ್ದು ಮಾತ್ರವಲ್ಲದೆ ಪರೀಕ್ಷಾ ಪರಿಕರಗಳನ್ನು ನೀಡುತ್ತಿರುವುದು ಸಂತಸ ತಂದಿದ್ದು ಈ ಬಾರಿ ರಾಜ್ಯ ಪಠ್ಯಕ್ರಮದ ೧೪ ಸರ್ಕಾರಿ ಶಾಲೆಗಳು, ೧೮ ಅನುದಾನಿತ ಶಾಲೆಗಳು ಮತ್ತು ೨೬ ಅನುದಾನರಹಿತ ಶಾಲೆಗಳು ಒಟ್ಟು ೫೮ ಶಾಲೆಗಳ ವಿದ್ಯಾರ್ಥಿಗಳು ೧೩ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಿತ್ತಿದ್ದು ಪರೀಕ್ಷಾ ಚಟುವಟಿಕೆ ನಿರ್ವಹಿಸಲು ೧೩ ಮುಖ್ಯ ಅಧೀಕ್ಷಕರುಗಳು, ೦೨ ಉಪ ಮುಖ್ಯ ಅಧೀಕ್ಷಕರುಗಳು, ೧೩ ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ೧೬ ಸ್ಥಾನಿಕ ಜಾಗೃತ ದಳಾಧಿಕಾರಿಗಳು,೧೩ ಮೊಬೈಲ್ ಸ್ವಾಧಿನಾಧಿಕಾರಿಗಳು,೦೫ ಮಾರ್ಗಾಧಿಕಾರಿಗಳು,೦೪ ತಾಲ್ಲೂಕು ವಿಚಕ್ಷಣ ದಳಾಧಿಕರಿಗಳು, ೨೮೦ ಕೊಠಡಿ ಮೇಲ್ವಿಚಾರಕರು, ೧೩ ಕಛೇರಿ ಸಹಾಕರು,೧೬ ಡಿ ದರ್ಜೆ ನೌಕರರು ಪರೀಕ್ಷಾ ಕಾರ್ಯದಲ್ಲಿ ತೊಡಗಿದ್ದು, ಪರೀಕ್ಷೆ ಪಾರದರ್ಶಕವಾಗಿ ಮತ್ತು ಪಾವಿತ್ರ‍್ಯತೆಯಿಂದ ನಡೆಯುವ ಸಲುವಾಗಿ ಎಲ್ಲಾ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮೆರ ಅಳವಡಿಸಲಾಗಿದ್ದು ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯುವ ಜೊತೆಗೆ ಉತ್ತಮ ಅಂಕಗಳನ್ನು ಗಳಿಸಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಲಿ ಎಂದು ಶುಭಕೋರಿದರು.
ಶಾಲಾ ವಿದ್ಯಾರ್ಥಿನಿ ರಾನಿಯಾ ಬಾನು ಮಾತನಾಡಿ ಪಬ್ಲಿಕ್ ಪರೀಕ್ಷೆ ಎಂದರೆ ಭಯವಾಗುತ್ತದೆ ಆದರೆ ಅದನ್ನು ಹೋಗಲಾಡಿಸಲು ಶಾಸಕರಾದ ಎನ್.ಶ್ರೀನಿವಾಸ್ ವಿಶೇಷ ಕಾರ್ಯಾಗಾರ ಏರ್ಪಡಿಸಿ ವಿಷಯ ತಜ್ಞರಿಂದ ನಮ್ಮ ಹಲವು ಗೊಂದಲ ನಿವಾರಣೆಗೆ ಸಹಕರಿಸಿದ್ದಲ್ಲದೆ ಈಗ ಪರೀಕ್ಷಾ ಪರಿಕರ ನೀಡಿ ಪ್ರೇರೇಪಿಸಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ್, ಸಿದ್ದರಾಜು, ನಾರಾಯಣಸ್ವಾಮಿ, ಇಸಿಓ ಸಿದ್ದರಾಮೇಗೌಡ, ಪಾರ್ಥ, ಎಸ್.ಆರ್.ಎಸ್ ವಿದ್ಯಾನಿಕೇತನ ಶಾಲೆಯ ಆಡಳಿತಾಧಿಕಾರಿ ರಿಶ್ವಂತ್ ರಾಮ್, ಮುಖ್ಯ ಶಿಕ್ಷಕಿ ಮೀನಾಕುಮಾರಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
