ಗುಬ್ಬಿ
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೆ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಚುನಾವಣಾ ವಿಭಾಗ ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ಮತಗಟ್ಟೆಗಳಿಗೆ ಅಗತ್ಯವಿರುವ ಸಿಬ್ಬಂದಿಗಳ ನೇಮಕಾತಿ ಸೇರಿದಂತೆ ಒಂದು ಹಂತದ ಚುನಾವಣಾ ತರಬೇತಿಯನ್ನು ಈಗಾಗಲೆ ನೀಡಲಾಗಿದೆ.
ಗುಬ್ಬಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 213 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಮತಗಟ್ಟೆಗಳಲ್ಲಿಯೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಮಾಡಿಕೊಳ್ಳಲಾಗಿದೆ. 34 ಸೂಕ್ಷ್ಮ, 13 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಈಗಾಗಲೆ ಎಲ್ಲಾ ಮತಗಟ್ಟೆಗಳಿಗೂ ಮೂರು ಭಾರಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಡಾ:ಎಸ್.ಪ್ರೇಮ್‍ಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಚುನಾವಣಾ ಅಕ್ರಮಗಳ ಬಗ್ಗೆ ದೂರುಗಳು ಬಂದ 15 ನಿಮಿಷದಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಚುನಾವಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ತಾಲ್ಲೂಕಿನ ಶಿವರಾಂಪುರ, ಕಳ್ಳಿಪಾಳ್ಯ ಮತ್ತು ಅಂಕಸಂದ್ರಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ದಿನದ 24 ಗಂಟೆಯೂ ನಿಯೋಜಿಸಿರುವ ಸಿಬ್ಬಂದಿಗಳು ವಾಹನಗಳ ತಪಾಸಣೆ ಮಾಡಲಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಈಗಾಗಲೆ ಒಂದು ಹಂತದ ತರಬೇತಿಯನ್ನು ನೀಡಲಾಗಿದ್ದು ಮತ್ತೊಂದು ಹಂತದ ತರಬೇತಿಯನ್ನು ಏ.8 ರಂದು ನೀಡಲಾಗುತ್ತದೆ ಎಂದು ತಿಳಿಸಿದರು.
ಪ್ರತಿ ಮತಗಟ್ಟೆಗೆ ವಿಶೇಷವಾಗಿ ವ್ಹೀಲ್‍ಚೇರ್ ಸೌಲಭ್ಯ ಮತ್ತು ಎರಡು ಆಟೋಗಳನ್ನು ವ್ಯವಸ್ಥೆ ಮಾಡಲಾಗಿದೆ. ಚೇಳೂರು ಹೋಬಳಿ ದೇವರಹಳ್ಳಿ ಮತಗಟ್ಟೆಯನ್ನು ಶೇಷೆನಹಳ್ಳಿಗೆ ಬದಲಾಯಿಸಲಾಗಿದೆ. ಹೆಸರಹಳ್ಳಿ ಮತಗಟ್ಟೆಯನ್ನು ಅಲ್ಲಿಯೆ ಇರುವ ಅಂಗನವಾಡಿ ಕೇಂದ್ರಕ್ಕೆ ಬದಲಾಯಿಸಲಾಗಿದೆ. ಗುಬ್ಬಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1.82.521 ಮತದಾರರಿದ್ದು, 91641 ಪುರುಷ, 90863 ಮಹಿಳೆಯರು ಮತ್ತು 17 ಇತರೆ ಮತದಾರರಿದ್ದಾರೆ. 2164 ಅಂಗವಿಕಲ ಮತದಾರರಿದ್ದಾರೆಂದು ತಿಳಿಸಿದ ಅವರು, 17 ಮಂದಿ ಸೆಕ್ಟರಲ್ ಆಫೀಸರ್, 9 ಪ್ಲಯಿಂಗ್ ಸ್ಕ್ವಾಡ್, ಎರಡು ವೀಡಿಯೋ ತಂಡವನ್ನು ಚುನಾವಣಾ ಕಾರ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಎಂ.ಮಮತಾ, ಶಿರಸ್ತೆದಾರ್ ಗೋವಿಂದರೆಡ್ಡಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








