ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ದತೆ ಪೂರ್ಣ: ಮಂಜುನಾಥ ಪ್ರಸಾದ್

ಬೆಂಗಳೂರು

        ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳಾದ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಕ್ಷೇತ್ರಗಳಿಗೆ ಏಪ್ರಿಲ್ 18 ರಂದು ಮತದಾನ ನಡೆಯಲಿದ್ದು, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

         ಬೆಂಗಳೂರಿನ ಚುನಾವಣೆ ಸಿದ್ಧತೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಮೂರು ಕ್ಷೇತ್ರಗಳಲ್ಲಿ ಒಟ್ಟು 8,514 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೂ ಓರ್ವ ಬೂತ್ ಅಧಿಕಾರಿ ಹಾಗೂ 3 ಸಹಾಯಕ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಸುಮಾರು 1 ಸಾವಿರ ಸಿಬ್ಬಂದಿ ಈಗಾಗಲೇ ಕಾರ್ಯ ಆರಂಭಿಸಿದ್ದು, ಹೆಚ್ಚುವರಿಯಾಗಿ 42 ಸಾವಿರ ಸಿಬ್ಬಂದಿಯನ್ನು ಮುಂದಿನ ಒಂದು ವಾರದಲ್ಲಿ ನೇಮಕ ಮಾಡಿಕೊಂಡು, ತರಬೇತಿ ನೀಡಲಾಗುವುದು. ಬೆಂಗಳೂರು ಜಿಲ್ಲೆಯಲ್ಲಿ 46.32 ಕೋಟಿ ಪುರುಷ ಹಾಗೂ 42.48 ಕೋಟಿ ಮಹಿಳಾ ಮತದಾರರು ಸೇರಿ ಒಟ್ಟು 88.81 ಕೋಟಿ ಮತದಾರರಿದ್ದಾರೆ ಎಂದರು.

        ಬೆಂಗಳೂರಿನ ಮೂರು ಜಿಲ್ಲೆಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮಾರ್ಚ್ 26 ಹಾಗೂ ನಾಮಪತ್ರ ಹಿಂಪಡೆಯಲು ಮಾ. 29 ಕೊನೆಯ ದಿನಾಂಕವಾಗಿರಲಿದೆ. ಏ.18ರಂದು ಮತದಾನ ನಡೆಯಲಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿದೆ. ಮೇ 27ಕ್ಕೆ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

         ಚುನಾವಣಾ ನೀತಿ ಸಂಹಿತೆ ಜಾರಿಯಾದ ಕ್ಷಣದಿಂದಲೇ ಎಲ್ಲ ಚುನಾವಣಾ ಸಿಬ್ಬಂದಿಯ ರಜೆಗಳನ್ನು ಕಡಿತಗೊಳಿಸಲಾಗಿದೆ. ಬಸ್‍ಗಳು, ಸ್ಕೈವಾಕ್ ಮತ್ತಿತರ ಪ್ರದೇಶಗಳಲ್ಲಿ ಲಗತ್ತಿಸಲಾಗಿದ್ದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗುತ್ತಿದ್ದು, ಸೋಮವಾರ ಸಂಜೆ ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರಿ ವೆಬ್ಸೈಟ್ ಗಳಲ್ಲಿ ಮುಖ್ಯಮಂತ್ರಿಗಳು ಸೇರಿ ಇತರ ರಾಜಕಾರಣಿಗಳ ಭಾವಚಿತ್ರಗಳಿದ್ದಲ್ಲಿ ಅದನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.

         ಚುನಾವಣಾ ಸಿದ್ಧತೆಗಳು ಹಾಗೂ ಪ್ರಕ್ರಿಯೆಗಳ ಮೇಲೆ ನಿಗಾ ಇರಿಸಲು 72 ತಂಡಗಳನ್ನು ರಚಿಸಲಾಗಿದೆ. 75 ಸ್ಥಿರ ನಿಗಾ ಪಡೆ ಹಾಗೂ 24 ವಿಡಿಯೋ ತಂಡಗಳನ್ನು ನಿಯೋಜಿಸಲಾಗಿದೆ. ಚುನಾವಣಾ ವೆಚ್ಚದ ಮೇಲೆ ನಿಗಾ ಇರಿಸಲು 24 ಸಹಾಯಕ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಪ್ರತಿ ಅಭ್ಯರ್ಥಿಗೆ 70 ಲಕ್ಷ ರೂ. ಚುನಾವಣಾ ವೆಚ್ಚದ ಮಿತಿ ವಿಧಿಸಲಾಗಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುನ್ನ ಚುನಾವಣಾಧಿಕಾರಿಯ ಅನುಮತಿ ಪಡೆಯುವುದು ಕಡ್ಡಾಯ. ಅಂತಹ ಕಾರ್ಯಕ್ರಮಗಳ ಮೇಲೆ ಜಾಗೃತ ಪಡೆ ನಿಗಾ ವಹಿಸಲಿದೆ.

          ಪ್ರತಿ ರಾಜ್ಯಕ್ಕೆ 40 ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಲು ಪಕ್ಷಗಳಿಗೆ ಆಯೋಗ ಅನುಮತಿ ಕಲ್ಪಿಸಿದೆ. ಈ ಪ್ರಚಾರಕರ ಚುನಾವಣಾ ವೆಚ್ಚವನ್ನು ಆಯಾ ಪಕ್ಷಗಳು ಭರಿಸಲಿವೆ. ಆದರೆ, ಅವರೊಂದಿಗೆ ಅಭ್ಯರ್ಥಿಯೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಲ್ಲಿ ಶೇ.50ರಷ್ಟು ವೆಚ್ಚವನ್ನು ಅವರೆ ಭರಿಸಬೇಕಾಗುತ್ತದೆ ಎಂದರು.

         ಬೆಂಗಳೂರು ಉತ್ತರ ಜಿಲ್ಲೆಯ ಅಭ್ಯರ್ಥಿಗಳು ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ಕೇಂದ್ರ ಜಿಲ್ಲೆಯ ಅಭ್ಯರ್ಥಿಗಳು ಬಿಬಿಎಂಪಿ ಪ್ರಧಾನ ಕಚೇರಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಅಭ್ಯರ್ಥಿಗಳು ಬೆಂಗಳೂರು ದಕ್ಷಿಣ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್, ಬೆಂಗಳೂರು ಕೇಂದ್ರ ಜಿಲ್ಲೆಗೆ ಅಪರ ಆಯುಕ್ತ ಡಾ.ಎಂ.ಲೋಕೇಶ್ ಹಾಗೂ ದಕ್ಷಿಣ ಜಿಲ್ಲೆಗೆ ಅಪರ ಆಯುಕ್ತ ಎಸ್.ಎಸ್.ನಕುಲ್ ಅವರನ್ನು ಚುನಾವಣಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ.

         ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್, ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಳೆದ ಚುನಾವಣೆಯಲ್ಲಿ ನಗರದಲ್ಲಿ 300 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಭಾಗಿಯಾದವರು ಹಾಗೂ ರೌಡಿ ಶೀಟರ್ ಹಾಗೂ ಅಪರಾಧ ಹಿನ್ನೆಲೆಯುಳ್ಳವರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ನಿಗಾ ಇರಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ಕೂಡ ನಿರ್ವಹಣಾ ಸಮಿತಿ ಗಮನ ಹರಿಸಲಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap