ದಾವಣಗೆರೆ :
ಮಧ್ಯ ಕರ್ನಾಟಕ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿನ ಅಭ್ಯರ್ಥಿ ಯಾರೆಂಬ ಗೊಂದಲಕ್ಕೆ ಬಹುತೇಕ ತೆರೆ ಬಿದ್ದಂತಾಗಿದೆ.
ಚುನಾವಣೆ ಘೋಷಣೆಯಾಗಿ, ನಾಮಪತ್ರ ಸಲ್ಲಿಕೆಗೆ ದಿನಾಂಕ ಸಮೀಪಿಸುತ್ತಿದ್ದರೂ ಶನಿವಾರದ ವರೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪನವರೋ ಅಥವಾ ಇವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್‍ರವೋ ಎಂಬ ಗೊಂದಲ ಕಾರ್ಯಕರ್ತರಲ್ಲಿ ಮುಂದುವರೆದಿತ್ತು. ಆದರೆ, ಶನಿವಾರ ರಾತ್ರಿ ಕಾಂಗ್ರೆಸ್ ಹೈಕಮಾಂಡ್ ದಾವಣಗೆರೆ ಕ್ಷೇತ್ರಕ್ಕೆ ಶಿವಶಂಕರಪ್ಪನವರ ಹೆಸರು ಘೋಷಿಸಿ, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವುದಲ್ಲದೇ, ಬಹುತೇಕರಲ್ಲಿ ಅಚ್ಚರಿಯನ್ನೂ ಮೂಡಿಸಿದೆ.
ಸತತ ಐದು ಬಾರಿ ಶಾಸಕರಾಗಿ ಸತತ ಆಯ್ಕೆಯಾಗಿರುವ ಶಾಮನೂರು ಶಿವಶಂಕರಪ್ಪನವರು 1980ರಲ್ಲಿ ಕಾಂಗ್ರೆಸ್(ಯು)ನಿಂದ ಸ್ಪರ್ಧಿಸಿ 86,167 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಬಳಿಕ 1998ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ ಶಾಮನೂರು ಶಿವಶಂಕರಪ್ಪನವರು 3,43,704 ಮತ ಪಡೆದು, 3,32,372 ಮತ ಪಡೆದಿದ್ದ ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪನವರನ್ನು ಸೋಲಿಸಿ ಒಮ್ಮೆ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದರು. ತದ ನಂತರ ನಡೆದ ರಾಜಕೀಯ ಬೆಳವಣಿಗೆಯಿಂದ ಮತ್ತೊಂದೇ ವರ್ಷದಲ್ಲಿ ಅಂದರೆ, 1999ರಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ, 3,82,700 ಮತಗಳನ್ನು ಪಡೆದು, 3,98,969 ಮತ ಪಡೆದ ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪನವರಿಂದ ಸೋಲುಂಡಿದ್ದರು.
ಅಂದಿನಿಂದ ಇಲ್ಲಿಯ ವರೆಗೂ ಲೋಕಸಭೆ ಕಡೆಗೆ ತಿರುಗಿ ನೋಡದ ಶಾಮನೂರು ಶಿವಶಂಕರಪ್ಪ, ತಮ್ಮ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್‍ಗೆ ಲೋಕಸಭಾ ಕ್ಷೇತ್ರ ಬಿಟ್ಟು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಿರಂತರ ಸ್ಪರ್ಧಿಸಿ, ಸತತ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎಂದೇ ಹೆಸರು ಪಡೆದಿದ್ದಾರೆ. ಆದರೆ, ಈ ಬಾರಿ ಲೋಕಸಭೆಯಿಂದ ಶಾಮನೂರು ಶಿವಶಂಕರಪ್ಪನವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ಆದ್ದರಿಂದ ಈ ಬಾರಿ ತಾವು ಲೋಕಸಭೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಸಂಸತ್‍ಗೆ ಪ್ರವೇಶಿಸಿ ನಂತರ ದಕ್ಷಿಣ ಕ್ಷೇತ್ರದಿಂದ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿಕೊಂಡು ಬಂದು ಮಂತ್ರಿ ಮಾಡುವ ಲೆಕ್ಕಚಾರ ಹಾಕಿಕೊಂಡಿದ್ದಾರೆಂಬ ವದಂತಿ ಕ್ಷೇತ್ರದಾದ್ಯಂತ ಕೇಳಿ ಬರುತ್ತಿದೆ.
ವರ್ಷದ ಹಿಂದಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪಡೆದ ಮತಗಳ ಆಧಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಗೆಲುವಿನ ಲೆಕ್ಕಾಚಾರ ಹಾಕಲು ಶುರು ಮಾಡಿದ್ದು, 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲೂ ವರವಾಗಲಿದೆ ಎಂಬ ಲೆಕ್ಕಚಾರದಲ್ಲಿದ್ದರೆ, ಅದೇ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಡೆದ ಮತಗಳನ್ನು ಕೂಡಿ ಬಿಜೆಪಿಗಿಂತ ಅಧಿಕ ಮತಗಳು ಮೈತ್ರಿಕೂಟದ ಕಾಂಗ್ರೆಸ್-ಜೆಡಿಎಸ್‍ಗೆ ಇರುವುದರಿಂದ ಮೈತ್ರಿ ಪಕ್ಷಗಳಲ್ಲಿ ಹುಮ್ಮಸ್ಸು ಮೂಡಿಸಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ 8 ಕ್ಷೇತ್ರಗಳಿಂದ ಬಿಜೆಪಿ 5,41,091 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಪಡೆದ 4,48,825 ಮತಗಳು ಹಾಗೂ ಜೆಡಿಎಸ್ ಪಡೆದ 1,25,980 ಮತಗಳು ಸೇರಿ ಮೈತ್ರಿ ಪಕ್ಷಗಳು ಒಟ್ಟು 5,74,805 ಮತಗಳನ್ನು ಪಡೆದಿದ್ದವು.ಒಟ್ಟಿನಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪನವರಿಗೆ ಅನಿರೀಕ್ಷಿತವಾಗಿ ಕಾಂಗ್ರೆಸ್ ಟಿಕೆಟ್ ಒಲದಿರುವುದರಿಂದ ಚುನಾವಣಾ ಕಣವೂ ಬಿಸಲ ಝಳದಂತೆ, ದಿನೇ, ದಿನೇ ಕಾವೇರುವ ಸಾಧ್ಯತೆಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ