ಹಾವೇರಿ
ಹಾವೇರಿ ಲೋಕಸಭಾ ಕ್ಷೇತ್ರ ಹಾವೇರಿ ಮತ್ತು ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಪಾರದರ್ಶಕವಾದ ಚುನಾವಣೆ ನಡೆಸಲು ಅಗತ್ಯ ಸಂದರ್ಭದಲ್ಲಿ ಪರಸ್ಪರ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡು ಉಭಯ ಜಿಲ್ಲೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸೋಣ ಎಂದು ಜಿಲ್ಲಾಧಿಕಾರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹೇಳಿದರು.
ಹಾವೇರಿ ಲೋಕಸಭಾ ಚುನಾವಣಾ ಸಿದ್ಧತೆ ಕುರಿತಂತೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಮತ್ತು ವಿವಿಧ ನೋಡಲ್ ಅಧಿಕಾರಿಗಳ ಸಮನ್ವಯ ಸಮಿತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಎರಡು ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಗದಗನ ಶಿರಹಟ್ಟಿ, ರೋಣ ಹಾಗೂ ಗದಗ ವಿಧಾನಸಭಾ ಕ್ಷೇತ್ರ ಹಾವೇರಿಯ ಹಾನಗಲ್, ಹಾವೇರಿ, ಬ್ಯಾಡಗಿ, ಹಿರೇಕೆರೂರು, ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳು ಒಳಗೊಂಡಂತೆ ಎಂಟು ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ. ಈ ಚುನಾವಣೆಯ ಯಶಸ್ವಿಗಾಗಿ ಗದಗ ಮತ್ತು ಹಾವೇರಿ ಜಿಲ್ಲೆಯ ಚುನಾವಣಾಗೆ ನಿಯೋಜಿತವಾದ ಎಲ್ಲ ಅಧಿಕಾರಿಗಳು ಯಶಸ್ವಿಯಾಗಿ ಚುನಾವಣೆ ನಡೆಸಲು ಸಿದ್ಧರಾಗೋಣ. ಯಾವುದೇ ವಿಷಯಗಳಿದ್ದರೂ ಪರಸ್ಪರ ವಿನಿಮಯಮಾಡಿಕೊಂಡು ಪಾರದರ್ಶಕವಾಗಿ, ಯಶಸ್ವಿಯಾಗಿ ಚುನಾವಣೆ ನಡೆಸೋಣ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು, ಲೋಕಸಭಾ ಕ್ಷೇತ್ರದ ವಿಧಾನಸಭಾವಾರು ಬೂತ್‍ಗಳ ಸಿದ್ಧತೆ, ರ್ಯಾಂಡಮೈಜೇಶನ್ ಪ್ರಕ್ರಿಯೆ, ದೂರುಗಳ ನಿರ್ವಹಣೆ, ಮಾದರಿ ನೀತಿ ಸಂಹಿತೆಯ ಪ್ರಕರಣಗಳು, ಚೆಕ್‍ಪೋಸ್ಟ್‍ಗಳ ವಿವರ ಕಾರ್ಯನಿರ್ವಹಣೆ, ಎಸ್.ಎಸ್.ಟಿ., ಎಫ್.ಎಸ್.ಟಿ., ವಿಡಿಯೋ ವಿವಿಂಗ್ ಟೀಮ್‍ಗಳ ವಾಹನಗಳಿಗೆ ಜಿಪಿಎಸ್ ಆಧಾರಿತ ಟ್ರಾಕಿಂಗ್ ವ್ಯವಸ್ಥೆ, ವಿವಿಪ್ಯಾಟ್, ಇ.ವಿ.ಎಂ.ಗಳ ಪ್ರಾತ್ಯಕ್ಷತೆ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳು, ಮದ್ಯ ಸಾಗಾಣಿಕೆ ಹಾಗೂ ಮಾರಾಟ ಕುರಿತಂತೆ ನಿಯಂತ್ರಣ, ವಿವಿಜಿಲ್, ಸುವಿಧಾ ಆ್ಯಪ್ ಕಾರ್ಯನಿರ್ವಹಣೆ ಕುರಿತಂತೆ ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಸಿದ್ಧತೆಗಳ ಕುರಿತಂತೆ ಪರಿಶೀಲಿಸಿದರು.
ಮತದಾನದ ದಿನ ವಿಶೇಷ ಚೇತನರಿಗೆ ವಾಹನ ಸೌಲಭ್ಯ, ನೋಡಲ್ ಅಧಿಕಾರಿಗಳ ನೇಮಕ ಕುರಿತಂತೆ ಚರ್ಚಿಸಲಾಯಿತು. ಹೊಸ ಮತದಾರರ ನೋಂದಣಿ , ಎಪಿಕ್ ಕಾರ್ಡ್‍ಗಳ ವಿತರಣೆ ಕುರಿತಂತೆ ಚರ್ಚಿಸಲಾಯಿತು.
ಮತದಾನದ ನಂತರ ಮತ ಪೆಟ್ಟಿಗೆಗಳನ್ನು ಹಾವೇರಿ ಜಿಲ್ಲಾ ಕೇಂದ್ರ ಮತ ಎಣಿಕೆ ಕೇಂದ್ರಕ್ಕೆ ಸುರಕ್ಷಿತವಾಗಿ ಸಾಗಾಣಿಕೆ ಕುರಿತಂತೆ ಚರ್ಚಿಸಲಾಯಿತು. ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಚುನಾವಣೆ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಹಾವೇರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ, ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಎಂಟು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರಗಳು, ಉಭಯ ಜಿಲ್ಲೆಗಳ ನೋಡಲ್ ಅಧಿಕಾರಿಗಳು, ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ