ಬೆಂಗಳೂರು
ಶಿಕ್ಷಕರ ಕ್ಷೇತ್ರದ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇಂದು ಬೆಂಗಳೂರಿನ ಮೌರ್ಯ ವೃತ್ತದ ಬಳಿ ವಿಧಾನ ಪರಿಷತ್ ಸದಸ್ಯರ ಜೊತೆ ಪ್ರತಿಭಟನೆ ನಡೆಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಅನುದಾನರಹಿತ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್, ಸೇವಾಭದ್ರತೆ, ಬಾಕಿ ಆರ್ ಟಿ ಇ ಹಣ ಬಿಡುಗಡೆ, ಆರೋಗ್ಯ ವಿಮೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಯನ್ನು ತಕ್ಷಣ ನೆರವಿವೆರಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು.
ಖಾಸಗಿ ಶಾಲೆಗಳ ಶಿಕ್ಷಕರ ಸಹಾಯಕ್ಕೆ ಸರ್ಕಾರ ಕೂಡಲೇ ಧಾವಿಸಬೇಕು, ಈಗಾಗಲೇ ಈ ವಿಷಯವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಅಗತ್ಯಬಿದ್ದರೆ ಮತ್ತೊಂದು ಪತ್ರವನ್ನು ಬರೆದು ಒತ್ತಾಯಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೇಳಿರು.
ಇಂತಹ ಸಮಯದಲ್ಲಿ ಸರ್ಕಾರ ಮಾನವೀಯತೆ ಪ್ರದರ್ಶನ ಮಾಡಬೇಕು, ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಈ ವಿಚಾರವನ್ನು ತಾವು ಮುಂದಿನ ಸಂಸತ್ ಅಧಿವೇಶನಲ್ಲಿ ಕೇಂದ್ರ ಸರ್ಕಾರದ ಗಮನಕ್ಕೂ ತರುತ್ತೇನೆ, ಅವಶ್ಯ ಬಿದ್ದರೆ ಅಧಿವೇಶನದಲ್ಲಿ ಚರ್ಚೆಗೂ ತಂದು ಮಾತನಾಡುವುದಾಗಿ ಎಚ್.ಡಿ.ದೇವೇಗೌಡ ತಿಳಿಸಿದರು.
ರಾಷ್ಟ್ರೀಯ ಏಕರೂಪ ಶಿಕ್ಷಣ ನೀತಿಗೆ ನಮ್ಮ ವಿರೋಧವಿದೆ. ಕೇಂದ್ರ ಸರ್ಕಾರ ಏಕರೂಪ ಶಿಕ್ಷಣ ಜಾರಿಗೆ ತರಲು ಹೊರಟಿದೆ, ಇದರಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗಲಿವೆ, ಯಾರಿಗೂ ಇದರಿಂದ ಉಪಯೋಗವಾಗುವುದಿಲ್ಲ. ನಾನು ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ. ಅಂಕಿ- ಅಂಶದ ಸಮೇತ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.ಶಿಕ್ಷಕರ ಸಮಸ್ಯೆ ಪರಿಹಾರ ಮಾಡದೇ ಹೋದರೆ ಹೋರಾಟ ಖುದ್ದು ಹೋರಾಟಕ್ಕೆ ಇಳಿಯುತ್ತೇನೆ. ಇದು ಮೊದಲ ಹಂತದ ಹೋರಾಟ ಅಷ್ಟೇ ಸರ್ಕಾರಗಳು ಸ್ಪಂದಿಸದೇ ಹೋದರೆ ಮತ್ತೆ ಉಗ್ರವಾದ ಹೋರಾಟ ಮಾಡುತ್ತೇನೆ ಎಂದು ಎಚ್.ಡಿ.ದೇವೇಗೌಡ ತಿಳಿಸಿದರು.ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಪರಿಷತ್ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಬೋಜೇಗೌಡ, ಕೆ ಟಿ ಶ್ರೀಕಂಠೇಗೌಡ, ತಿಪ್ಪೇಸ್ವಾಮಿ, ಮಾಜಿ ಪರಿಷತ್ ಸದಸ್ಯ ಟಿ ಎ ಶರವಣ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
