ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಕಡ್ಡಾಯ : ಸುರೇಶ್ ಕುಮಾರ್

ಬೆಂಗಳೂರು

    ರಾಜ್ಯದ ಕೇಂದ್ರ ಪಠ್ಯಕ್ರಮದ ಸಿಬಿಎಸ್‍ಸಿ, ಐಪಿಎಸ್‍ಸಿ, ಶಾಲೆಗಳು ಸೇರಿದಂತೆ, ಎಲ್ಲಾ ಶಾಲೆಗಳಲ್ಲೂ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಮಕ್ಕಳಿಗೆ ಕಡ್ಡಾಯವಾಗಿ ಕಲಿಸಬೇಕು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

    ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ, ಸುಮಾರು 150 ಶಾಲೆಗಳಲ್ಲಿ ಕನ್ನಡವನ್ನು ಮಕ್ಕಳಿಗೆ ಬೋಧಿಸುತ್ತಿಲ್ಲ. ಸಿಬಿಎಸ್‍ಸಿ, ಐಪಿಎಸ್‍ಸಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಬೋಧಿಸುವ ಶಿಕ್ಷಕರಿಗೆ ಕನ್ನಡದ ಬಗ್ಗೆ ದುರ್ಬಲತೆ ತೋರುತ್ತಿದೆ. ಬೆಂಗಳೂರಿನಲ್ಲಿ ಕನ್ನಡ ಭಾಷೆ ಕಲಿಯದೆ, ಬದುಕಬಹುದೆನ್ನುವ ಆಶಯ ಅವರದ್ದಾಗಿದ್ದರೆ ಅದನ್ನು ಖಂಡಿಸಬೇಕು ಎಂದರು..

   ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶುಕ್ರವಾರ ಬೆಂಗಳೂರು ದಕ್ಷಿಣ, ಉತ್ತರ ಜಿಲ್ಲೆಯ 2015ರ ಕನ್ನಡ ಭಾಷಾ ಕಲಿಕಾ ಅಧಿನಿಯಮ 2015 ರಡಿ ರಚಿಸಲಾದ ಕನ್ನಡ ಭಾಷಾ ಕಲಿಕಾ ನಿಯಮಗಳು – 2017 ಅನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವ ಸಂಬಂಧ ಸಿಬಿಎಸ್‍ಸಿ, ಐಪಿಎಸ್‍ಸಿ, ಕೇಂದ್ರೀಯ ವಿದ್ಯಾಲಯಗಳ ಪ್ರಾಂಶುಪಾಲರ ಹಾಗೂ ಕನ್ನಡ ಭಾಷಾ ಬೋಧನಾ ಶಿಕ್ಷಕರಿಗೆ ಕಾರ್ಯಾಗಾರ, ಸಮೂಹದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕರ್ನಾಟಕ ಸರ್ಕಾರ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಮೊದಲನೇ ಅಥವಾ ದ್ವಿತೀಯ ಭಾಷೆಯಾಗಿ ಮಕ್ಕಳಿಗೆ ಬೋಧಿಸುವಂತೆ, ಕಾಯ್ದೆ ರೂಪಿಸಿ, ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಹಲವು ಶಾಲೆಗಳು ನಿರ್ಲಕ್ಷ್ಯಿಸುತ್ತಿರುವುದು ಬೇಸರತರಿಸಿದೆ ಎಂದರು.

    ಕೆಲವು ಶಾಲೆಗಳಲ್ಲಿ ಕನ್ನಡ ಶಿಕ್ಷಕರೇ ಇಲ್ಲ, ಕೆಲವರಿಗೆ ಕನ್ನಡ ಕಲಿಸುವ ಅರ್ಹತೆ ಇದ್ದರೂ, ಅದನ್ನು ಬೋಧಿಸುವ ಆಸಕ್ತಿ ತೋರಿಸುತ್ತಿಲ್ಲ. ಇಂತಹ ಪ್ರವೃತ್ತಿಯನ್ನು ಸಹಿಸಲು ಸರ್ಕಾರ ಸಿದ್ಧವಿಲ್ಲ. ಒಮ್ಮೆ ಕಾಯ್ದೆ ಜಾರಿಯಾದ ಮೇಲೆ ಅದನ್ನು ಪಾಲಿಸುವುದು ಎಲ್ಲಾ ಶಾಲೆಗಳ ಶಿಕ್ಷಕರ ಧರ್ಮ ಹಾಗೂ ಕರ್ತವ್ಯವೂ ಹೌದು. ಕನ್ನಡವನ್ನು ಅಕ್ಕರೆಯಿಂದ ಕಲಿಸಿ, ಯಾವುದೇ ಕಾನೂನಿನ ಭಯದಿಂದ ಬೋಧಿಸಬೇಡಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

     ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಒಂದು ಅಥವಾ ಎರಡನೇ ಭಾಷೆಯಾಗಿ ಕಲಿಸಲೇಬೇಕು. ಮೂರನೇ ಭಾಷೆಯಾಗಿ ಕಲಿಸಲು ಅವಕಾಶವಿಲ್ಲ. ಶಿಕ್ಷಣದಲ್ಲಿ ಕನ್ನಡ ಉಳಿದರೆ ಮಾತ್ರ ಆ ಭಾಷೆ ಅಭಿವೃದ್ಧಿಯಾಗಲು ಸಾಧ್ಯ. ಬೆಂಗಳೂರಿನಲ್ಲಿ ನಾವು ವಾಸಿಸುತ್ತಿದ್ದೇವೆ ಎಂದ ಮೇಲೆ ಕಾವೇರಿ ನೀರು ಕುಡಿಯಲೇಬೇಕು. ಕಾವೇರಿ ನೀರು ಕುಡಿದ ಮೇಲೆ ಕನ್ನಡವನ್ನು ಮಾತನಾಡಲೇಬೇಕು. ಇದು ಈ ನೆಲದ ನಿಯಮ. ಹಾಗಾಗಿ ಪ್ರತಿಶಾಲೆಯ ಶಿಕ್ಷಕರು ಕನ್ನಡ ಭಾಷೆಯನ್ನು ಪ್ರೀತಿಯಿಂದ ಬೋಧಿಸಿ, ಬೆಳೆಸಬೇಕೆಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್, ಉಪನಿರ್ದೇಶಕ ಜಯರಂಗ, ರಾಜೇಂದ್ರ ಸೇರಿದಂತೆ, ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link