ದಾವಣಗೆರೆ:
ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆಳುವವರಿಗೆ ಮಾತಿನ ಚಾಟಿ ಬೀಸುತ್ತಿದ್ದ ಮಾಸ್ಟರ್ ಹಿರಣ್ಣಯ್ಯ, ಶಾಶ್ವತ ವಿರೋಧ ಪಕ್ಷದ ನಾಯಕರಂತೆ ಕಾರ್ಯನಿರ್ವಹಿಸಿದ್ದರು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಸಾಹಿತಿ ಬಿ.ಎನ್.ಮಲ್ಲೇಶ್ ಸ್ಮರಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಪರಿಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆ, ಅಭಿನಂದನಾ ಸಮಾರಂಭ ಹಾಗೂ ಮಾಸ್ಟರ್ ಹಿರಣ್ಣಯ್ಯನವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿರಣ್ಣಯ್ಯನವರು ಮಾತನಾಡಿದರೆ, ರಾಜಕಾರಣಿಗಳೇ ಹೌಹಾರುತ್ತಿದ್ದರು. ಅವರ ಮಾತಿನಲ್ಲಿ ಅಂತಹದ್ದೊಂದು ಹರಿತ, ಚಮತ್ಕಾರ ಇತ್ತು ಎಂದು ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಸಿಎಂ ಎಸ್.ನಿಜಲಿಂಗಪ್ಪರಂತಹ ಘಟಾನುಘಟಿ ರಾಜಕೀಯ ನಾಯಕರನ್ನೂ ತಮ್ಮ ಮಾತಿನ ಚಾಟಿಯಿಂದ ಬೆಚ್ಚಿ ಬೀಳಿಸುತ್ತಿದ್ದ ಹಿರಣಯ್ಯನವರು ಇಂದಿರಾ ಗಾಂಧಿ, ಎಸ್.ನಿಜಲಿಂಗಪ್ಪರಂತಹವರನ್ನೂ ಎದುರು ಹಾಕಿಕೊಂಡು ನಾಟಕ ಪ್ರದರ್ಶಿಸಿದ್ದರು. ಸಮಾಜದ ಭ್ರಷ್ಟ ವ್ಯವಸ್ಥೆಯನ್ನು ಸುಧಾರಿಸಲು ತಮ್ಮಿಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಬಣ್ಣಿಸಿದರು.
ಹಿರಣ್ಣಯ್ಯನವರಿಗೆ ಮಾತೇ ಬಂಡವಾಳವಾಗಿತ್ತು. ಬರೀ ಮಾತಿನಿಂದಲೇ ಪ್ರೇಕ್ಷಕರನ್ನು ಹೇಗೆ ಹಿಡಿದಿಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದರು. ತಮ್ಮ ಮೊನಚಾದ ಮಾತಿನಿಂದಲೇ ಕನ್ನಡ ರಂಗಭೂಮಿಯ ದೀಪ ಬೆಳಗಿದ ಮಹಾನ್ ರಂಗ ಕಲಾವಿದ ಎಂದು ವಿಶ್ಲೇಷಿಸಿದರು.
ಪೊಲೀಸರೆಂದರೆ ಸಾಮಾನ್ಯವಾಗಿ ದರ್ಪಕ್ಕೆ ಹಾಗೂ ಕೆಟ್ಟ ಭಾಷೆ ಮಾತನಾಡುವವರಲ್ಲಿ ಹೆಸರುವಾಸಿ. ಆದರೆ, ಖಾಕಿಯಲ್ಲೂ ಮನುಷ್ಯತ್ವ ಇದೆ ಎಂಬುದಕ್ಕೆ ಎಸಿಬಿ ನಿವೃತ್ತ ಎಸ್ಪಿ ಜಿ.ಎ.ಜಗದೀಶ್ ಸಾಕ್ಷಿಯಾಗಿದ್ದಾರೆ. ಕಾನೂನು ಪಾಲಿಸುವುದರ ಜೊತೆ, ಜೊತೆಗೆ ನೊಂದವರ ಪರವಾಗಿ ಕೆಲಸ ಮಾಡುವಂತಹ ಜಗದೀಶ್ ಅವರಂತಹ ದಕ್ಷ ಅಧಿಕಾರಿಗಳು ಸಮಾಜಕ್ಕೆ ಅತ್ಯವಶ್ಯವಾಗಿಬೇಕಾಗಿದ್ದಾರೆ ಎಂದರು.
ತಮ್ಮ ನಯ-ವಿನಯ, ಜನಸ್ನೇಹಿ ವ್ಯಕ್ತಿತ್ವದಿಂದ ನಿವೃತ್ತ ಪೊಲೀಸ್ ಅಧಿಕಾರಿ ಜಗದೀಶ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸೇವಾವಧಿಯಲ್ಲಿ ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿದ್ದ ಜಗದೀಶ್ ಅವರದ್ದು ಸಾಹಿತ್ಯ ಕ್ಷೇತ್ರ ಹಾಗೂ ಪರಿಸರ ಛಾಯಾಗ್ರಹಣದಲ್ಲೂ ತೊಡಗಿಸಿಕೊಂಡಿರುವ ಮಾನವೀಯ ಅಂತಃಕರಣವುಳ್ಳ ವ್ಯಕ್ತಿತ್ವ ಹೊಂದಿದ್ದಾರೆ ಎಂದರು.
ಉಪನ್ಯಾಸಕಿ ಅರುಣಕುಮಾರಿ ಬಿರಾದಾರ್ ಉಪನ್ಯಾಸ ನೀಡಿ, ಕನ್ನಡದ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಆಚರಿಸಿಕೊಂಡು ಮುನ್ನುಗ್ಗುತ್ತಿರುವುದು ಸಂತಸದ ಸಂಗತಿಯಾಗಿದೆ. ಏಕರೂಪದ ಗ್ರಾಂಥಿಕ ಭಾಷೆ ಮತ್ತು ಪಠ್ಯಪುಸ್ತಕ, ಕಿರುಹೊತ್ತಿಗೆಗಳ ಪ್ರಕಟಣೆ, ವೈಜ್ಞಾನಿಕ ಪಾರಿಭಾಷಿಕ ಶಬ್ದಗಳ ಅನ್ವೇಷಣೆಯ ಮುಖ್ಯ ಧ್ಯೇಯದೊಂದಿಗೆ ಸ್ಥಾಪನೆಯಾಗಿದ್ದ ಕಸಾಪ ಇಂದು ತನ್ನ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುನ್ನೋಟದ ಫಲವಾಗಿ 1915 ಮೇ 5ರಂದು ಕನ್ನಡ ಸಾಹಿತ್ಯ ಪರಿಷತ್ತು ಜನ್ಮ ತಾಳಿತು. ಇಂದು ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಕಾರ್ಯಕ್ರಮ ಸಂಘಟಿಸುವ ಮೂಲಕ ಕನ್ನಡಿಗರ ಸ್ವಾಭಿಮಾನದ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದರು.
ಕಸಾಪ 3 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಸಾಂವಿಧಾನಿಕ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದೆ. 1995ರಿಂದ ಗೊ.ರು.ಚನ್ನಬಸಪ್ಪ ನೇತೃತ್ವದಲ್ಲಿ ಆರಂಭಗೊಂಡ ಕಸಾಪ ಸಂಸ್ಥಾಪನಾ ದಿನಾಚರಣೆಯನ್ನು ಇಂದು ಕರ್ನಾಟಕದ 30 ಜಿಲ್ಲೆ ಹಾಗೂ 4 ಹೊರನಾಡಿನ ಘಟಕಗಳಲ್ಲೂ ಏಕಕಾಲಕ್ಕೆ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಪೂರ್ವ ವಲಯ ನಿವೃತ್ತ ಪೊಲೀಸ್ ಅಧೀಕ್ಷಕ ಜಿ.ಎ.ಜಗದೀಶ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷರಾದ ಎಸ್.ಬಿ.ರಂಗನಾಥ, ಬಿ.ಎಂ.ಸದಾಶಿವಪ್ಪ ಶ್ಯಾಗಲೆ, ಎ.ಆರ್.ಉಜ್ಜನಪ್ಪ, ತಾಲೂಕು ಅಧ್ಯಕ್ಷ ಬಿ.ವಾಮದೇವಪ್ಪ ಮತ್ತಿತರರು ಉಪಸ್ಥಿತರಿದ್ದರು. ಎನ್.ಎಸ್.ರಾಜು ಕಾರ್ಯಕ್ರಮ ನಿರೂಪಿಸಿದರು.