ದಾವಣಗೆರೆ:
ಒಡೆದ ಮನೆ ಸಂಸಾರಕ್ಕೆ ಹೇಗೆ ಯೋಗ್ಯವಲ್ಲವೋ ಅದೇರೀತಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸ್ಥಿತಿಯೂ ಆಗಿದ್ದು, ವಾಸಕ್ಕೆ ಯೋಗ್ಯವಲ್ಲದ ಮನೆ (ಸರ್ಕಾರ) ಬೇಡವೆಂದು ಆ ಪಕ್ಷಗಳ ಶಾಸಕರೇ ಕುಣಿದು ಕುಪ್ಪಳಿಸುತ್ತಿದ್ದಾರೆಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವು ಒಡೆದ ಮನೆಯಾಗಿದ್ದು, ಅದರ ಬಗ್ಗೆ ನಾವು ಮಾತನಾಡುವುದೂ ಇಲ್ಲ. ಆಪರೇಷನ್ ಕಮಲಕ್ಕೂ ಕೈ ಹಾಕುವುದಿಲ್ಲ. ಯಾರ ತಂಟೆಗೂ ಹೋಗದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ಸೂಚಿಸಿದ್ದಾರೆ.
ಅದಕ್ಕೆ ನಾವು ಕಿವಿಗೊಟ್ಟಿದ್ದೇವೆ ಎಂದರು.ತಾನಾಗಿಯೇ ಬಿದ್ದು ಹೋಗುವ ಸಮ್ಮಿಶ್ರ ಸರ್ಕಾರದ ಬಗ್ಗೆ ಸಮಯವೇ ಉತ್ತರ ನೀಡುತ್ತದೆ ಎಂದ ಅವರು, ಬರ ಅಧ್ಯಯನಕ್ಕೆ ಬಿಜೆಪಿ ಒತ್ತು ನೀಡಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ. ರೈತರು, ಬಡವರು, ಶೋಷಿತ ಸಮುದಾಯಗಳ ಹಿತಾಸಕ್ತಿ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಬಗ್ಗೆ ಸದನದ ಒಳಗೆ ಮತ್ತು ಹೊರಗೂ ಧ್ವನಿ ಎತ್ತುತ್ತೇವೆ. ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.