ಅಪ್ರಾಪ್ತರ ವಾಹನ ಚಾಲನೆ ಅಪಾಯಕಾರಿ..!!

ತುಮಕೂರು

   ನಮ್ಮ ಮಗ ಐದನೆ ಕ್ಲಾಸಿಗೇ ಬೈಕ್ ಓಡಿಸುವುದನ್ನು ಕಲಿತ್ತಿದ್ದಾನೆ, ನಮ್ಮ ಮಗಳು ಕಮ್ಮಿ ಇಲ್ಲ ಅಪ್ಪ ಡ್ರೈವ್ ಮಾಡೋದನ್ನು ನೋಡಿಕೊಂಡೇ ಕಾರು ಡ್ರೈವಿಂಗ್ ಕಲಿತುಕೊಂಡು ಓಡಿಸುತ್ತಾಳೆ ಎಂದು ಅಪ್ಪ ಅಮ್ಮಂದಿರು ತಮ್ಮ ಮಕ್ಕಳ ಬಗ್ಗೆ ಅಭಿಮಾನದಿಂದ ಬೀಗಬಹುದು.

    ಮಕ್ಕಳು ಹೈಸ್ಕೂಲು ಮುಗಿಸಿ ಪಿಯೂಸಿಗೆ ಸೇರುತ್ತಿದ್ದಂತೆ ಟೂ ವೀಲರ್ ಬೇಕೆಂದು ಸಹಜವಾಗಿ ಹಟ ಮಾಡಬಹುದು. ಆ ವೇಳೆಗಾಗಲೆ ಅವರು ಅಪ್ಪಅಮ್ಮನನ್ನು ಟೂವೀಲರ್‍ನಲ್ಲಿ ಕೂರಿಸಿಕೊಂಡು ಓಡಾಡಿಸಿ ಡ್ರೈವಿಂಗ್ ಸಾಮಥ್ರ್ಯ ಸಾಬೀತು ಮಾಡಿರಬಹುದು. ಕಾಲೇಜಿಗೆ, ಟ್ಯೂಷನ್ನಿಗೆ ಹೋಗಿಬರಲು ಟೈಂ ಸಾಕಾಗೊಲ್ಲ ಗಾಡಿ ಕೊಡಿಸಿ ಅಂತ ಪೀಡಿಸಬಹುದು. ಮಕ್ಕಳು ಡಾಕ್ಟರೋ, ಇಂಜಿನಿಯರೋ ಆಗಬೇಕಲ್ಲ, ಅವರು ಚೆನ್ನಾಗಿ ಓದಬೇಕು.

     ಕಾಲೇಜಿಗೆ, ಟ್ಯೂಷನ್ನಿಗೆ ಸೈಕಲ್ಲಿನಲ್ಲಿ ಹೋಗಿಬರಲು ಅವರಿಗೆ ಕಷ್ಟ ಆಗಬಹುದು ಎಂದು ಅಪ್ಪ ಅಮ್ಮಂದಿರೇ ಅಂದುಕೊಳ್ಳಬಹುದು. 18 ವರ್ಷಕ್ಕೆ ಮೊದಲು ವಾಹನ ಚಲಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ತಿಳಿದಿದ್ದರೂ, ಹುಶಾರಾಗಿ ಹೋಗಿಬರಬೇಕು ಎಂದು ಎಚ್ಚರಿಕೆ ಕೊಟ್ಟು ಗಾಡಿ ಕೊಡಿಸುತ್ತಾರೆ. ಕೆಲವು ಮನೆಗಳಲ್ಲಿ ಆಟದ ಸಾಮಾನು ಕೊಡಿಸುವ ರೀತಿ ಹೈಸ್ಕೂಲು, ಕಾಲೇಜು ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್ ಕೊಡಿಸುವಂತೆ ಟೂವೀಲರ್ ಕೊಡಿಸಿ ತಮ್ಮ ಸಂಸಾರದ ‘ಘನತೆ’ ಹೆಚ್ಚಿಸಿಕೊಳ್ಳುತ್ತಾರೆ.

     ಆದರೆ, ಮಕ್ಕಳ ವಯಸ್ಸು ಹದಿನೆಂಟು ತುಂಬಿರುವುದಿಲ್ಲ, ವಾಹನ ಚಲಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲ, ವಾಹನ ಚಾಲನೆಗೆ ಸೂಕ್ತ ತರಬೇತಿ ಆಗಿರುವುದಿಲ್ಲ, ಡ್ರೈವಿಂಗ್ ಲೈಸೆನ್ಸ್ ಮತ್ತಿತರ ದಾಖಲಾತಿ ಮಕ್ಕಳ ಹೆಸರಿನಲ್ಲಿ ಇರುವುದಿಲ್ಲ. ಸಂಚಾರಿ ನಿಯಮಗಳ ಬಗ್ಗೆ ಅವರಿಗೆ ತಿಳುವಳಿಕೆ ಇರುವುದಿಲ್ಲ. ಆದರೂ ಮಕ್ಕಳು ವಾಹನ ಓಡಿಸಲು ಅವಕಾಶ ಮಾಡಿಕೊಡುತ್ತಾರೆ. ಆ ವಯಸ್ಸಿನ ಮಕ್ಕಳ ಕೈಗೆ ಗಾಡಿ ಸಿಕ್ಕರೆ ಅವರಿಗೆ ಆಕಾಶವೇ ಕೈಗೆಟಕಿಂದಂತೆ.

   ಇಂತಹ ಮಕ್ಕಳು ರಸ್ತೆ ನಿಯಮಗಳನ್ನು ಇನ್ನೆಲ್ಲಿ ಪಾಲಿಸಿಯಾರು. ಹೀಗಾಗಿ ಅವರು ಸಂಚಾರಿ ಪೊಲೀಸರ ಕಣ್ಣು ತಪ್ಪಿಸಿ ವಾಹನ ಚಲಾಯಿಸಲು ಶುರು ಮಾಡುತ್ತಾರೆ. ಇಂತಿಂತಾ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸರು ಇರೋದಿಲ್ಲ, ಆ ರಸ್ತೆಗಳಲ್ಲಿ ಹೋಗು ಎಂದು ಅಪ್ಪ ಅಮ್ಮಂದಿರೇ ಮಕ್ಕಳನ್ನು ದಾರಿ ತಪ್ಪಿಸುತ್ತಾರೆ. ಇಂತಾ ಮಕ್ಕಳು ಹೆಲ್ಮೆಟ್ ಹಾಕಲೂ ಹಿಂಜರಿಯುತ್ತಾರೆ, ಹಾಕಿದರೆ ಅವರ ಹೇರ್‍ಸ್ಟೈಲ್ ಕೆಡಬಹುದು, ಅಥವಾ ಕೂದಲು ಬೇಗ ಉದುರುತ್ತವೆ ಎಂದು ಸಹಪಾಠಿಗಳು ಹೇಳಿರಬಹುದು. ಹೀಗಾಗಿ ಹೆಲ್ಮೆಟ್ ಇದ್ದರೂ ತಲೆಗೆ ಹಾಕಿಕೊಳ್ಳದೆ ಗಾಡಿ ಓಡಿಸುತ್ತಾರೆ. ಡಿಎಲ್ ಇಲ್ಲ, ಹೆಲ್ಮೆಟ್ ಇಲ್ಲವೆಂದಮೇಲೆ ರಸ್ತೆಯಲ್ಲಿ ಕಾವಲಿರುವ ಸಂಚಾರಿ ಪೊಲೀಸರ ಕಣ್ಣು ತಪ್ಪಿಸಿಕೊಂಡೇ ಅವರು ಸಂಚರಿಸಬೇಕಾಗುತ್ತದೆ. ಸಂಚಾರಿ ಪೊಲೀಸರು ಕಂಡರೆ ಅವರಿಂದ ತಪ್ಪಿಸಿಕೊಳ್ಳಲು ವೇಗವಾಗಿ ವಾಹನ ಓಡಿಸಿ ಅಪಘಾತ ಮಾಡಿಕೊಳ್ಳುತ್ತಾರೆ.

     ಮೊದಲೇ ಹುಡುಗಾಟಿಕೆ ವಯಸ್ಸು, ಟೂವೀಲ್ ಎಕ್ಸಲೇಟರ್ ಕೈಯ್ಯಲ್ಲಿದ್ದರೆ ಅವರಿಗೆ ನಿಧಾನವಾಗಿ ಚಲಿಸುವುದು ಸಮಾಧಾನ ತರದು. ಯಾವುದೇ ವಾಹನ ತನ್ನನ್ನು ಸೈಡ್ ಹೊಡೆದರೆ ಅವರಿಗೆ ಸಹಿಸಿಕೊಳ್ಳಲಾಗದ ಅವಮಾನವಾಗುತ್ತದೆ, ತಕ್ಷಣ ವೇಗ ಹೆಚ್ಚಿಸಿ, ಸೈಡ್ ಹೊಡೆದ ವಾಹನ ಹಿಂದಿಕ್ಕಿ ಸೋಲಿಸಿ, ತಾನು ಗೆದ್ದರಷ್ಟೇ ಸಮಾಧಾನ. ಜೊತೆಗೆ ತಾನು ಡ್ರೈವಿಂಗ್‍ನಲ್ಲಿ ಎಷ್ಟು ಎಕ್ಸ್‍ಪರ್ಟ್ ಎಂದು ಪ್ರದರ್ಶಿಸಲು ವೀಲಿಂಗ್ ಸರ್ಕಸ್ ಬೇರೆ ಕಲಿತುಕೊಳ್ಳುತ್ತಾರೆ, ಸಂಚಾರ ಒತ್ತಡ ಇರುವ ರಸ್ತೆಗಳಲ್ಲೂ ವೀಲಿಂಗ್ ಸಾಮಥ್ರ್ಯ ತೋರಿಸಿ ಸಾರ್ವಜನಿಕರ ಗಮನ ಸೆಳೆದು ಹೀರೋಗಳಾಗುವ ಪ್ರಯತ್ನ ಮಾಡುತ್ತಾರೆ.

ಕಾನೂನು ಕಠಿಣ

       ಮಕ್ಕಳ ಈ ಎಲ್ಲಾ ಎಡವಟ್ಟುಗಳಿಗೆ ಅವರಿಗೆ ವಾಹನ ಓಡಿಸಲು ಅವಕಾಶ ಮಾಡಿಕೊಟ್ಟ ಪೋಷಕರೇ ಹೊಣೆ ಎಂದು ಅಪ್ರಾಪ್ತರ ವಾಹನ ಚಾಲನೆ ನಿಷೇಧ ನಿಯಮದಡಿ ಪೋಷಕರನ್ನೇ ಹೊಣೆ ಮಾಡಿ ಪೊಲೀಸರು ಅವರ ವಿರುದ್ಧ ಕೇಸು ದಾಖಲಿಸುತ್ತಾರೆ. ಯಾವುದೇ ವಾಹನ ಚಲಾಯಿಸಲು ನಿರ್ದಿಷ್ಟ ವಯಸ್ಸು, ಸೂಕ್ತ ತರಬೇತಿ, ಸಂ¨ಂಧಿಸಿದ ದಾಖಲಾತಿ ಹೊಂದಿರಬೇಕು. ಇದಾವುದೂ ಇಲ್ಲದ ಮಕ್ಕಳು ವಾಹನ ಚಲಾಯಿಸುವುದು ಕಾನೂರು ಬಾಹಿರ ಹಾಗೂ ಅಪಾಯಕಾರಿ.

      ಅಪ್ರಾಪ್ತರು ವಾಹನ ಚಲಾಯಿಸುವುದರ ವಿರುದ್ಧ ಸಂಚಾರಿ ನಿಯಮ ಈಗ ಕಠಿಣವಾಗಿದೆ. ಮಕ್ಕಳು ವಾಹನ ಚಲಾಯಿಸಲು ರಸ್ತೆಗಿಳಿಯುವುದನ್ನು ತಡೆಯದ ಪೋಷಕರೇ ತಪ್ಪಿತಸ್ಥರಾಗುತ್ತಾರೆ. ಪೋಷಕರ ವಿರುದ್ಧವೇ ಪೊಲೀಸರು ದೂರು ದಾಖಲಿಸಿ ದಂಡ ವಿಧಿಸಬಹುದು ಇಲ್ಲವೇ, ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ಅಪ್ರಾಪ್ತರು ವಾಹನ ಚಲಾಯಿಸಿದ ಪ್ರಕರಣಗಳಲ್ಲಿ ಆ ಮಕ್ಕಳ ಪೋಷಕರಿಗೆ ಹೈದರಾಬಾದ್ ನ್ಯಾಯಾಲಯ ಜೈಲು ಶಿಕ್ಷೆ ನೀಡಿದ ಪ್ರಕರಣರಣಗಳಿವೆ.

      ದಂಡ, ಶಿಕ್ಷೆ ಒಂದೆಡೆಯಾದರೆ, ಅಪಘಾತದಲ್ಲಿ ಹದಿಹರೆಯದ ಮಕ್ಕಳು ಸಾವು, ನೋವು ಅನುಭವಿಸುವಂತಾಗುತ್ತದೆ. ಹದಿಹರೆಯದ ವರಿಂದಾಗುವ ಹೆಚ್ಚಿನ ಅಪಘಾತ ಪ್ರಕರಣಗಳಿಗೆ ಅತಿ ವೇಗ, ರಸ್ತೆ ನಿಯಮ ಉಲ್ಲಂಘನೆ, ಅಜಾಗರೂಕತೆ ಕಾರಣವಾಗಿವೆ. ಇಂತಹ ದುರಂತಗಳಲ್ಲಿ ಸಾವು ಇಲ್ಲವೆ, ಶಾಶ್ವತ ಅಂಗವೈಕಲ್ಯ ಉಂಟಾಗುತ್ತವೆ. ಈ ಹಿನ್ನೆಲೆಯಲ್ಲಿ ಸಂಚಾರಿ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿ, ಸಂಚಾರಿ ನಿಯಮಗಳ ಬಗ್ಗೆ ಪೊಲೀಸ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಜನ ಜಾಗೃತಿ ಮೂಡಿಸುತ್ತಿವೆ, ಆದಾಗ್ಯೂ ಆ ಬಗ್ಗೆ ಇನ್ನೂ ಜಾಗೃತಿ ಮೂಡಿದಂತಿಲ್ಲ.

      ಅಪ್ರಾಪ್ತರಿಗೆ ವಾಹನ ನೀಡಿ ಓಡಿಸಲು ಅವಕಾಶ ಮಾಡಿಕೊಡುವುದನ್ನು ಪೋಷಕರು ನಿಲ್ಲಿಸಬೇಕು, ಮಕ್ಕಳಿಗೆ ನೀಡುವ ವಾಹನಗಳು ಆಟದ ವಸ್ತುಗಳಲ್ಲ, ಅಪಾಯಕಾರಿ ಎಂಬುದು ಗಮನದಲ್ಲಿರಲಿ. ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಲಾಯಿಸಿ ಆಗುವ ಅನಾಹುತಗಳಿಗೆ ಪೋಷಕರೇ ಕಾರಣರಾಗಿ, ಜೀವನ ಪರ್ಯಾಂತ ಕೊರಗುವ ಪರಿಸ್ಥಿತಿ ಬರಬಹುದು. ಮಕ್ಕಳು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಅವರು ವಾಹನ ಏರಿ ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬೇಕು. ಸಂಚಾರಿ ನಿಯಮಗಳ ತಿಳುವಳಿಕೆ ಹಾಗೂ ಅಗತ್ಯ ಚಾಲನಾ ಪರವಾನಗಿ ಪಡೆಯದ ಹೊರತು ಅವರು ವಾಹನ ಚಲಾಯಿಸದಂತೆ ಪೋಷಕರು ಎಚ್ಚರಿಕೆವಹಿಸಬೇಕು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap