ಮಾನವೀಯ ಧರ್ಮವೇ ಶ್ರೇಷ್ಠವೆಂದು ಸಾರಿದ ಅಂಬಿಗರ ಚೌಡಯ್ಯ : ಎನ್.ಕೆ.ರಾಮಚಂದ್ರಪ್ಪ

ಚಿತ್ರದುರ್ಗ :

      ಜಾತಿ ತಾರತಮ್ಯವನ್ನು ತೊರೆದು, ಎಲ್ಲ ಧರ್ಮಕ್ಕಿಂತ ಮಾನವೀಯ ಧರ್ಮ ಆಚರಣೆಯೇ ಮುಖ್ಯ ಎಂಬ ತತ್ವ ಸಾರಿದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ರಾಣೆಬೆನ್ನೂರು ನಿವೃತ್ತ ಪ್ರಾಂಶುಪಾಲ ಎನ್.ಕೆ.ರಾಮಚಂದ್ರಪ್ಪ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದಲ್ಲಿ ಮಂಗಳವಾರ ನಗರದ ತರಾಸು ರಂಗಮಂದರದಲ್ಲಿ ಆಯೋಜಿಸಿದ್ದ “ನಿಜಶರಣ ಅಂಬಿಗರ ಚೌಡಯ್ಯ ಜಯಂತಿ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

     ಶರಣ ಕಲ್ಪನೆ ಅಗಾಧವಾದದ್ದು. ಅವರೆಲ್ಲರೂ ಮಾನವೀಯ ಧರ್ಮವನ್ನೇ ಮೆರೆದಿದ್ದಾರೆ. ಅಂಬಿಗರ ಚೌಡಯ್ಯನವರು ರಾಣೆಬೆನ್ನೂರಿನ ಧಾನಪುರದಲ್ಲಿ 1186ರಲ್ಲಿ ಜನಿಸಿದ್ದಾರೆ ಎಂಬ ಉಲ್ಲೇಖಗಳಿವೆ. ಇವರು ಜಾತಿ ತಾರತಮ್ಯ ತೊಡೆದು, ಸಮಾಜದ ಅನಿಷ್ಠ ಪದ್ಧತಿಗಳನ್ನು ದೂರಮಾಡಿ ಸ್ತ್ರೀ-ಪುರುಷರು ಸಮಾನರು ಎಂಬ ಕಲ್ಪನೆ ನೀಡಿದ್ದಾರೆ. ಅಂಬಿಗರ ಚೌಡಯ್ಯ ಅವರು ಬುದ್ಧ, ಬಸವಣ್ಣನವರ ಸಮಕಾಲೀನರು. ಇವರು ರಚಿಸಿರುವ ವಚನಗಳಲ್ಲಿ 330 ವಚನಗಳು ಪತ್ತೆಯಾಗಿವೆ. ಅವರ ಸಾಧನೆಯನ್ನು ಸ್ಮರಿಸುವ ಬದಲು ಪ್ರಸ್ತುತ ದಿನಮಾನದಲ್ಲಿ ಧರ್ಮಗಳನ್ನು ವಿಭಜಿಸುವ ಕಾರ್ಯವಾಗುತ್ತಿದೆ ಎಂದರು.

     ಅಂಬಿಗರ ಚೌಡಯ್ಯ ನವರ ವಚನಗಳಲ್ಲಿ ತಮ್ಮ ನಾಮವನ್ನು ಅಂಕಿತನಾಮವನ್ನಾಗಿ ಮಾಡಿಕೊಂಡು ಇತರೆ ವಚನಕಾರರಿಗಿಂತಲೂ ವಿಶಿಷ್ಟ ಎನಿಸಿದ್ದಾರೆ. ಸ್ವಾಮಿ ನಿಷ್ಠೆ, ಸ್ವಾಭಿಮಾನ, ಘನತೆ, ಗೌರವಕ್ಕೆ ಪಾತ್ರರಾಗಿದ್ದಾರೆ. ಸ್ಥಳದಲ್ಲಿಯೇ ಅನ್ಯಾಯವನ್ನು ಖಂಡಿಸಿ, ಕಠೋರ ಹಾಗೂ ನಿಷ್ಠುರವಾದಿ ಎನಿಸಿದ್ದಾರೆ. ಜಂಗಮ ಎಂದರೆ ನಡೆ-ನುಡಿ ಶುದ್ಧವಾಗಿರಬೇಕು. ಡಾಂಭಿಕ ಪೂಜೆಗಿಂತ ಭಕ್ತಿ ಪೂಜೆ ಮುಖ್ಯ. ಪ್ರತಿಯೊಬ್ಬರಿಗೆ ಶಿಕ್ಷಣ ನೀಡಬೇಕು. ದುಂದುವೆಚ್ಚದ ಬದಲು ಶಿಕ್ಷಣಕ್ಕಾಗಿ ಹಣ ವ್ಯಯಿಸಬೇಕು ಎಂಬುದು ಅವರ ವಚನಗಳ ತಾತ್ಪರ್ಯ ಎಂದು ಅವರು ಹೇಳಿದರು.

     ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಮಹನೀಯರ ಸಾಧನೆಗಳನ್ನು ಸ್ಮರಿಸುವ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಮಹನೀಯರನ್ನು ಯಾವುದೇ ಜಾತಿಗೆ ಮೀಸಲಿರಿಸಬೇಡಿ. ಅವರ ಸಮಾಜ ಸೇವೆಯನ್ನು ಸ್ಮರಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ದಾರ್ಶನಿಕರ ಜಯಂತಿಗೆ ಅರ್ಥ ಬರಲು ಸಾಧ್ಯ. ಮಹಾಪುರಷರ ಸಾಧನೆ ಹಾಗೂ ಸಮಾಜ ಸೇವೆಗಳ ಬಗ್ಗೆ ಇಂದಿನ ಪೀಳಿಗೆಗೆ ಮಾಹಿತಿ ನೀಡಬೇಕು. ಸರ್ಕಾರ ಜಯಂತಿಗಳನ್ನು ಆಚರಿಸುವುದರ ಮೂಲಕ ಈ ಕಾರ್ಯಕೈಗೊಳ್ಳುತ್ತಿದೆ. ಸಾರ್ವಜನಿಕರು ಒಬ್ಬ ಮಹಾನ್ ವ್ಯಕ್ತಿಯನ್ನು ಜಾತಿಗೆ ಸೀಮಿತಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು.

    ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ನಗರಸಭೆ ಪೌರಾಯುಕ್ತ ಜಿ.ಟಿ.ಹನುಮಂತರಾಜು, ಜಿಲ್ಲಾ ಗಂಗಾಂಭಿಕ ಬೆಸ್ತರ ಸಂಘದ ಡಿ.ಹೆಚ್.ರಂಗಯ್ಯ, ಕಾರ್ಯದರ್ಶಿ ಪಿ.ಶ್ರೀನಿವಾಸ್, ನಗರಸಭೆ ಸದಸ್ಯೆ ನಾಗಮ್ಮ, ಮಾಜಿ ಸದಸ್ಯ ಮಹೇಶ್, ಸಮಾಜದ ಮುಖಂಡರಾದ ಈ.ಶಿವಕುಮಾರ್, ಗಾಡಿಮಂಜುನಾಥ್, ಅಶೋಕ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link