ಆಮೆ ವೇಗದಲ್ಲಿ ಹೆದ್ದಾರಿ ಕಾಮಗಾರಿ: ಸಿದ್ದೇಶ್ವರ್ ಗರಂ

ದಾವಣಗೆರೆ:

    ತಾವು ಪ್ರತಿನಿಧಿಸುವ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಹಿಂದೆ ಆಗಿರುವ ಲೋಪ-ದೋಷಗಳನ್ನು ಸಹ ಸರಿಪಡಿಸಲು ಸಹ ಹೆದ್ದಾರಿ ಪ್ರಾಧಿಕಾರ ಸ್ಪಂದಿಸುತ್ತಿಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ದೆಹಲಿಯ ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಅವರು, ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ಅಲ್ಲದೇ, ಸುವರ್ಣ ಚತುಷ್ಪತ ಹೆದ್ದಾರಿ ನಿರ್ಮಾಣದ ಸಮಯದಲ್ಲೂ 60 ಕಿ.ಮೀ ಹೆದ್ದಾರಿ ಅಬಿವೃದ್ಧಿ ಪಡಿಸಲು ಹೆದ್ದಾರಿ ಪ್ರಧಿಕಾರವೂ 8 ವರ್ಷ ತಗೆದುಕೊಂಡಿತ್ತು, ಅದರಲ್ಲೂ ಹಲವು ಲೋಪಗಳನ್ನು ಎಸಗಲಾಗಿತ್ತು. ಇದು ಈಗಲೂ ಮರುಕಳಿಸುತ್ತಿದೆ ಎಂದು ಆರೋಪಿಸಿದರು.

    ಈ ಹೆದ್ದಾರಿಯನ್ನು ಆರು ಪಥದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ನಿರ್ಮಾಣ ಮಾಡುವ ಕಾಮಗಾರಿ 2017ರ ಜನವರಿಯಲ್ಲಿ ಪ್ರಾರಂಭವಾಗಿದೆ. ಈಗಲೂ ಸಹ ಹೆದ್ದಾರಿ ಪ್ರಾಧಿಕಾರದವರು ನಿಧಾನಗತಿಯನ್ನು ಕಾಮಗಾರಿ ನಡೆಸುತ್ತಿದ್ದು, ಚತುಷ್ಪತ ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಮಾಡಿದಂತಹ ಲೋಪದೋಷಗಳನ್ನು ಸರಿಪಡಿಸುವ ವರೆಗೂ ಹೆದ್ದಾರಿ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಹೆದ್ದಾರಿ ಪಕ್ಕದ ಗ್ರಾಮಸ್ಥರು ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರದವರು ಮಾಡಿರುವ ತಪ್ಪಿನಿಂದಾಗಿ ಅನೇಕ ಅಮೂಲ್ಯ ಜೀವಗಳು ಬಲಿಯಾಗಿವೆ, ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಎಂದು ಗ್ರಾಮಸ್ಥರು ವ್ಯಕ್ತಪಡಿಸುತ್ತಿರುವ ನಿಲುವು ಸಮಯೋಚಿತವಾಗಿದೆ.

     ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹಳೇಕುಂದವಾಡ, ದಾವಣಗೆರೆ ನಗರದ ಬನಶಂಕರಿ ಬಡಾವಣೆ, ಆವರಗೆರೆ ಕ್ರಾಸ್, ಹೊನ್ನೂರು ಗೊಲ್ಲರಹಟ್ಟಿ, ಹೆಚ್.ಕಲಪನಹಳ್ಳಿ, ಲಕ್ಕಮುತ್ತೇನಹಳ್ಳಿ, ಮಲ್ಲಶೆಟ್ಟಿಹಳ್ಳಿ, ಹುಣಸೇಕಟ್ಟೆ, ಹಾಲುವರ್ತಿ, ನೀರ್ಥಡಿ ಗ್ರಾಮಗಳ ಬಳಿ ಚತುಷ್ಪತ ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಅವೈಜ್ಞಾನಿಕವಾಗಿ ಕೆಳಸೇತುವೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇಂತಹ ಸ್ಥಳಗಳಲ್ಲಿ ಆರು ಪಥದ ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಬೇಡಿಕೆ ಅನುಗುಣವಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಡುವಂತೆ ಕಳೆದ ಒಂದೂವರೆ ವರ್ಷದಿಂದ ಹೆದ್ದಾರಿ ಪ್ರಾಧಿಕಾರದೊಂದಿಗೆ ನಿರಂತರ ಒತ್ತಾಯ ಮಾಡುತ್ತಲೇ ಬಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

     ದಾವಣಗೆರೆಯಂತಹ ಮಹಾನಗರಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಒಳಬರಲು ಒಂದು ಸುಸಜ್ಜಿತ ಕೆಳಸೇತುವೆ ನಿರ್ಮಾಣ ಮಾಡಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ, ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ದಿ ಹೊಂದುತ್ತಿರುವ ದಾವಣಗೆರೆ ನಗರಕ್ಕೆ ಸರಿಯಾದ ಪ್ರವೇಶ ಇಲ್ಲದೇ ಇರುವುದು ವಿಷಾದದ ಸಂಗತಿಯಾಗಿದೆ.

      ದಾವಣಗೆರೆಯ ವಿದ್ಯಾನಗರದ ಸರ್ವೀಸ್ ರಸ್ತೆ ಪಕ್ಕದಲ್ಲಿ ವಿದ್ಯುತ್ ಹೈಟೆನ್ಷನ್ ಮಾರ್ಗದ ಬೃಹತ್ ಕಂಬಗಳು ಇರುವುದರಿಂದ ಸಾಕಷ್ಟು ಅಪಘಾತಗಳು ಉಂಟಾಗಿವೆ, ಈ ಮಾರ್ಗದಲ್ಲಿರುವ ಬೃಹತ್ ಕಂಬಗಳ ಬದಲಾಗಿ ಸಿಂಗಲ್ ಪೋಲ್‍ಗಳನ್ನು ಅಳವಡಿಸುವಂತೆ ತಿಳಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ದೂರಿದರು.

      ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಉದ್ದ ಹಾದು ಹೋಗುವ ಮರಿಯಮ್ಮನಹಳ್ಳಿ-ಇಟಗಿ-ಹರಪನಹಳ್ಳಿ-ಹರಿಹರ-ಹೊನ್ನಳಿ-ಶಿವಮೊಗ್ಗ ವರೆಗಿನ 186 ಕಿ.ಮೀ ಹಾಗೂ ಚನ್ನಗಿರಿಯಿಂದ ದಾವಣಗೆರೆವರೆಗಿನ 60 ಕಿ.ಮೀ. ಈ ಎರಡೂ ರಾಜ್ಯ ಹೆದ್ದಾರಿಗಳನ್ನು 2015 ರಲ್ಲಿಯೇ ಮೇಲ್ದರ್ಜೆಗೇರಿಸಲಾಗಿದ್ದರೂ ಕೂಡ ಇಲ್ಲಿಯವರೆಗೆ ಪ್ರಗತಿಯನ್ನೇ ಕಂಡಿಲ್ಲ. ಚನ್ನಗಿರಿ-ದಾವಣಗೆರೆ ಹೆದ್ದಾರಿಗೆ ಡಿ.ಪಿ.ಆರ್. ಮಾಡಲು ಕನ್ಸಲ್ಟೆಂಟ್‍ಗಳನ್ನು ನೇಮಕ ಮಾಡಿ ಶೀಘ್ರ ರಸ್ತೆ ಕಾಮಗಾರಿ ಪಾರಂಭಿಸಬೇಕೆಂದು ಮನವಿ ಮಾಡಿದರು.

       ಚನ್ನಗಿರಿಯಿಂದ ದಾವಣಗೆರೆವರೆಗಿನ ಹೆದ್ದಾರಿಯನ್ನು ಬಿಳಿಚೋಡು-ಜಗಳೂರು-ನಾಯಕನಹಟ್ಟಿ-ಚಳ್ಳಕೆರೆ ಹತ್ತಿರ ರಾಷ್ಟ್ರೀಯ ಹೆದ್ದಾರಿ 150 ಎ ಸೇರುವಂತೆ ಹಾಗೂ ಚಿತ್ರದುರ್ಗದಿಂದ – ಭೀಮಸಮುದ್ರ-ಸಾಸಲು-ಬಸವಾಪಟ್ಟಣ-ಹೊನ್ನಾಳಿ-ಶಿಕಾರಿಪುರ-ಸೊರಬ-ಸಿದ್ದಾಪುರ-ಕುಮಟಾವರೆಗಿನ ಈ ಎರಡೂ ಹೆದ್ದಾರಿಗಳನ್ನೂ ಮೇಲ್ದರ್ಜೆಗೇರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

       ಮಧ್ಯ ಕರ್ನಾಟಕದಲ್ಲಿರುವ ನನ್ನ ಲೋಕಸಭಾ ಕ್ಷೇತ್ರದಲ್ಲಿ ಜಿಲ್ಲಾ ಪ್ರಮುಖ ರಸ್ತೆಗಳು ಹಾಗೂ ಹೆದ್ದಾರಿಗಳ ಅಭಿವೃದ್ದಿ ಅತ್ಯಂತ ಅವಶ್ಯವಾಗಿದೆ ಈ ಹಿನ್ನೆಲೆಯಲ್ಲಿ ನನ್ನ ಮತಕ್ಷೇತ್ರದ ಸುಮಾರು 461 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ದಿ ಪಡಿಸಲು 442. ಕೋಟಿ ರೂ. ಅನುದಾನ ಕೇಳಿ ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಕಳೆದ ಎರಡು ವರ್ಷಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದರೂ ಮಂಜೂರಾತಿ ಯಾಗಿಲ್ಲ , ಆದ್ದರಿಂದ ಶೀಘ್ರವಾಗಿ ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap