ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ಅನುಷ್ಠಾನ

ಮತದಾನದ ಹಕ್ಕಿನಿಂದ ವಂಚಿತರಾಗುತ್ತಿರುವ ಸದಸ್ಯರು

ವಿಶೇಷ ವರದಿ : ಸಾ.ಚಿ.ರಾಜಕುಮಾರ
ತುಮಕೂರು:

     ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ಕ್ಕೆ ತಿದ್ದುಪಡಿ ತಂದ ಪರಿಣಾಮ, ಸಂಘಗಳಲ್ಲಿ ಸದಸ್ಯರಾಗಿರುವವರೆ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದು, ಗೊಂದಲಗಳಲ್ಲಿ ಮುಳುಗಿ ಹೋಗಿದ್ದಾರೆ. 2013ರ ತಿದ್ದುಪಡಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುತ್ತಿರುವ ಕಾರಣ ಚುನಾವಣೆಗೆ ಸ್ಪರ್ಧಿಸುವವರು ಮತ್ತು ಮತದಾನ ಮಾಡಬೇಕಾದ ಸದಸ್ಯರು ತಮಗೆ ಅವಕಾಶ ವಂಚಿತರಾಗುತ್ತಿರುವ ಬಗೆಗೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ತಮ್ಮ ಹೆಸರುಗಳೇ ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದನ್ನು ಕಂಡು ಹೌಹಾರುತ್ತಿದ್ದಾರೆ. ಕೆಲವರು ವಕೀಲರನ್ನು ಹಿಡಿದು ರಾಜ್ಯ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ದಾಖಲಿಸುತ್ತಿದ್ದಾರೆ.

     ಸಹಕಾರ ಸಂಘಗಳ ತಿದ್ದುಪಡಿ ಅಧಿನಿಯಮದಲ್ಲಿ ಕೆಲವು ಸ್ಪಷ್ಟ ಬದಲಾವಣೆಗಳನ್ನು ತರಲಾಗಿದ್ದರೂ ಈ ಮಾಹಿತಿ ಸಹಕಾರ ವಲಯದಲ್ಲಿ ಇರುವವರಿಗೆ ತಿಳಿದಿಲ್ಲ. ತಿಳಿಸುವ ಪ್ರಯತ್ನಗಳಾಗಿಲ್ಲ. ಇದು ಈಗ ಈ ವಲಯದಲ್ಲಿ ಇರುವವರಿಗೆ ಗೊಂದಲ ಉಂಟು ಮಾಡಿದ್ದು, ತಮ್ಮ ಹಕ್ಕು ರಕ್ಷಣೆಗೆ ಮುಂದಾಗುತ್ತಿರುವ ಧಾವಂತದಲ್ಲಿ ಹಲವರಿದ್ದಾರೆ. ಸಹಕಾರ ಸಂಘಗಳ ಚುನಾವಣೆಗೆ ಸಂಬಂಧಿಸಿದಂತೆಯೇ ಸುಮಾರು 1 ಸಾವಿರಕ್ಕೂ ಹೆಚ್ಚು ರಿಟ್ ಅರ್ಜಿಗಳು ರಾಜ್ಯ ಹೈಕೋರ್ಟ್‍ನಲ್ಲಿ ಸಲ್ಲಿಕೆಯಾಗಿವೆ.

    ತುಮಕೂರಿನ ಕೆಲವು ಸಹಕಾರ ಸಂಘಗಳನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಬಹಳಷ್ಟು ಪ್ರತಿಷ್ಠಿತ ಸಂಘಗಳಲ್ಲಿಯೇ ಮತದಾನದ ಹಕ್ಕಿನಿಂದ ವಂಚಿತರಾಗಿರುವವರು ಅರ್ಧಕ್ಕಿಂತಲೂ ಹೆಚ್ಚು ಮಂದಿ ಇದ್ದಾರೆ. ಹತ್ತು ಸಾವಿರ ಸದಸ್ಯರು ಇರುವ ಸಂಘವೊಂದರಲ್ಲಿ ಕೇವಲ 1500 ಸದಸ್ಯರಷ್ಟೇ ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಮತದಾನದ ಹಕ್ಕಿಲ್ಲ ಎಂದ ಮೇಲೆ ಚುನಾವಣೆಯಲ್ಲಿ ಭಾಗವಹಿಸಲೂ ಅವಕಾಶವಿಲ್ಲ. ಸ್ಪರ್ಧೆಗೂ ಇಳಿಯುವಂತಿಲ್ಲ. ಇದು ಆಕಾಂಕ್ಷಿಗಳ ಮೇಲೆ ಬಹಳಷ್ಟು ಪರಿಣಾಮ ಬೀರಿದೆ.

ಏನಿದು ತಿದ್ದುಪಡಿ?

    ಮೂಲ ಅಧಿನಿಯಮದ ಕಲಂ 20 ಸಹಕಾರ ಸಂಘಗಳ ಚುನಾವಣೆಯ ಬಗ್ಗೆ ವಿವರಿಸುತ್ತದೆ. ಈ ಕಲಂಗೆ 2013 ರಲ್ಲಿ ತಿದ್ದುಪಡಿಯಾಗಿದೆ. ಕಳೆದ 5 ಸಾಮಾನ್ಯ ಸಭೆಗಳ ಪೈಕಿ 3 ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿದ್ದಲ್ಲಿ ಅಂತಹ ಸದಸ್ಯನು ಮತದಾನದ ಹಕ್ಕಿನಿಂದ ಅನರ್ಹಗೊಳ್ಳುತ್ತಾನೆ. 3 ನಿರಂತರ ಸಹಕಾರ ವರ್ಷಗಳವರೆಗೆ ಒಂದು ಸಹಕಾರ ಸಂಘದ ಉಪ ವಿಧಿಗಳಲ್ಲಿ ಪ್ರತಿವರ್ಷದಲ್ಲಿ ಒಬ್ಬ ಸದಸ್ಯನು ಬಳಸಿಕೊಳ್ಳಲು ನಿರ್ದಿಷ್ಟಪಡಿಸಬಹುದದ ಕನಿಷ್ಠ ಸೇವೆ ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ತಪ್ಪಿದರೆ ಅಂತಹವರೂ ಸಹ ಹಕ್ಕಿನಿಂದ ವಂಚಿತರಾಗುತ್ತಾರೆ. ಇಂತಹವರು 3 ವರ್ಷಗಳ ಅವಧಿಗೆ ಸರ್ವಸದಸ್ಯರ ಸಭೆ ಅಥವಾ ಮಂಡಳಿಯ ಸದಸ್ಯರ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿರತಕ್ಕದ್ದಲ್ಲ ಎಂದು ತಿದ್ದುಪಡಿ ಕಾನೂನಿನಲ್ಲಿ ಅಳವಡಿಸಲಾಗಿದೆ.

      ಕನಿಷ್ಠ ಸೇವೆ ಅಥವಾ ಸೌಲಭ್ಯ ಪಡೆದುಕೊಳ್ಳುವುದು ಎಂದರೆ ಸಂಘದ ಸದಸ್ಯರಾದ ಮೇಲೆ ಒಂದಲ್ಲಾ ಒಂದು ವಿಧದಲ್ಲಿ ವ್ಯವಹಾರ ನಡೆಸಿರಬೇಕು. ಡಿಪಾಸಿಟ್ ಇಡುವುದು, ಸಾಲ ತೆಗೆದುಕೊಳ್ಳುವುದು ಇತ್ಯಾದಿ. ತಿದ್ದುಪಡಿ ಕಾನೂನಿನ ಮೇರೆಗೆ ಸಹಕಾರ ಚುನಾವಣಾ ಪ್ರಾಧಿಕಾರ ರಚನೆಯಾಗಿದೆ. ಈ ಪ್ರಾಧಿಕಾರದ ನಿಯಂತ್ರಣ ಮತ್ತು ನಿರ್ದೇಶನದ ಅಡಿಯಲ್ಲಿಯೇ ಚುನಾವಣೆ ನಡೆಯುತ್ತದೆ. ಪ್ರತಿ ಚುನಾವಣೆ ನಡೆಯುವಾಗ ಮತದಾರರ ಪಟ್ಟಿಯನ್ನು ತಯಾರಿಸಬೇಕು. ಚುನಾವಣಾ ಪ್ರಾಧಿಕಾರವು 12.6.2015 ರಂದು ಒಂದು ಸುತ್ತೋಲೆ ಹೊರಡಿಸಿ ಪ್ರತಿವರ್ಷ ಕಡ್ಡಾಯವಾಗಿ ಆಯಾ ವರ್ಷದ ಏಪ್ರಿಲ್ 1 ರಿಂದ ಮಾರ್ಚ್ 31ರವರೆಗೆ ಎಲ್ಲಾ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತದಾರರ ಪರಿಷ್ಕøತ ಪಟ್ಟಿಯನ್ನು ತಯಾರಿಸಲು ಸೂಚನೆ ನೀಡಲಾಗಿದೆ

    ಸಹಕಾರ ಸಂಘಗಳು ಜನರ ಪರಸ್ಪರ ಸಹಭಾಗಿತ್ವದ ಅಡಿಯಲ್ಲಿಯೇ ಬೆಳೆಯಬೇಕು. ಸಂಘದ ಸದಸ್ಯರಾಗಿರುವವರು ಸಂಘಗಳ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬೇಕು. ಆದರೆ ಸಂಘಗಳತ್ತ ತಿರುಗಿ ನೋಡುವುದಿರಲಿ, ಸಾಮಾನ್ಯ ಸಭೆಗಳಿಗೂ ಕೆಲವೊಮ್ಮೆ ಹಾಜರಾಗುವುದಿಲ್ಲ. ಹೀಗಾಗಿ ಕೆಲವು ಸಹಕಾರ ಸಂಘಗಳಲ್ಲಿ ತಮ್ಮದೇ ಆದ ಗುಂಪು ರಚನೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲವಾಗುತ್ತದೆ ಎಂಬ ಹಲವರ ಸಲಹೆ, ಸೂಚನೆಗಳ ಮೇರೆಗೆ ಬಹಳಷ್ಟು ತಿದ್ದುಪಡಿಗಳಾಗಿವೆ. ಈ ಹಿನ್ನೆಲೆಯಲ್ಲಿಯೇ 5 ಸಾಮಾನ್ಯ ಸಭೆಗಳ ಪೈಕಿ 3 ಸಭೆಗಳಿಗಾದರೂ ಹಾಜರಿರಬೇಕು ಎಂಬ ಅಂಶವನ್ನು ಕಡ್ಡಾಯಗೊಳಿಸಲಾಗಿರುವುದು.

    ಈ ತಿದ್ದುಪಡಿ ಕಾನೂನಿನಿಂದ ಮತದಾನದ ಹಕ್ಕು ಕಳೆದುಕೊಂಡವರು ರಾಜ್ಯ ಹೈಕೋರ್ಟ್ ಮೊರೆ ಹೋದರು. ಹಾಸನ ಹಾಲು ಉತ್ಪಾದಕರ ಒಕ್ಕೂಟವು ರಾಜ್ಯ ಸರ್ಕಾರದ ವಿರುದ್ಧ ರಿಟ್ ಅಪೀಲು ಸಲ್ಲಿಸಿತು. ಕಾಯ್ದೆಯ ಕಲಂ 20ರ ಪ್ರಕಾರ ಸಹಕಾರ ಸಂಘಗಳಲ್ಲಿ ನಡೆಯುವ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮೂರು ವಾರ್ಷಿಕ ಮಹಾಸಭೆಗಳಿಗೆ ಭಾಗವಹಿಸಿದ್ದರೆ ಮಾತ್ರವೇ ಮತದಾನ ಮಾಡುವ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ನೀಡಲಾಗಿದೆ. ಇದು ಜನರ ಹಕ್ಕುಗಳನ್ನೇ ಮೊಟಕುಗೊಳಿಸಿದಂತಾಗಿದೆ.

    ಗ್ರಾಮೀಣ ಭಾಗದ ಅನಕ್ಷರಸ್ಥ ಜನತೆಗೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಗೊಂದಲದಿಂದ ಸಭೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮತದಾನ ಮತ್ತು ಸ್ಪರ್ಧೆ ಮಾಡಲು ಹಕ್ಕು ನೀಡಬೇಕೆಂಬುದು ರಿಟ್ ಅರ್ಜಿಯ ಸಾರಾಂಶವಾಗಿತ್ತು. ಇತರರು ಸಲ್ಲಿಸಿದ್ದ ಅಪೀಲುಗಳನ್ನೂ ಸಹ ಪರಿಗಣಿಸಿ 30.4.2014 ರಂದು ಉಚ್ಛ ನ್ಯಾಯಾಲಯವು ಪ್ರಕರಣಗಳನ್ನು ವಿಲೇವಾರಿ ಮಾಡಿ ಮತದಾನದ ಹಕ್ಕು ನೀಡುವಂತೆ ಆದೇಶ ಹೊರಡಿಸಿತು. ಆದರೆ ಈ ಮಧ್ಯಂತರ ಆದೇಶ ನ್ಯಾಯಾಲಯದ ಮೊರೆ ಹೋಗಿದ್ದ ಸಂಘಗಳು ಮತ್ತು ಸದಸ್ಯರಿಗೆ ಮಾತ್ರ ಎಂಬುದು ಇಲ್ಲಿ ಗಮನಾರ್ಹ.

     ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂಬುದನ್ನೇ ನೆಪವೊಡ್ಡಿ ಸಹಕಾರ ಸಂಘದ ಚುನವಣೆಯಲ್ಲಿ ಸ್ಪರ್ಧಿಸುವ ಮತ್ತು ಮತದಾನ ಮಾಡುವ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು 2018 ಹಾಗೂ 19 ರಲ್ಲಿ ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ. ರಾಜ್ಯ ಹೈಕೋರ್ಟ್‍ನ ಈ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ಸಹಕಾರ ಚುನಾವಣಾ ಪ್ರಾಧಿಕಾರವು 3.1.2019 ರಂದು ಕೆಳಗಿನಂತೆ ಒಂದು ಸುತ್ತೋಲೆ ಹೊರಡಿಸಿದೆ.

      ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959, ತಿದ್ದುಪಡಿ ಕಾಯ್ದೆ 3, 2013 ರಂತೆ ಕಲಂ 20ರ ತಿದ್ದುಪಡಿ ಆಗಿದ್ದು, ಈ ತಿದ್ದುಪಡಿಯು 11.2.2013 ರಿಂದ ಜಾರಿಗೆ ಬಂದಿರುತ್ತದೆ. ಗೌರವ ಉಚ್ಛ ನ್ಯಾಯಾಲಯದ ಆದೇಶದಂತೆ ದಿನಾಂಕ 11.2.2013 ರ ನಂತರ ಯಾವ ಸಹಕಾರ ಸಂಘಗಳಿಗೆ ಪ್ರಥಮ ಬಾರಿಗೆ ಚುನಾವಣೆ ನಡೆಯುತ್ತಿದೆಯೋ ಅಂತಹ ಸಹಕಾರ ಸಂಘಗಳಿಗೆ ಮತದಾರರ ಪಟ್ಟಿ ತಯಾರು ಮಾಡುವಾಗ ನ್ಯಾಯಾಲಯದ ಆದೇಶದಂತೆ ಕ್ರಮ ವಹಿಸತಕ್ಕದ್ದು. 11.2.2013 ರ ನಂತರ ಯಾವ ಸಂಘಗಳಿಗೆ ಈಗಾಗಲೇ ಒಂದು ಚುನಾವಣೆ ನಡೆದು ಅವಧಿ ಮುಗಿದು 2ನೆ ಬಾರಿಗೆ ಚುನಾವಣೆ ನಡೆಯುತ್ತಿದೆಯೋ ಅಂದರೆ (11.2.2013 ರ ನಂತರ ಒಂದು ಚುನಾವಣೆ ನಡೆದು, ಆ ಸಹಕಾರ ಸಂಘಗಳ ಪದಾವಧಿ ಮುಗಿದು ಪುನಃ ಚುನಾವಣೆ ನಡೆಯುತ್ತಿದ್ದಲ್ಲಿ) ಅಂತಹ ಸಹಕಾರ ಸಂಘಗಳ ಮತದಾರರ ಪಟ್ಟಿ ತಯಾರಿಸುವಾಗ ತಿದ್ದುಪಡಿ ಕಾಯ್ದೆ ಅನ್ವಯ ಕ್ರಮ ತೆಗೆದುಕೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

     ತಿದ್ದುಪಡಿ ಕಾಯ್ದೆಯ ಅನುಷ್ಠಾನದಿಂದಾಗಿ ಬಹಳಷ್ಟು ಸಹಕಾರಿ ಸಂಘಗಳಲ್ಲಿ ಶೇ.70ಕ್ಕೂ ಹೆಚ್ಚು ಸದಸ್ಯರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಇದೇ ಈಗ ಎದುರಾಗುತ್ತಿರುವ ಬಹುದೊಡ್ಡ ಸಮಸ್ಯೆ. ಹಿಂದೆಯೇ ಕಾನೂನು ಬಂದಿದೆ, ತಿಳಿದುಕೊಳ್ಳಬೇಕಾಗಿತ್ತು, ಸಹಕಾರ ಸಂಘಗಳ ಕಚೇರಿಗೆ ತೆರಳಿ ಸಂಘದ ವಹಿವಾಟುಗಳನ್ನು ತಿಳಿದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಈಗ ಪ್ರಶ್ನಿಸಲು ಹೋಗುವುದು ಸರಿಯೇ ಎಂದು ಕೆಲವರು ಕೇಳುತ್ತಾರೆ. ಆದರೆ ಒಂದೆರಡು ಕಾರಣಗಳನ್ನು ಮುಂದಿಟ್ಟುಕೊಂಡು ಸ್ಪರ್ಧೆ ಮಾಡುವಂತಿಲ್ಲ, ಮತದಾನ ಮಾಡುವಂತಿಲ್ಲ ಎಂಬುದು ಯಾವ ನ್ಯಾಯ? ಇದು ನೈಸರ್ಗಿಕ ಹಕ್ಕಿನ ಉಲ್ಲಂಘನೆಯಲ್ಲವೆ ಎಂದು ಕೆಲವರು ತಮ್ಮ ವಾದ ಮುಂದಿಡುತ್ತಿದ್ದಾರೆ.

ತಿದ್ದುಪಡಿ ಕಾಯ್ದೆ ಅನ್ವಯ ಚುನಾವಣೆ ನಡೆಯುತ್ತಿರುವ ಸಂಘಗಳಲ್ಲಿ ಹಲವರು ಹೈಕೋರ್ಟ್‍ಗೆ ರಿಟ್ ಅರ್ಜಿ ದಾಖಲಿಸುತ್ತಿದ್ದಾರೆ. ರಾಜ್ಯ ಹೈಕೋರ್ಟ್ ಚುನಾವಣೆಗೆ ತಡೆಯಾಜ್ಞೆ ನೀಡುವುದಿಲ್ಲ. ಬದಲಾಗಿ ಮತದಾನದ ಹಕ್ಕು ಪರಿಗಣಿಸುವಂತೆ ತಿಳಿಸಿ ಮಧ್ಯಂತರ ಆದೇಶ ನೀಡುತ್ತಿದೆ. ಇದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದವರಿಗಷ್ಟೇ ಸೀಮಿತವಾಗುತ್ತದೆ. ಎಲ್ಲರಿಗೂ ಅನ್ವಯಿಸುವುದಿಲ್ಲ.

ಎಸ್.ಎಂ.ಶಿವಶಂಕರ್, ವಕೀಲರು.

ಸಂವಿಧಾನಕ್ಕೆ 97ನೇ ತಿದ್ದುಪಡಿ ತಂದು ಸಹಕಾರ ಸಂಘಗಳ ಚುನಾವಣಾ ಪ್ರಕ್ರಿಯೆಯಲ್ಲಿ ಮಾರ್ಪಾಟು ಮಾಡಲಾಗಿದೆ. ಇದೊಂದು ಕೇಂದ್ರ ಕಾಯ್ದೆ. ಈ ಕಾಯ್ದೆಯನ್ನು ರಾಜ್ಯ ಸರ್ಕಾರವೂ ಅನುಷ್ಠಾನಗೊಳಿಸಿದೆ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರ. ಪ್ರತಿಯೊಂದು ಆಗುಹೋಗುಗಳಲ್ಲಿ ಜನತೆಯ ಭಾಗವಹಿಸುವಿಕೆ ಮುಖ್ಯ. ಕನಿಷ್ಠ ಸಾಮಾನ್ಯ ಸಭೆಗಳಿಗೂ ಹಾಜರಾಗದೆ ಮತದಾನದ ಹಕ್ಕಷ್ಟೇ ಬೇಕು ಎನ್ನುವುದು ಸರಿಯೇ? ಸಂಘಗಳ ವ್ಯವಹಾರಗಳಲ್ಲಿ ಸದಸ್ಯರು ಭಾಗವಹಿಸಬೇಕಲ್ಲವೆ? ಎನ್ನುತ್ತಾರೆ ಸಹಕಾರಿ ಇಲಾಖೆಯ ಅಧಿಕಾರಿಯೊಬ್ಬರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link