ತುಮಕೂರು
ತುಮಕೂರು ನಗರವು ಸ್ಮಾರ್ಟ್ ಸಿಟಿ ಆಗುತ್ತಿರುವ ಸಂದರ್ಭದಲ್ಲಿ ಎಲ್ಲ ರೀತಿಯ ತೆರಿಗೆಗಳ ಸಂಗ್ರಹದಲ್ಲಿ ಪಾರದರ್ಶಕತೆ, ಕ್ಷಿಪ್ರತೆ, ದಕ್ಷತೆ ಮೂಡಿಸುವ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆಯು ಮಹತ್ವದ ಹೆಜ್ಜೆ ಇರಿಸಿದೆ. ಇದಕ್ಕಾಗಿ ಸ್ಮಾರ್ಟ್ ಆಗಿರುವ ಉಪಕರಣ (ಡಿವೈಸ್)ದ ಬಳಕೆಯನ್ನು ಪ್ರಾರಂಭಿಸಿದೆ. ವಿಶೇಷವೆಂದರೆ ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹುದೊಂದು ಸಾಧನೆ ಮಾಡಿರುವ ಹೆಗ್ಗಳಿಕೆಗೆ ಪಾಲಿಕೆಯು ಪಾತ್ರವಾಗಿದೆ.
ಆಸ್ತಿ ತೆರಿಗೆ ಒಳಗೊಂಡು ಎಲ್ಲ ರೀತಿಯ ತೆರಿಗೆಗಳ ಸಂಗ್ರಹ ಇದರಿಂದ ಸಲೀಸಾಗಲಿದೆ. ನಾಗರಿಕರ ಮನೆ ಬಾಗಿಲಿಗೇ ತೆರಳುವ ತುಮಕೂರು ಮಹಾನಗರ ಪಾಲಿಕೆಯ ಬಿಲ್ ಕಲೆಕ್ಟರ್‍ಗಳು ಸ್ಥಳದಲ್ಲೇ ಸುಲಭವಾಗಿ, ಪಾರದರ್ಶಕ ವಿಧಾನದಿಂದ ತೆರಿಗೆ ಸಂಗ್ರಹಿಸಬಹುದಾಗಿದೆ. ಈ ಡಿವೈಸ್‍ನಿಂದಾಗಿ ನಾಗರಿಕರು ತಮಗೆ ಸೇರಿದ ತೆರಿಗೆ ಮೊತ್ತವನ್ನು ನಗದು ರೂಪದಲ್ಲಾಗಲಿ, ಕಾರ್ಡ್ ಬಳಸಿಕೊಂಡಾಗಲಿ, ಚೆಕ್ ಮೂಲಕವಾಗಲಿ, ಡಿ.ಡಿ. ಮೂಲಕವಾಗಲಿ ಸಲ್ಲಿಸಬಹುದಾಗಿದೆ.
ಇದೇ ರೀತಿಯಲ್ಲಿ ಪಾಲಿಕೆಯ ಹೆಲ್ತ್ ಇನ್ಸ್‍ಪೆಕ್ಟರ್‍ಗಳು ನಗರದಲ್ಲಿರುವ ವ್ಯಾಪಾರಿಗಳಿಂದ ಟ್ರೇಡ್ ಲೈಸೆನ್ಸ್ ಶುಲ್ಕವನ್ನು ಸಹ ಸಂಗ್ರಹಿಸಲಿದ್ದಾರೆ. ಈಗಾಗಲೇ ಟ್ರೇಡ್ ಲೈಸೆನ್ಸ್ ಇರುವವರು ತಮ್ಮ ಲೈಸೆನ್ಸ್ ಸಂಖ್ಯೆ ಹೇಳಿದರೆ ಅವರಿಗೆ ಸಂಬಂಧಿಸಿದ ವಿವರಗಳು ಅದರಲ್ಲಿ ಪ್ರದರ್ಶನಗೊಳ್ಳಲಿದ್ದು, ಒಡನೆಯೇ ಶುಲ್ಕವನ್ನು ಪಾವತಿಸಬಹುದಾಗಿದೆ.
ಸುಮಾರು 500 ಗ್ರಾಂ ತೂಕದ ಈ ಡಿವೈಸ್‍ಗಳು ಪ್ರಿಂಟರ್ ಮತ್ತು ಕಾರ್ಡ್ ಸ್ವೈಪಿಂಗ್ ಸೌಲಭ್ಯವನ್ನು ಹೊಂದಿವೆ. ಒಟ್ಟು 40 ಡಿವೈಸ್‍ಗಳನ್ನು ಪಾಲಿಕೆಯ ಎಲ್ಲ ಬಿಲ್ ಕಲೆಕ್ಟರ್‍ಗಳಿಗೆ ಮತ್ತು ಹೆಲ್ತ್ ಇನ್ಸ್‍ಪೆಕ್ಟರ್‍ಗಳಿಗೆ ನೀಡಲಾಗಿದ್ದು, ಸೋಮವಾರದಿಂದ ಎಲ್ಲರೂ ಇದನ್ನು ಬಳಸಿಕೊಂಡು ತೆರಿಗೆ ಸಂಗ್ರಹದ ಕೆಲಸ ಆರಂಭ ಮಾಡಿದ್ದಾರೆ. ಈ ಉಪಕರಣವನ್ನು ಉಪಯೋಗಿಸಿಕೊಂಡು ಇವರುಗಳು ಮನೆಮನೆಗೆ ತೆರಳಿ ಸ್ಥಳದಲ್ಲೇ ತೆರಿಗೆ ಸಂಗ್ರಹಿಸುವರು. ಬಾಕಿ ಇದ್ದರೆ ಅದನ್ನೂ ಸಂಗ್ರಹಿಸುವರು. ಅಕ್ರಮ ನಲ್ಲಿ ಸಂಪರ್ಕಗಳನ್ನು ನಿಗದಿತ ಶುಲ್ಕದೊಂದಿಗೆ ಸಕ್ರಮಗೊಳಿಸುವರು. ಟ್ರೇಡ್ ಲೈಸೆನ್ಸ್‍ಗಳ ಶುಲ್ಕವನ್ನೂ ಸಂಗ್ರಹ ಮಾಡುವರು. ಎಲ್ಲೆಂದರಲ್ಲಿ ಉಗುಳುವುದು, ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವುದನ್ನು ಗಮನಿಸಿದರೆ ಜಿ.ಪಿ.ಎಸ್. ಸೌಲಭ್ಯದೊಂದಿಗೆ ಫೋಟೋವನ್ನೂ ತೆಗೆದು ಸ್ಥಳದಲ್ಲೇ ದಂಡ ವಿಧಿಸಬಹುದಾದ ಅನುಕೂಲವೂ ಈ ಉಪಕರಣಕ್ಕಿದೆ.
ರಾಜ್ಯದಲ್ಲೇ ಮೊದಲನೆಯದು
“ಈ ರೀತಿ ಸಮಗ್ರ ಸೌಲಭ್ಯದ ಉಪಕರಣ ಬಳಸಿಕೊಂಡು ತೆರಿಗೆಗಳ ಸಂಗ್ರಹಕ್ಕೆ ತುಮಕೂರು ಮಹಾನಗರ ಪಾಲಿಕೆಯು ತೊಡಗಿರುವುದು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲೇ ಮೊದಲನೆಯ ಪ್ರಯೋಗವಾಗಿದೆ. ಅಷ್ಟೇ ಅಲ್ಲ ಬಹುಶಃ ದೇಶದಲ್ಲೂ ಇದು ಮೊದಲನೇ ಪ್ರಯತ್ನವಾಗಿರಬಹುದೆಂದು ಅನಿಸುತ್ತಿದೆ” ಎಂಬುದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರ ಅಭಿಪ್ರಾಯವಾಗಿದೆ.