ಹೊಸಪೇಟೆ:
ಜಿಲ್ಲೆಯ ಜನರ ಹಿತದೃಷ್ಠಿಯಿಂದ ಯಾವುದೇ ಕಾರಣಕ್ಕೂ ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡಬಾರದು. ಈ ಹೋರಾಟಕ್ಕೆ ಪಕ್ಷದ ಯಾರೇ ಎಷ್ಟೇ ದೊಡ್ಡವರಿದ್ದರು ಹೋರಾಟ ನಿಲ್ಲದು ಎಂದು ಶಾಸಕ ಆನಂದ್ ಸಿಂಗ್ ತಿಳಿಸಿದರು. ನಗರದಲ್ಲಿ ಶನಿವಾರ ಸಂಜೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಂದಾಲ್ ಸಂಸ್ಥೆ ಹಾಗೂ ಪಕ್ಷದ ಕೆಲವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ಬಗ್ಗೆ ಪಕ್ಷದ ಸಚಿವರು, ಜಿಲ್ಲೆಯ ವಿಧಾನಪರಿಷತ್ ಸದಸ್ಯರು ಸೇರಿದಂತೆ ಅನ್ಯ ಪಕ್ಷದ ಕೆಲ ಮುಖಂಡರು ನಿಂತಿದ್ದಾರೆ. ಆದರೆ ನನಗೆ ಪಕ್ಷಕ್ಕಿಂತಲೂ ಕ್ಷೇತ್ರದ ಹಾಗೂ ಜಿಲ್ಲೆಯ ಜನರ ಹಿತ ಮುಖ್ಯವಾಗಿದೆ ಎಂದು ಗುಡುಗಿದರು.
ಈಗಾಗಲೇ ಪಕ್ಷಾತೀತ ಹೋರಾಟ ನಡೆಸುವ ಬಗ್ಗೆ ಜಿಲ್ಲೆಯ ಕೆಲವರನ್ನು ಸಂಪರ್ಕಿಸಿದ್ದು ಮೌಖಿಕವಾಗಿ ಕೈಜೋಡಿಸುವ ಬಗ್ಗೆ ತಿಳಿಸಿದ್ದಾರೆ. ಒಂದೆರೆಡು ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ಹೋರಾಟ ಎಲ್ಲಿಂದ ಆರಂಭಿಸಬೇಕು ಹಾಗೂ ಈ ಹೋರಾಟದಲ್ಲಿ ಯಾರ್ಯಾರು ಇದ್ದಾರೆ ಎಂಬುದುನ್ನು ಕಾದು ನೋಡಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಾವುದು ನಂ.1: ಜಿಂದಾಲ್ ಸಂಸ್ಥೆ ದೇಶದಲ್ಲಿಯೇ ಉಕ್ಕು ಉತ್ಪಾದನೆಯಲ್ಲಿ ನಂ.1 ಎಂದು ಹೆಮ್ಮೆಪಡಲಾಗುತ್ತದೆ. ಆದರೆ ಕಾರ್ಖಾನೆ ಸುತ್ತಮುತ್ತಲಿನ ಹಳ್ಳಿಗಳು ಯಾವ ಹಂತದಲ್ಲಿದೆ, ಭೂಮಿ ಕಳೆದುಕೊಂಡವರ, ಅವರ ಕುಟುಂಬದ ಸ್ಥಿತಿಗತಿ ಯಾವ ಹಂತದಲ್ಲಿದೆ ಎನ್ನುವುದನ್ನು ಅವಲೋಕಿಸಬೇಕು, ಅದನ್ನು ಬಿಟ್ಟು ಜಿಂದಾಲ್ ಪರವಾಗಿ ಮಾತನಾಡುವವರು ಮೊದಲು ಅರಿಯುವ ಅಗತ್ಯವಿದೆ ಎಂದು ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದರು.
ಭೂಮಿ ಏನಾಗಿದೆ? ಎರಡ್ಮೂರು ದಶಕಗಳ ಹಿಂದೆ ಆರಂಭಗೊಂಡಿರುವ ಜಿಂದಾಲ್ ಸಂಸ್ಥೆಗೆ ನೀಡಿರುವ ಭೂಮಿ ಎಷ್ಟು ನೀಡಲಾಗಿದೆ, ನೀಡಿರುವ ಭೂಮಿಯಲ್ಲಿ ಬಳಕೆಯಾಗಿದೆಷ್ಟು, ಉಳಿದ ಭೂಮಿಯಲ್ಲಿ ಯಾವೆಲ್ಲ ವ್ಯವಹಾರ ನಡೆಯುತ್ತಿದೆ, ಸಂಸ್ಥೆಯಿಂದ ಜಿಲ್ಲೆಯ ಯುವಕರಿಗೆ ಎಷ್ಟು ಉದ್ಯೋಗ ನೀಡಲಾಗಿದೆ, ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿದೆಷ್ಟು ಎನ್ನುವುದನ್ನು ಸಂಸ್ಥೆ ಅಧಿಕೃತ ವೆಬ್‍ಸೈಟ್‍ನಲ್ಲಿ ಬಹಿರಂಗಗೊಳಿಸಲಿ ಎಂದು ಸವಾಲು ಹಾಕಿದರು.
ಕಳೆದ 15 ವರ್ಷಗಳಲ್ಲಿ ನಾನು ಸಹಿಹಾಕಿರುವ 5ಸಾವಿರಕ್ಕೂ ಹೆಚ್ಚು ಶಿಫಾರಸು ಪತ್ರಗಳಿಗೆ ಒಂದೇ ಒಂದು ಉದ್ಯೋಗ ದೊರಕಿಲ್ಲ. ಆದರೆ ಸಂಸ್ಥೆಯೂ ಏರ್‍ಪೋರ್ಟ್‍ನಲ್ಲಿ ಜ್ಯೂಸ್, ಚಹಾ, ಟೀಫನ್ ಮಾಡುವವರಿಗೆ ಮಣೆಹಾಕುತ್ತಾರೆ, ನಮ್ಮಂತವರ ಬಳಿ ಅವರು ಬರುವುದಿಲ್ಲ ಎಂದು ಪರೋಕ್ಷವಾಗಿ ಸಂಸ್ಥೆಯ ಪರವಾಗಿ ಲಾಭಿ ನಡೆಸುತ್ತಿರುವ ಸಚಿವರು, ಶಾಸಕರು, ಮುಖಂಡರ ವಿರುದ್ಧ ಕಿಡಿಕಾರಿದರು. ಭೂಮಿ ಪರಭಾರೆ ವಿಚಾರದಲ್ಲಿ ಕೋಟ್ಯಂತರ ರೂ.ಗಳ ವಹಿವಾಟು ನಡೆದಿರುವ ಅನುಮಾನವಿದೆ ಎಂದು ಹೇಳಿದರು.
ನಿವೃತ್ತ ಅಧಿಕಾರಗಳ ಲಾಭಿ: ಕಾರ್ಖಾನೆಗಳಿಗೆ ಭೂಮಿ ಸೇರಿದಂತೆ ಇನ್ನಿತರ ವಿಚಾರಗಳಿಗೆ ಉನ್ನತ ಹುದ್ದೆಯಲ್ಲಿದ್ದು ನಿವೃತ್ತಹೊಂದಿದ ಅಧಿಕಾರಿಗಳ ವರ್ಗವಿದೆ. ನಿವೃತ್ತ ಅಧಿಕಾರಿಗಳಿಗೆ ಲಕ್ಷಾಂತರ ರೂಗಳ ಹಣ ನೀಡಿ ಮಾರ್ಗದರ್ಶಕರನ್ನಾಗಿ ಕಾರ್ಖಾನೆಗಳು ನೇಮಕಮಾಡಿಕೊಂಡಿವೆ. ಇವರಿಂದ ಉನ್ನತ ಮಟ್ಟದಲ್ಲಿ ಎಲ್ಲ ಬಗೆಯಲ್ಲಿಯೂ ಕಾರ್ಖಾನೆ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ನಿವೃತ್ತ ಅಧಿಕಾರಿಗಳು ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಲಾಭಿನಡೆಸುತ್ತಿದ್ದಾರೆ.
ಬೆಂಗಳೂರು ಬಳಿ ಅಲ್ಯೂಮಿನಿಯಂ ಕೈಗಾರಿಕೆಗೆ ಲ್ಯಾಂಡ್ ಪಡೆದು ರಿಯಲ್ ಎಸ್ಟೆಟ್ ದಂಧೆಯಲ್ಲಿ ಇದೇ ಸಂಸ್ಥೆ ತೋಡಗಿರುವುದು, ಈ ಸಂಸ್ಥೆಯ ಪರವಾಗಿ ಮಾತನಾಡುವವರಿಗೆ ಕಾಣುವುದಿಲ್ಲವೇ ಎಂದು ಕುಟುಕಿದರು. ಇದೇ ರೀತಿಯಲ್ಲಿ ಇಲ್ಲಿಯೂ ಭೂಮಿ ಪರಭಾರೆಮಾಡಿದಲ್ಲಿ ಮುಂದೊಂದು ದಿನ ರಿಯಲ್ ಎಸ್ಟೆಟ್ ದಂಧೆಯಲ್ಲಿ ತೋಡಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆತಂಕವ್ಯಕ್ತಪಡಿಸಿದರು.
ಕಾರ್ಖಾನೆಗಳು ಸ್ಥಾಪನೆ ಬಳಿಕ ನೀರಿನ ವ್ಯವಸ್ಥೆ ಹೇಗಿದೆ ಅರಿಯಬೇಕು. ನೀರಿನ ಪೈಪ್‍ಲೈನ್ ಮೂಲಕ ನೀರು ಸೋರಿಕೆಯಾಗುತ್ತಿದೆ.ಜಲಾಶಯದಲ್ಲಿ ನೀರಿಲ್ಲ, ಆದರೆ ಜಿಂದಾಲ್ ಕಾರ್ಖಾನೆ ಒಳಗೆ ನಿರ್ಮಿಸಿರುವ ಮಿನಿ ಡ್ಯಾಂ ಭರ್ತಿಯಾಗಿದೆ. ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಾರ್ಖಾನೆಗಳು ನೀರು ಪಡೆಯುತ್ತಿದೆ ಎಂದು ದೂರಿದರು.
ಜಿಂದಾಲ್ ಸಂಸ್ಥೆ ಸಾಕಷ್ಟು ಲಾಭ ಪಡೆಯುತ್ತಿದೆ. ಆದರೆ ಹೊಸಪೇಟೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಎಷ್ಟು ವೆಚ್ಚಮಾಡಿದೆ
ಎಂಬುದನ್ನು ಬಹಿರಂಗಪಡಿಸಲಿ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಮಾದರಿಯಲ್ಲಿಯೇ ಜಿಂದಾಲ್ ಸಂಸ್ಥೆ ಜಿಲ್ಲೆಯ ಜನರೊಂದಿಗೆ ನಡೆದುಕೊಳ್ಳುತ್ತಿದ್ದು ಇದಕ್ಕೆ ಅಧಿಕಾರಿಗಳು ತಾಳಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ದೊಡ್ಡ ದೊಡ್ಡ ಕಂಪನಿ ಮಾಲೀಕರು ಸಾವಿರಾರು ಎಕರೆ ಭೂಮಿಗಳನ್ನು ಲ್ಯಾಂಡ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಕಾರ್ಖಾನೆಗಳನ್ನು ಸ್ಥಾಪಿಸಲು ಭೂಮಿ ಪಡೆದು ಕಾರ್ಖಾನೆ ಸ್ಥಾಪಿಸದೆ ಭೂಮಿಗೆ ಬೇಲಿ ಹಾಕಿಕೊಂಡಿದ್ದಾರೆ ಎಂದು ದೂರಿದರು. ಜಿಲ್ಲೆಯ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಎಲ್ಲವನ್ನು ಬದಿಗಿಟ್ಟು ಒಗ್ಗೂಡುವ ಮೂಲಕ ಹೋರಾಟಕ್ಕೆ ಮುಂದಾಗಬೇಕು. ಮಾಜಿ ಶಾಸಕ ರತನ್ ಸಿಂಗ್, ಮುಖಂಡರಾದ ಅಶೋಕ್ ಜೀರೆ, ಜಿ.ಕೆ. ಹನುಮಂತಪ್ಪ, ಪರುಶುರಾಮ್, ಕಾರ್ತೀಕ್, ಗುಜ್ಜಲ್ ನಿಂಗಪ್ಪ, ಕಟಗಿ ಜಂಬಯ್ಯ, ಸಂತೋಷ್, ಖಾದರ್, ರಫೀಕ್ ಮುಂತಾದವರು ಇದ್ದರು.