ಹೊಸಪೇಟೆ:
ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡು ರಾಜೀನಾಮೆ ನೀಡಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ದೂರು ನೀಡಿದ್ದವರಿಗೆ ಆನಂದ್ ಸಿಂಗ್ ಈಗ ಉತ್ತರ ನೀಡಿದ್ದಾರೆ.ಆನಂದ್ ಸಿಂಗ್ ಕಾಣೆಯಾಗಿದ್ದಾರೆ ಎಂದು ಕೆಲವರು ದೂರು ನೀಡಿದ್ದ ಹಿನ್ನೆಲೆ ವಿಜಯ ನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಶನಿವಾರ ರಾತ್ರಿ 9 ಗಂಟೆಗೆ ಹೊಸಪೇಟೆ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
ನಾನು ಎಲ್ಲಿಗೂ ಹೋಗಿಲ್ಲ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದೆ ಎಂದು ಪತ್ರದ ಮೂಲಕ ಪೊಲೀಸರಿಗೆ ಸ್ಪಷ್ಟನ ನೀಡಿದ್ದಾರೆ.ನಾನು 13 ನೇ ತಾರೀಖಿನವರೆಗೂ ಹೊಸಪೇಟೆಯಲ್ಲಿದ್ದೆ. ಅಂದು ಸಂಜೆ ನಮ್ಮ ತಂದೆ ಪೃಥ್ವಿರಾಜ್ ಸಿಂಗ್ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಡಾ.ಬಿ ಆರ್ ಆಚಾರ್ಯ ಅವರ ಸಲಹೆ ಮೇರೆಗೆ ಜು. 15ರಂದು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ತೆರಳಿದ್ದೆವು. ಬಳಿಕ ಚಿಕಿತ್ಸೆ ಕೊಡಿಸಿ ಜು. 17 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. 18 ಮತ್ತು 19 ರಂದು ಬೆಂಗಳೂರಿನಲ್ಲೇ ಇದ್ದು ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಸುತ್ತಿದ್ದೆ ಎಂದು ಹೇಳಿದ್ದಾರೆ.
ಮಾಧ್ಯಮದಲ್ಲಿ ನಾನು ಕಣ್ಮರೆಯಾಗಿದ್ದೇನೆ ಎಂದು ದೂರು ದಾಖಲಾಗಿರುವ ಬಗ್ಗೆ ತಿಳಿಯಿತು. ಹೀಗಾಗಿ ತಂದೆ ಅವರು ಇನ್ನೂ ಗುಣವಾಗದಿದ್ದರೂ ಹೊಸಪೇಟೆಗೆ ಬಂದು ಸ್ಪಷ್ಟನೆ ಕೊಟ್ಟಿದ್ದೇನೆ ಎಂದು ಪತ್ರದ ಜತೆ ಆಸ್ಪತ್ರೆಯಲ್ಲಿ ಸಿಂಗ್ ತಂದೆ ಪೃಥ್ವಿರಾಜ್ ಸಿಂಗ್ ಅನಾರೋಗ್ಯದ ದಾಖಲೆ ಪ್ರತಿ ಲಗತ್ತಿಸಿದ್ದಾರೆ.
ಶಾಸಕರನ್ನು ಹುಡುಕಿಕೊಡಿ ಎಂದು ದೂರುಶಾಸಕ ಆನಂದ್ ಸಿಂಗ್ ಕಾಣೆಯಾಗಿದ್ದಾರೆ. ನಮ್ಮ ಶಾಸಕರನ್ನು ಹುಡುಕಿ ಕೊಡಿ ಎಂದು ಹೊಸಪೇಟೆ ಕಾಂಗ್ರೆಸ್ ಪದಾಧಿಕಾರಿಗಳಿಂದ ಹೊಸಪೇಟೆ ನಗರಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ಟ್ವೀಟ್ ಮಾಡಿದ್ದ ಆನಂದ್ ಸಿಂಗ್, ನನ್ನನ್ನು ಹುಡುಕುವ ಅಗತ್ಯವಿಲ್ಲ. ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ. ನನ್ನ ಬಗ್ಗೆ ಆಲೋಚಿಸಬೇಡಿ ಎಂದು ಕ್ಷೇತ್ರದ ಜನರಿಗೆ ಮನವಿ ಮಾಡಿದ್ದರು.