ಅಂಚೆ ನೌಕರರಿಗೆ ಕ್ಲಾಸ್ ತೆಗೆದುಕೊಂಡ ಸಿ ಪಿ ಆಡೂರ

ಬ್ಯಾಡಗಿ:

      ಸಾಮಾಜಿಕ ಭದ್ರತೆ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳಿಗೆ ಪ್ರತಿ ತಿಂಗಳು ಸರಿಯಾಗಿ ಹಣ ತಲುಪುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ, ಇದರಿಂದ ದೇಶದಲ್ಲೇ ಉತ್ತಮ ಇತಿಹಾಸ ಹೊಂದಿರುವ ಅಂಚೆ ಇಲಾಖೆಗೆ ಮಸಿ ಬಳಿಯುವಂತಹ ಕೆಲಸ ಕೆಲ ಪೋಷ್ಟಮನ್ (ಅಂಚೆ ವಿತರಕರು) ಗಳಿಂದಾಗುತ್ತಿದೆ, ಸದರಿ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತನಿಖಾಧಿಕಾರಿ (ಇನಸ್ಪೆಕ್ಟರ್) ಸಿ.ಪಿ.ಆಡೂರ ಎಚ್ಚರಿಸಿದ ಘಟನೆ ಮಂಗಳವಾರ ಪಟ್ಟಣದ ಅಂಚೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜರುಗಿತು.

      ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಜನ ಆಂಧೋಲನ (ನ್ಯಾಸ ನವದೆಹಲಿ) ಹಾವೇರಿ ಜಿಲ್ಲಾ ಘಟಕವು ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಕರೆಯಲಾಗಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದಿಂದ ಬಿಡುಗಡೆಗೊಳಿಸಿ ಹಣವು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದಲೇ ಅಂಚೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು ತನ್ಮೂಲಕ ಫಲಾನುಭವಿಗಳಿಗೆ ಹಣ ವಿತರಿಸಲಾಗುತ್ತಿದೆ, ಅದಾಗ್ಯೂ ಸಹ ನಿಯತ್ತಿಗೆ ಹೆಸರಾದಂತಹ ಅಂಚೆ ಇಲಾಖೆಯ ಮೇಲೆಯೇ ಸಾರ್ವಜನಿಕರು ದೂರು ನೀಡುವಂತಹ ಸ್ಥಿತಿ ಬಂದೊದಗಿರುವುದು ದುರದೃಷ್ಟಕರ ಸಂಗತಿ ಎಂದರು.

      ಪಾರದರ್ಶಕತೆ ಕಾಣುತ್ತಿಲ್ಲ: ಜಿಲ್ಲಾ ಘಟಕದ ಸಂಚಾಲಕ ಹಾಗೂ ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, ಅಂಚೆ ಇಲಾಖೆಯಲ್ಲಿ ಪಾರದರ್ಶಕತೆ ಮಾಯವಾಗಿದೆ, ವಯೋವೃದ್ಧರು, ವಿಕಲಚೇತನರು, ವಿಧವೆಯರಲ್ಲಿ ಬಹುತೇಕರು ಅನಕ್ಷರಸ್ಥರಾಗಿದ್ದಾರೆ, ಇದನ್ನೇ ದೌರ್ಬಲ್ಯವೆಂದು ಭಾವಿಸಿಕೊಂಡ ಅಂಚೆ ಇಲಾಖೆ ಸಿಬ್ಬಂದಿ ಪ್ರತಿ ತಿಂಗಳು ಹಣ ವಿತರಿಸದೇ ಮೂರ್ನಾಲ್ಕು ತಿಂಗಳಿಗೊಮ್ಮೆ ನೀಡುವ ಮೂಲಕ ಮೋಸವೆಸಗುತ್ತಿದ್ದಾರೆ, ಇದನ್ನು ಪ್ರಶ್ನಿಸಿದರೇ ಹಾರಿಕೆ ಉತ್ತರ ನೀಡುತ್ತಿದ್ದು ಒಬ್ಬರ ಮೇಲೊಬ್ಬರು ಕಾರಣ ಹೇಳಿಕೊಂಡು ತಿರುಗಾಡುತ್ತಿದ್ದು ಕೂಡಲೇ ಇಂತಹವುಗಳಿಗೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

      ಫಲಾನುಭವಿಗಳಿಗೆ ತಲುಪದೇ ಕೋಟಿಗಟ್ಟಲೇ ಹಣ ಬ್ಯಾಂಕಿನಲ್ಲೇ ಕೊಳೆಯುತ್ತಿದೆ: ಫರೀದಾಬಾನು ನದೀಮುಲ್ಲಾ ಮಾತನಾಡಿ, ಪ್ರತಿ ತಿಂಗಳು ಬ್ಯಾಡಗಿ ತಾಲೂಕಿನ ಫಲಾನುಭವಿಗಳಿಗೆ ರೂ.1.5 ಕೋಟಿಗಳಷ್ಟು ಹಣ ಸರ್ಕಾರದಿಂದ ಬಿಡುಗಡೆಯಾಗುತ್ತಿದೆ, ಆದರೆ ಪ್ರತಿದಿನ ಕೇವಲ 5 ಲಕ್ಷ ಮಾತ್ರ ಡ್ರಾ ಮಾಡಿಕೊಳ್ಳುವ ಅಂಚೆ ಇಲಾಖೆಯು, ಪ್ರತಿ ತಿಂಗಳು ಬಿಡುಗಡೆಯಾದ ಹಣವನ್ನು ಅದೇ ತಿಂಗಳು ಫಲಾನುಭವಿಗಳಿಗೆ ವಿತರಿಸದೇ ಕನಿಷ್ಟ ಎರಡು ತಿಂಗಳು ವಿಳಂಬವಾಗಿ ಮಾಡಲಾಗುತ್ತಿದೆ, ಇದರಿಂದ ಫಲಾನುಭವಿಗಳ ಕೋಟಿಗಟ್ಟಲೇ ಹಣ ಬ್ಯಾಂಕಿನಲ್ಲೇ ಕೊಳೆಯುವಂತೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ..? ಎಂದ ಅವರು, ಇದನ್ನು ಪ್ರಶ್ನಿಸಿದರೇ ನಮ್ಮಲ್ಲಿ ಹಣ ಇಟ್ಟುಕೊಳ್ಳಲು ನಮಗೆ ಅಧಿಕಾರವಿಲ್ಲ ಹೀಗಾಗಿ ದಿನಕ್ಕೆ ಎಷ್ಟು ಬೇಕೋ ಅಷ್ಟು ಹಣವನ್ನು ಮಾತ್ರ ಬಟವಡೆ ಮಾಡುತ್ತೇವೆ ಎಂಬುದಾಗಿ ಸಬೂಬು ನೀಡುತ್ತಿದ್ದಾರೆ ಎಂದರು.

      ಪ್ರತಿ ತಿಂಗಳು ಮಾಹಿತಿ ಕೊಡಿ: ಸುರೇಶ ಛಲವಾದಿ ಮಾತನಾಡಿ, ಯಾವ ತಿಂಗಳ ಹಣವನ್ನು ಪಡೆಯುತ್ತಿದ್ದೇವೆ ಎಂಬ ಮಾಹಿತಿ ಫಲಾನುಭವಿಗಳಿಗೆ ಮಾಹಿತಿ ಇಲ್ಲದಂತಾಗಿದೆ, ಹೀಗಾಗಿ ಫಲಾನುಭವಿಗಳ ಎರಡ್ಮೂರು ತಿಂಗಳ ಹಣ ಪೋಷ್ಟ ಮನ್‍ರ ಜೇಬುಗಳಲ್ಲಿ ಉಳಿಯುತ್ತಿದೆ, ಇದಕ್ಕೆ ಕಾರಣರ್ಯಾರು..? ನಾಳೆಯಿಂದಲೇ ಯಾವ ತಿಂಗಳ ಹಣ ಬಟವಡೆ ಮಾಡುತ್ತಿದ್ದೇವೆ ಹಾಗೂ ಬಾಕಿ ಉಳಿದ ತಿಂಗಳ ಮಾಹಿತಿಗಳನ್ನು ನೋಟಿಸ್ ಬೋರ್ಡಗಳಲ್ಲಿ ಎಲ್ಲರಿಗೂ ಕಾಣಿಸುವಂತೆ ಪ್ರದರ್ಶಿಸಬೇಕು ಮತ್ತು ಈ ಕುರಿತು ಪತ್ರಿಕೆಗಳಲ್ಲಿಯೂ ಪ್ರಕಟವಾಗುವಂತೆ ನೋಡಿಕೊಳ್ಳಬೇಕು ಎಂದರು.

      ಕುಳಿತುಕೊಳ್ಳಲು ಖುರ್ಚಿಯಿಲ್ಲ:ವಿಕಲಚೇತನರ ಸಂಘದ ತಾಲೂಕಾಧ್ಯಕ್ಷ ಪಾಂಡು ಸುತಾರ ಮಾತನಾಡಿ, ಸದರಿ ಅಂಚೆ ಕಚೇರಿಯಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ, ಸಿಬ್ಬಂದಿಗಳ ಕೊರತೆ ಸೇರಿದಂತೆ ಕುಡಿಯುವ ನೀರು, ಸುಸಜ್ಜಿತ ಖುರ್ಚಿಗಳು, ಅಂಚೆ ಕಛೇರಿಯಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಫಲಕ (ಇನ್‍ಫರ್ಮೇಶನ್ ಬೋರ್ಡ), ವಿಕಲಚೇತನಿರಿಗೆ ರ್ಯಾಂಪ್, ವಾಚಮನ್, ಹಣ ಸಂಗ್ರಹಿಸಿಡುವ ಸ್ಟ್ರಾಂಗ್ ರೂಮ್, ದಿನದ 24 ಗಂಟೆ ವಿದ್ಯುತ್ ಸಂಪಕಗಳ ವ್ಯವಸ್ಥೆಯಿಲ್ಲ ಹೀಗಾಗಿ ಅಂಚೆ ಕಛೇರಿ ತಾಲೂಕಿನ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದ ಅವರು, ಇನ್ನೂ ಇಂತಹ ದುರ್ಬಲ ಅಂಚೆ ಕಚೇರಿಗಳನ್ನು ಬ್ಯಾಂಕ್ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಮೇಲ್ದರ್ಜೆಗೇ ರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ತಮ್ಮ ನಿರ್ಣಯವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳುವಂತೆ ಆಗ್ರಹಸಿದರು.

       ಈ ಸಂದರ್ಭದಲ್ಲಿ ಸ್ಥಳೀಯ ಅಂಚೆ ಕಚೇರಿಯ ಪೋಷ್ಟ ಮಾಷ್ಟರ್ ಎಚ್.ಯು.ಹಿತ್ತಲಮನಿ, ಎಸ್.ಎಮ್.ಕೊರಕಲಿ, ಪಿರಾಂಬಿ ವರ್ಧಿ, ಗುತ್ತೆವ್ವ ಹರಿಜನ ಸೇರಿದಂತೆ ಅಂಚೆ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link