ದಾವಣಗೆರೆ:
ಅಂಗೈನಲ್ಲಿರುವ ರೇಖೆಗಳು ನಿಮ್ಮ ಭವಿಷ್ಯ ನಿರ್ಮಿಸದು, ಬದಲಿಗೆ ನೀವು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಉಜ್ವಲ ಭವಿಷ್ಯ ರೂಪಿಸಲಿವೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.
ನಗರದ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ನಡೆದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು, ಬಂಗಾರದಂತ ಜೀವನ ಸಾಗಿಸಲು ಉತ್ತಮ ನಿರ್ಧಾರ ಕೈಗೊಳ್ಳಬೇಕು. ಮನೆ ನಿರ್ಮಿಸಲು ಯೋಜನೆ ಹೇಗೆ ಮುಖ್ಯವೋ ಹಾಗೆಯೇ, ವಿದ್ಯಾರ್ಥಿಗಳು ಜೀವನದ ಬಗೆಗೂ ಯೋಜನೆ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜೀವನ ಒಂದು ಕಲೆ ಇದ್ದಂತೆ. ಇದನ್ನು ಕರಗತ ಮಾಡಿಕೊಂಡರೆ ಬದುಕಿಗೆ ಬೆಲೆ ಬರುತ್ತದೆ. ಇಲ್ಲದಿದ್ದರೆ ಬದುಕು ಬಲೆಯಾಗುತ್ತದೆ. ಓದುವ ಹಂತದಲ್ಲೇ ಚೆನ್ನಾಗಿ ಅಭ್ಯಸಿಸಬೇಕು. ಮೊಬೈಲ್, ಸಿನಿಮಾ, ಕ್ರಿಕೆಟ್ ಎಂದು ಮನರಂಜನೆಗೆ ಹೆಚ್ಚು ಒತ್ತು ನೀಡಿ, ಕಾಲ ಹರಣ ಮಾಡದೆಯೇ ಪರಿಶ್ರಮಪಟ್ಟು ಓದುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಮೊಬೈಲ್ ಸದ್ಬಳಕೆಗೆ ವಿನಿಯೋಗವಾಗಬೇಕೇ ಹೊರತು ಅದರಿಂದ ಜೀವನ ಹಾಳಾಗಬಾರದು. ಅರ್ಥ ಆಗುವ ರೀತಿಯಲ್ಲಿ ಓದಬೇಕು. ಓದಿದ್ದನ್ನು ಪುನರ್ ಮನನ ಮಾಡಿಕೊಳ್ಳಬೇಕು. ಅದನ್ನು ಬರೆಯಬೇಕು. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದ ಶ್ರೀಗಳು, ವಿದ್ಯಾರ್ಥಿ ಜೀವನದ ಕಾಯಕವೇ ಓದು. ಯಾವಾಗಲೂ ಓದಿನ ಗುಂಗು ಇರಬೇಕೆ ವಿನಾ ದುಶ್ಚಟಗಳ ಗುಂಗಿಗೆ ಬಲಿಯಾಗಬಾರದು ಎಂದರು.
ಕಾಲೇಜಿನ ಸಿಬ್ಬಂದಿ ಸುಜಾತಮ್ಮ ಹಾಗೂ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ .ಕೆ.ಎಸ್.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. . ಮಲ್ಲಿಕಾರ್ಜುನ ಹಲಸಂಗಿ, ಅನಿತಾಕುಮಾರಿ, ಡಾ.ಜೆ.ಕೆ. ಮಲ್ಲಿಕಾರ್ಜುನಪ್ಪ ಮತ್ತಿತರರು ಉಪಸ್ಥಿತರಿದ್ದರು.