ಬೆಂಗಳೂರು
ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್ಕೆಜಿ, ಯುಕೆಜಿ) ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ನಗರದ ಪುರಭವನ ಮುಂಭಾಗ ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದರು.
ಸೋಮವಾರ ಬೆಳಿಗ್ಗೆ ನಡೆಸಿದ ಪ್ರತಿಭಟನೆಯಲ್ಲಿ ಸೇರಿದ್ದು ಸಾವಿರಾರು ಮಂದಿ ಅಂಗನವಾಡಿ ಕಾರ್ಯಕರ್ತೆಯರು, ಎಲ್ಕೆಜಿ, ಯುಕೆಜಿ ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿದರೆ, ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಪಾಲನಾ ಕೇಂದ್ರವಾಗಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಬೇಕು. ಎಲ್ಕೆಜಿ, ಯುಕೆಜಿಯನ್ನು ಅಂಗನವಾಡಿಯಲ್ಲಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ಗ್ರಾಮಗಳಲ್ಲೂ ಶಿಶುಪಾಲನಾ ಕೇಂದ್ರಗಳನ್ನು ತೆರೆಯಬೇಕು. 1 ರಿಂದ 3ರವರೆಗಿನ ವರ್ಷದ ಮಗುವಿಗೆ ಶಿಶುಪಾಲನಾ ಕೇಂದ್ರಗಳಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ಅಂಗನವಾಡಿ ಕಾರ್ಯಕರ್ತರು ಒತ್ತಾಯಿಸಿದರು.
ಶಿಶುಪಾಲನಾ ಕೇಂದ್ರಗಳಿಗೆ ತರಬೇತಿ ಪಡೆದ ಶಿಕ್ಷಕ ಹಾಗೂ ಓರ್ವ ಸಹಾಯಕರನ್ನು ನೇಮಿಸಿ ಆರೋಗ್ಯ ಸೇವಾ ಕಾರ್ಯಕರ್ತೆಯರ ನಿರಂತರ ಸೇವೆಯನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.ಪ್ರತಿಭಟನಾ ವೇಳೆ ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರಿಗೆ ಪ್ರತಿಭಟನಾಕಾರರು ಎರಡು ನಿಮಿಷ ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದರು.