ತಾವರೇಕೆರೆ : ಅಂಗನವಾಡಿ ಮಕ್ಕಳಿಗೆ ಮರದ ನೆರಳೆ ಸೂರು….!

ಬೀದಿಗೆ ಬಿದ್ದ ಮಕ್ಕಳ ಬದುಕು ಕಟ್ಟಿಕೊಡುವವರೆ ಇಲ್ಲವೆ?

ಶಿರಾ

ವಿಶೇಷ ವರದಿ: ಬರಗೂರು ವಿರೂಪಾಕ್ಷ

     ಶಿರಾ ಕ್ಷೇತ್ರದಿಂದ ಆಯ್ಕೆಗೊಂಡ ಯಾವ ಜನಪ್ರತಿನಿಧಿಗಳೆ ಆಗಲಿ ಸರ್ಕಾರದಿಂದ ತರುವ ಅನುದಾನದ ಹಣ ಮಾತ್ರ ಕೋಟಿ ಲೆಕ್ಕದಲ್ಲಿ ಲೆಕ್ಕಾಚಾರ ಮಾಡಿ ಉದ್ದುದ್ದ ಭಾಷಣ ಬಿಗಿಯುವುದಷ್ಟೇ ಅಲ್ಲದೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ.

     ಕ್ಷೇತ್ರದ ಅಭಿವೃದ್ಧಿಯ ನೆಪದಲ್ಲಿ ಕಳೆದ 10-15 ವರ್ಷಗಳಿಂದಲೂ ಕೋಟಿ ಕೋಟಿ ರೂ.ಗಳ ಅನುದಾನ ಶಿರಾ ಕ್ಷೇತ್ರಕ್ಕೆ ಹರಿದು ಬಂದಿದೆ. ಒಂದಲ್ಲಾ ಎರಡಲ್ಲಾ ಹತ್ತು ಹಲವು ಯೋಜನೆಗಳ ಅಡಿಯಲ್ಲಿ ಯದ್ವಾ ತದ್ವಾ ಅನುದಾನದ ಹಣವನ್ನು ಮಂಜೂರು ಮಾಡಿಸಿಕೊಂಡ ನಮ್ಮ ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಕ್ಷೇತ್ರಕ್ಕೆ ವಿಪುಲವಾದ ಅನುದಾನ ಬಳಸಬೇಕೆಂಬ ವ್ಯವದಾನವೂ ಇಲ್ಲದಂತಾಗಿದೆ.

     ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು, ಗ್ರಾಮೀಣ ಮಕ್ಕಳು ಅಕ್ಷರವಂತರಾಗಬೇಕು ಎಂಬ ಉದ್ಘೋಷದಿಂದ ಹಿಡಿದು ಮಕ್ಕಳ ಶೈಕ್ಷಣಿ ಭವಿಷ್ಯ ಹಸನು ಮಾಡಿ ಎಂದು ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳ ಡಂಭಾಚಾರದ ಹೇಳಿಕೆಗಳು ಜನ ಮೆಚ್ಚುಗೆಗಷ್ಟೆ ಎಂಬುದನ್ನು ಸಾಬೀತಗೊಳಿಸಲು ಹಾಗೂ ಇಂತಹ ಜನಪ್ರತಿನಿಧಿಗಳ ನಿರ್ಲಕ್ಷ್ಯ ದೋರಣೆಗೊಂದು ಸಣ್ಣ ಉದಾಹರಣೆ ಇಲ್ಲಿದೆ ನೋಡಿ.

    ಶಾಲಾ ಕೊಠಡಿಯಲ್ಲಿ ಕೂತು ಬುದ್ದಿಮತ್ತೆಯನ್ನು ಬೆಳೆಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಬೇಕಾದ ಅತ್ಯಂತ ಸಣ್ಣ ವಯಸ್ಸಿನ ಕುಡಿಗಳು ಶಾಲಾ ಕಟ್ಟಡವೆ ಇಲ್ಲದೆ ಮರದಡಿಯಲ್ಲಿ ಕೂತು ಶಿಕ್ಷಕಿಯು ಹೇಳಿಕೊಡುವ ಪಾಠ ಕೇಳಬೇಕಾದ ದಾರುಣ ಸ್ಥಿತಿ ತಾಲ್ಲೂಕಿನ ತಾವರೇಕೆರೆ ಸಮೀಪದ ಬೋವಿ ಕಾಲನಿಯ ಅಂಗನವಾಡಿ ಮಕ್ಕಳದ್ದಾಗಿದೆ.

     ತಾವರೇಕೆರೆ ಸಮೀಪದಲ್ಲಿ ಪುಟ್ಟದೊಂದು ಗ್ರಾಮವಾದ ಬೋವಿ ಕಾಲನಿ ಎಂಬ ಹೆಸರಿನ ಗ್ರಾಮವಿದೆ. ಇಲ್ಲಿ ಪ.ಜಾತಿ ಹಾಗೂ ಬೋವಿ ಜನಾಂಗದವರೆ ಹೆಚ್ಚಾಗಿದ್ದು ಕಳೆದ 12 ವರ್ಷಗಳ ಹಿಂದೆ ಈ ಗ್ರಾಮಕ್ಕೆ ಅಂಗನವಾಡಿ ಶಾಲೆ ಮಂಜೂರಾಗಿತ್ತು. ಶಾಲೆಯೇನೊ ಮಂಜೂರಾಯಿತು. ಆದರೆ ಪಾಠ ಕಲಿಯುವ ಮಕ್ಕಳಿಗೆ ಸೂರೊಂದನ್ನು ಒದಗಿಸಬೇಕು ಎಂಬ ಪರಿಜ್ಷಾನವೂ ಯಾವೊಬ್ಬ ಜನಪ್ರತಿನಿಧಿಗಳಿಗೂ ಇಲ್ಲವಾಯಿತು.

     ಅಂಗನವಾಡಿ ಮಂಜೂರಾದ ಆರಂಭದಲ್ಲಿ ಇದೇ ಗ್ರಾಮದಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ಅಂಗನವಾಡಿಯನ್ನು ಆರಂಭಿಸಲಾಯಿತು. ಮಕ್ಕಳ ಸಂಖ್ಯೆಯೂ ಚೆನ್ನಾಗಿತ್ತು. ದಿನ ಕಳೆದಂತೆ ಬಾಡಿಗೆಯ ಕಟ್ಟಡವೂ ಸೋರಲಾರಂಭಿಸಿತಲ್ಲದೆ, ಮಕ್ಕಳು ಕೂತು ಪಾಠ ಕಲಿಯಲು ತುಂಬಾ ತೊಂದರೆಯಾಯಿತು. ಬಾಡಿಗೆ ಕಟ್ಟಡದ ಮಾಲೀಕರು ಕಟ್ಟಡವನ್ನು ಖಾಲಿ ಮಾಡಿಕೊಡುವಂತೆಯೂ ಒತ್ತಡ ಹೇರಿದಾಗ ಇಲ್ಲಿನ ಶಿಕ್ಷಕಿಯ ಪಾಡು ಹೇಳತೀರದಾಯಿತು. ಸದರಿ ಗ್ರಾಮದಲ್ಲಿ ಮತ್ತೊಂದು ಬಾಡಿಗೆ ಕಟ್ಟಡವೆ ಇಲ್ಲವಾದಾಗ ಇದೇ ಗ್ರಾಮದಲ್ಲಿನ ಸರ್ಕಾರಿ ಪ್ರಾ.ಶಾಲಾ ಕಟ್ಟಡ ನೆನಪಿಗೆ ಬಂದಿದೆ. 

    ಶಾಲೆಯಲ್ಲೂ ಎರಡೆ ಕೊಠಡಿಗಳಿದ್ದು ಹಾಲಿ ಇರುವ ಮಕ್ಕಳಿಗೆ ಕೊಠಡಿ ಸಾಕಾಗುತ್ತಿಲ್ಲ. ತಮ್ಮ ಶಾಲಾ ಮಕ್ಕಳಿಗೆ ಕೊಠಡಿಯ ಕೊರತೆ ಇರುವ ಕಾರಣದಿಂದ ಪುಟ್ಟ ಅಂಗನವಾಡಿ ಮಕ್ಕಳಿಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಸರ್ಕಾರಿ ಪ್ರಾ.ಶಾಲಾ ಮುಖ್ಯ ಶಿಕ್ಷಕರ ನಿವೇದನೆಯೂ ಆಗಿದೆ.

    ಕಟ್ಟಡವೆ ಇಲ್ಲದೆ ಉಭಯ ಸಂಕಟಕ್ಕೀಡಾದ ಶಿಕ್ಷಕಿ ತನ್ನ ಅಂಗನವಾಡಿಯ ಮಕ್ಕಳನ್ನು ಕಟ್ಟಿಕೊಂಡು ಬೀದಿಯಲ್ಲಿ ಪಾಠ ಹೇಳಿಕೊಡುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ದಿಕ್ಕು ತೋರದೆ ಶಿಕ್ಷಕಿಯು ಮಕ್ಕಳನ್ನು ಗ್ರಾಮದ ಮರವೊಂದರ ನೆರಳಲ್ಲಿ ಕೂರಿಸಿಕೊಂಡು ಶಿಕ್ಷಣ ನೀಡುತ್ತಿದ್ದು ತನ್ನ ಈ ಸ್ಥಿತಿಯನ್ನು ಸಂಬಂಧಪಟ್ಟ ಸಿ.ಡಿ.ಪಿ.ಓ. ಗಮನಕ್ಕೂ ತಂದಿದ್ದಾರೆ.

   ಕೇವಲ ಮಕ್ಕಳಷ್ಟೆ ಅಲ್ಲದೆ ಅಂಗನವಾಡಿ ಕಟ್ಟಡದಲ್ಲಿದ್ದ ಗ್ಯಾಸ್ ಸಿಲಿಂಡರ್, ಸ್ಟೌವ್, ಪಾತ್ರೆಗಳು, ಕುಡಿಯುವ ನೀರಿನ ಲೋಟಗಳು, ಮಕ್ಕಳ ಆಟವಾಡುವ ಸಾಮಾನುಗಳು, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ತಯಾರಿಸಬೇಕಾದ ಆಹಾರ ಸಾಮಗ್ರಿಗಳೆಲ್ಲವನ್ನೂ ಬೀದಿಯಲ್ಲಿಟ್ಟುಕೊಂಡು ಅಂಗನವಾಡಿಯನ್ನು ನಿರ್ವಹಣೆ ಮಾಡುತ್ತಿರುವ ಶಿಕ್ಷಕಿಯ ಪಾಡನ್ನು ಕೇಳುವವರೆ ಇಲ್ಲವಾಗಿದೆ.

   ತಮ್ಮ ಮುಂದಿನ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕಾದ ಮಕ್ಕಳು ಶಿಕ್ಷಣ ಎಂದರೆ ಹೀಗೆ ಇರುತ್ತದೆಯಾ ಎಂದು ಹಪಹಪಿಸುವಂತಹ ಪರಿಸ್ಥಿತಿ ಎದುರಾಗಿದೆ. ಬೋವಿ ಕಾಲನಿಯ ಅಂಗನವಾಡಿ ಮಕ್ಕಳ ಪೋಷಕರು ಕೂಡ ಜನಪ್ರತಿನಿಧಿಗಳು ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೂ ಕಟ್ಟಡ ಮಂಜೂರು ಮಾಡುವಂತೆ ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ, ಈ ಗ್ರಾಮದ ಪೋಷಕರ ಮನವಿಗೆ ಯಾರೂ ಕೂಡ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

    ತಾಲ್ಲೂಕಿನ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಯಂತೂ ಅಂಗನವಾಡಿ ಶಿಕ್ಷಕಿಯರಲ್ಲಿಯೆ ಎರಡು ಗುಂಪುಗಳು ನಿರ್ಮಾಣವಾಗಲು ಕಾರಣರಾಗಿದ್ದಾರೆಂಬ ಆರೋಪಗಳೂ ಇದ್ದು, ಕೆಲ ಅಂಗನವಾಡಿ ಶಿಕ್ಷಕಿಯರಿರುವ ಕೇಂದ್ರಗಳಿಗೆ ದಿಡೀರ್ ಭೇಟಿ ನೀಡಿ ಅವರ ತಪ್ಪುಗಳನ್ನು ಹುಡುಕಿ ಉದ್ದೇಶ ಪೂರಕವಾಗಿಯೇ ಅಮಾನತ್ತುಗೊಳಿಸುವಂತಹ ಹಾಗೂ ನೋಟೀಸ್ ಜಾರಿ ಮಾಡುವಂತಹ ಕಾರ್ಯ ಮಾಡುತ್ತಿರುವುದನ್ನು ಬಿಟ್ಟರೆ ಉಳಿದಂತೆ ಅಂಗನವಾಡಿ ಕಟ್ಟಡಗಳ ನಿರ್ವಹಣೆ, ಅಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಂತಹ ಯಾವುದೆ ಕೆಲಸ ಮಾಡುತ್ತಿಲ್ಲವೆಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತಗೊಳ್ಳುತ್ತಿವೆ.

    ತಾಲ್ಲೂಕಿನಲ್ಲಿ ತಾವರೇಕೆರೆಯ ಬೋವಿ ಕಾಲನಿಯ ಅಂಗನವಾಡಿಯ ಸಮಸ್ಯೆ ಮಾತ್ರ್ರವಲ್ಲದೆ ಇಂತಹ ಕಟ್ಟಡವೇ ಇಲ್ಲದ ಅನೇಕ ಅಂಗನವಾಡಿ ಕೇಂದ್ರದ ಮಕ್ಕಳ ಬದುಕು ಮೂರಾಬಟ್ಟೆಯಾಗಿದ್ದು, ಇನ್ನಾದರೂ ಜನಪ್ರತಿನಿಧಿಗಳು ಕಟ್ಟಡವೆ ಇಲ್ಲದೆ ಬೀದಿಗೆ ಬಂದ ಇಂತಹ ಅಂಗನವಾಡಿ ಮಕ್ಕಳ ಬದುಕನ್ನು ಕಟ್ಟಿಕೊಡುವರೇನೊ ಕಾದು ನೋಡಬೇಕಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap