ಆಂಟಿಜನ್ ಪರೀಕ್ಷೆ ಗಂಭೀರವಾಗಿ ಪರಿಗಣಿಸಿ : ಜಿಲ್ಲಾಧಿಕಾರಿ

ಹಾವೇರಿ

   ಕೋವಿಡ್-19 ಪಾಸಿಟಿವ್ ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚುವುದು ಕಾರ್ಯ ಹಾಗೂ ಇವರನ್ನು ರ್ಯಾಪಿಡ್ ಆಂಟಿಜನ್ ತಪಾಸಣೆಗೆ ಒಳಪಡಿಸುವ ಕೆಲಸವನ್ನು ಅತ್ಯಂತ ತ್ವರಿತವಾಗಿ ಹಾಗೂ ಆದ್ಯತೆಯ ಮೇಲೆ ಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಸೂಚನೆ ನೀಡಿದರು.

   ತಾಲೂಕಾ ವೈದ್ಯಾಧಿಕಾರಿಗಳು, ಪೊಲೀಸ್ ಹಾಗೂ ತಹಶೀಲ್ದಾರಗಳೊಂದಿಗೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿಂದ ವಿಡಿಯೋ ಸಂವಾದ ನಡೆಸಿದ ಅವರು ಜಿಲ್ಲೆಯಲ್ಲಿ ದಿನೆದಿನೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ. ಪಿ.ಎಸ್.ಐ. ಠಾಣಾ ವ್ಯಾಪ್ತಿಯಲ್ಲಿ ಸಂಪರ್ಕ ಪತ್ತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲಿ ಸಂಪರ್ಕಿತರ ತಪಾಸಣೆ ಕ್ಷಿಪ್ರಗತಿಯಲ್ಲಿ ಕೈಗೊಂಡು ಸಂಪರ್ಕಿತರ ಪೈಕಿ ತಪಾಸಣೆಯಲ್ಲಿ ಪಾಸಿಟಿವ್ ಬಂದವರನ್ನು ನಿಯಮಾನುಸಾರ ಚಿಕಿತ್ಸೆಗೆ ಒಳಪಡುವ ಕಾರ್ಯ ಅತ್ಯಂತ ತ್ವರಿತ ಹಾಗೂ ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಿದರು.

     ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಸಂಪರ್ಕ ಪತ್ತೆ ಕಾರ್ಯ ಹಾಗೂ ರ್ಯಾಪಿಡ್ ಆಂಟಿಜನ್ ಪರೀಕ್ಷೆಗಳು ನಿರೀಕ್ಷಿತ ಸಾಧನೆಯಾಗುತ್ತಿಲ್ಲ. ಜಿಲ್ಲೆಯ ಬಹಳಷ್ಟು ಪ್ರಾಥಮಿಕ ಆರೋಗ್ಯಗಳ ವೈದ್ಯಾಧಿಕಾರಿಗಳು ಕೋವಿಡ್ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಧಾನವ್ಯಕ್ತಪಡಿಸಿದರು.

    ಸಂಪರ್ಕ ಪತ್ತೆಹಚ್ಚುವ ಕಾರ್ಯ ವಿಳಂಬವಾದಷ್ಟು ಸೋಂಕು ಹರಡುವಿಕೆ ಹೆಚ್ಚಾಗುತ್ತದೆ. ಸಂಪರ್ಕ, ತಪಾಸಣೆ, ಚಿಕಿತೆ, ಕ್ವಾರಂಟೈನ್ ಗಂಭೀರತೆಯನ್ನು ಎಲ್ಲ ಅಧಿಕಾರಿಗಳು ಮನಗಾಣಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ಮೇಲೆ ಗಂಭೀರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಕೋವಿಡ್ ಕಾರ್ಯವನ್ನು ಗಂಭೀರವಾಗಿ ಪರಿಗಣಿಸದಿರುವುದು ಕಂಡುಬಂದಿದೆ. ಇಂತಹ ವೈದ್ಯಾಧಿಕಾರಿಗಳನ್ನು ತಾಲೂಕಾ ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ನಿಯೋಜಿಸಿ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಯ ಕರ್ತವ್ಯದ ಜವಾಬ್ದಾರಿ ವಹಿಸಿ. ಇವರ ಸ್ಥಳದಲ್ಲಿ ಬಿ.ಎಂ.ಎಸ್. ವೈದ್ಯರನ್ನು ಕರ್ತವ್ಯಕ್ಕೆ ನಿಯೋಜಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಅವರು ಮಾತನಾಡಿ, ಇನ್ನುಮುಂದೆ ಪಿ.ಎಸ್.ಐ.ಗಳು ಸಂಪರ್ಕ ಪತ್ತೆಕಾರ್ಯನಿರ್ವಹಿಸುವುದು, ಸಿಪಿಐ ಉಸ್ತುವಾರಿ ನಡೆಸಬೇಕು. ಯಾವುದೇ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ತಕ್ಷಣ ಸದರಿ ವ್ಯಕ್ತಿಯ ಮಾಹಿತಿಯನ್ನು ಪಿ.ಎಸ್.ಐಗಳಿಗೆ ರವಾನಿಸಬೇಕು. ಅವರವರ ಠಾಣಾ ವ್ಯಾಪ್ತಿಯ ಪಾಸಿಟಿವ್ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು 24 ಗಂಟೆಯೊಳಗೆ ಪತ್ತೆಹಚ್ಚಿ ವರದಿಮಾಡುವ ಜವಾಬ್ದಾರಿ ನಿರ್ವಹಿಸುವಂತೆ ಸೂಚನೆ ನೀಡಿದರು. ಇದರಿಂದ ಪತ್ತೆ ಕಾರ್ಯ ತ್ವರಿತವಾಗಿ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.

     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಅವರು ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ವಿವರ, ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ವಿವರ, ಅವರ ಪರೀಕ್ಷಾ ವಿವರ, ಚಿಕಿತ್ಸಾ ವಿವರ, ಕೋವಿಡ್ ಮರಣದ ವಿವರಗಳ ಮಾಹಿತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಇದು ನಿಮ್ಮ ಜವಾಬ್ದಾರಿ ಎಂದು ಸೂಚನೆ ನೀಡಿದರು.

     ಯಾವ ಗ್ರಾಮಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆಯೋ ಆ ಗ್ರಾಮಗಳಲ್ಲಿ ತೀವ್ರ ನಿಗಾವಹಿಸಬೇಕು. ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ರ್ಯಾಪಿಡ್ ಆಂಟಿಜನ್ ಟೆಸ್ಟ್‍ಗಳ ಸಂಖ್ಯೆಗಳನ್ನು ಹೆಚ್ಚುಮಾಡಬೇಕು. ರೋಗ ಲಕ್ಷಣಗಳು ಕಂಡುಬಂದರೂ ಪರೀಕ್ಷೆಗೆ ಮುಂದಾಗದ ವ್ಯಕ್ತಿಗಳನ್ನು ಪೊಲೀಸ್ ನೆರವಿನಿಂದ ಕರೆಸಿ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಪಾಸಣೆಗೆ ಬರುವ ರೋಗಿಗಳಿಗೆ ಗಂಬೀರ ಕಾಯಿಲೆಗಳು ಹಾಗೂ ಕೋವಿಡ್ ಲಕ್ಷಣಗಳು ಕಂಡುಬಂದರೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಬೇಕು. ಈ ಟೆಸ್ಟ್‍ನಲ್ಲಿ ಪಾಸಿಟಿವ್ ಬಂದವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕಳುಹಿಸಿ ಸಂಪರ್ಕ ಪತ್ತೆಗೆ ಕ್ರಮವಹಿಸಬೇಕು. ನೆಗಟಿವ್ ಬಂದವರನ್ನು ಆರ್‍ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಸಾಮಾನ್ಯ ಆರೋಗ್ಯ ತಪಾಸಣೆಗೆ ಬರುವ ಹೊರರೋಗಿಗಳನ್ನು ನೊಂದಾಯಿಸಿಕೊಳ್ಳುವ ರಜಿಸ್ಟ್ರರನ ಪತ್ಯೇಕ ಕಾಲಂ ಸೃಷ್ಟಿಸಿ ಕೋವಿಡ್ ಟೆಸ್ಟ್ ಮಾಹಿತಿಯನ್ನು ವ್ಯಕ್ತಿವಾರು ದಾಖಲಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪರಮೇಶ್ವರ ಎಸ್.ಹಾವನೂರ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link