ಚಿತ್ರದುರ್ಗ
ಮಕ್ಕಳನ್ನು ಬಾಲ್ಯ ವಯಸ್ಸಿನಲ್ಲಿ ಅಪಾಯಕಾರಿ ಕಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದೇ ಬಾಲ ಕಾರ್ಮಿಕ ಪದ್ದತಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ವೈ. ವಟವಟಿ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಾಥಾ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿವಹಿಸಬೇಕು. ಪೋಷಕರು ಹೇಳಿದ ತಮ್ಮ ಮನೆಯ ಹಾಗೂ ಜಮೀನುಗಳಲ್ಲಿನ ಕೆಲಸ, ಹಾಗೂ ಇತರೆ ದಿನನಿತ್ಯದ ಕೆಲಸಗಳು ಬಾಲ ಕಾರ್ಮಿಕ ಪದ್ದತಿ ಆಗುವುದಿಲ್ಲ. ತಂದೆ-ತಾಯಿಗಳು ಕುಟುಂಬದ ಬಡತನದಿಂದ ಮಕ್ಕಳನ್ನು ಶಿಕ್ಷಣದಿಂದ ಮೊಟುಕುಗೊಳಿಸಿ ದುಡಿಯಲು ಕಾರ್ಖಾನೆಗಳಲ್ಲಿ, ಹೋಟಲ್‍ಗಳಲ್ಲಿ ಕೆಲಸ ಮಾಡಲು ಹಾಗೂ ಮಕ್ಕಳ ಜೀವಕ್ಕೆ ಕುತ್ತು ಬರುವಂತ ಅಪಾಯಕಾರಿ ಕೆಲಸಗಳಿಗೆ ತೊಡಗಿಸುತ್ತಾರೆ, ಅದು ಬಾಲ ಕಾರ್ಮಿಕ ಪದ್ದತಿ. ಆದ್ದರಿಂದ ಇಂತಹ ಕೆಲಸಗಳಿಗೆ 14 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕೆಲಸಕ್ಕೆ ಅಚ್ಚಬಾರದು ಎಂದು ಹೇಳಿದರು.
ಮಕ್ಕಳು ಅಥವಾ ನಿಮ್ಮ ಸ್ನೇಹಿತರು ಶಿಕ್ಷಣದಿಂದ ವಂಚಿತರಾಗಿ ಬಾಲ್ಯದ ವಯಸ್ಸಿನಲ್ಲಿ ಕಾರ್ಮಿಕರಾಗಿ ದುಡಿಯಲು ಹಾಗೂ ಜೀವನದ ಮೇಲೆ ಪರಿಣಾಮ ಬೀರುವಂತಹ ಕೆಲಸಗಳಲ್ಲಿ ತೊಡಗಿರುವುದು ಕಂಡುಬಂದರೆ ಪೊಲೀಸ್ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನಕ್ಕೆ ತಂದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಮಕ್ಕಳಿಗೆ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ಅರುಣ್ ಮಾತನಾಡಿ ಮಕ್ಕಳು ಮುಖ್ಯವಾಗಿ ನಿಮ್ಮ ಹಳ್ಳಿಗಳಲ್ಲಿ ಮಕ್ಕಳಿಂದ ಕಾರ್ಮಿಕ ಕೆಲಸಗಳು ಮಾಡಿಸಿಕೊಂಡರೆ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು ಅಂತಹ ಘಟನೆಗಳನ್ನು ನಾವು ತಡೆಯುತ್ತೇವೆ ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶ ಟಿ. ಶಿವಣ್ಣ ಮಾತನಾಡಿ ತಂದೆ-ತಾಯಿಗಳು ಮಕ್ಕಳನ್ನು ಓದುವ ವಯಸ್ಸಿನಲ್ಲಿ ಶಾಲೆಗೆ ಕಳುಹಿಸಬೇಕು. ಆದರೆ ಕುಟುಂಬದ ಸಮಸ್ಯೆಗಳಿಂದ ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಿ ಅವರನ್ನು ದುಡಿಯಲು ಬೇರೆಯವರ ಮನೆಗಳಲ್ಲಿ ಜೀತದಾಳಾಗಿ ದುಡಿಸುತ್ತಾರೆ. ಆದ್ಧರಿಂದ ಅಂತಹ ಬಾಲ ಕಾರ್ಮಿಕ ಪದ್ದತಿಯನ್ನು ಹೋಗಲಾಡಿಸಲು ಎಲ್ಲಾ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ವಿಜಯಕುಮಾರ ಮಾತನಾಡಿ ಕುಟುಂಬದಲ್ಲಿನ ಬಡತನದಿಂದ ಬಾಲ ಕಾರ್ಮಿಕ ಪದ್ದತಿ ಉಂಟಾಗುತ್ತದೆ. ಮಕ್ಕಳು ತಂದೆ ತಾಯಿಗಳು ಶಾಲೆಯನ್ನು ಬಿಡಿಸಿದಾಗ ಮಕ್ಕಳ ಮನಸ್ಸಿನಲ್ಲಿ ನಾವು ಬಾಲ ಕಾರ್ಮಿಕರಾಗಿ ದುಡಿಯಬಾರದು ಎಂಬ ಛಲವಿರಬೇಕು. ಪೋಷಕರು ಬಡತನವನ್ನು ನಿವಾರಣೆ ಮಾಡಿಕೊಳ್ಳಲು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಕೂಲಿ ಮಾಡಲು ಕಳುಹಿಸುತ್ತಾರೆ. ಆದ್ದರಿಂದ ಮಕ್ಕಳಿಗಿಂತ ಪೋಷಕರಲ್ಲಿ ಬಾಲ ಕಾರ್ಮಿಕ ಪದ್ದತಿ ಬಗ್ಗೆ ಹೆಚ್ಚಾಗಿ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಟಿ. ನಾಗೇಂದ್ರಪ್ಪ, ಕಾರ್ಯದರ್ಶಿ ಬಿ. ಎಂ. ಅನಿಲ್‍ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಡಿ.ಎಂ. ವಿನುತ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಇದೆ ವೇಳೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಡಿ.ಕೆ ಶೀಲಾ ವಿಶೇಷ ಉಪನ್ಯಾಸ ನೀಡಿದರು. ಹಾಗೂ ಹೊಸದುರ್ಗ ತಾಲ್ಲೂಕಿನ ಹುಣವಿನಡು ಸೃಷ್ಠಿ ಕಲಾ ತಂಡದಿಂದ ಜಾಗೃತಿ ಗೀತೆಗಳು ಹಾಗೂ ಬೀದಿ ನಾಟಕ ಪ್ರದರ್ಶನ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
