ತುಮಕೂರು
ವಿಶೇಷ ವರದಿ: -ಯೋಗೇಶ್ ಮಲ್ಲೂರು.
ಕೊರೊನಾ ವೈರಸ್ ಎಂಬ ಮಾರಕ ಪಿಡುಗು ಇಡೀ ಜಗತ್ತನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ಭೀತಿ ಹುಟ್ಟಿಸುತ್ತಿರುವ ಸನ್ನಿವೇಶಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇನ್ನು ಈ ಭಯಾನಕ ವೈರಸ್‍ಗೆ ಎದರಿ ಹೈರಾಣಾಗುತ್ತಿರುವ ಜನರು ತಮ್ಮ ಭವಿಷ್ಯದ ದಿನಗಳನ್ನು ನೆನೆದು ಆತಂಕಿತರಾಗುತ್ತಿದ್ದಾರೆ. ಕೊರೊನಾ ವೈರಸ್ ಪರಿಣಾಮ ಮತ್ತಷ್ಟು ಗಂಭೀರವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಅಘೋಷಿತ ಬಂದ್ ಅವಧಿಯನ್ನು ಮಾ.31ಕ್ಕೆ ವಿಸ್ತರಿಸಿದೆ. ರಾಜ್ಯ ಎಲ್ಲಾ ಕಡೆಗಳಲ್ಲೂ ಬಂದ್ ವಾತಾವರಣ ದಿನದಿಂದ ದಿನಕ್ಕೆ ಕಠಿಣವಾಗುತ್ತಲಿದೆ. ಈ ಹಿನ್ನೆಲೆಯಲ್ಲಿ ನಗರವೂ ಸಹ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ.
ಜನರ ದಿನನಿತ್ಯ ಜೀವನದ ವಹಿವಾಟಿನ ಭಾಗವಾದ ನಗರದ ಅಂತರಸನಹಳ್ಳಿಯಲ್ಲಿರುವ ಎಪಿಎಂಸಿ ಮಾರುಕಟ್ಟೆಗೂ ಬಂದ್ ಬಿಸಿ ಗಂಭೀರವಾಗಿ ತಟ್ಟಿದೆ. ಮಾರುಕಟ್ಟೆಯ ಬೀದಿಗಳೆಲ್ಲಾ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಬಹುಶಃ ಎಪಿಎಂಸಿ ಮಾರುಕಟ್ಟೆಯು ಈ ಮಟ್ಟಿಗೆ ಖಾಲಿಯಾಗಿರುವುದು ಇದೇ ಮೊದಲು. ದಿನದ 24 ಗಂಟೆಯಲ್ಲೂ ಗಿಜುಗುಡುವ ಮಾರುಕಟ್ಟೆಯಲ್ಲಿ ಈಗ ಜನರ ಸುಳಿವೇ ಇಲ್ಲದಂತಾಗಿದೆ. ಭಯಾನಕ ವೈರಸ್ ಕೊರೊನಾ ತಾಪಮಾನ ಎಪಿಎಂಸಿ ಮಾರುಕಟ್ಟೆಯ ವಹಿವಾಟಿಗೂ ತಟ್ಟಿದ್ದು, ಎಂದಿಗಿಂತ ಕಳೆದ ಒಂದು ವಾರದಿಂದ ಶೇ.90ರಷ್ಟು ವಹಿವಾಟು ಕ್ಷೀಣಿಸಿದೆ ಎನ್ನಲಾಗಿದೆ.
ಒಂದು ವಾರದಿಂದ ಅರ್ಧದಷ್ಟು ಆಮದು ಕಡಿಮೆ:
ದಿನನಿತ್ಯ ಸಾಕಷ್ಟು ಸರಕು ಸಾಮಗ್ರಿಗಳು ಆಮದಾಗುವ ಎಪಿಎಂಸಿ ಮಾರುಕಟ್ಟೆಯಲ್ಲಿ ಇದೀಗ ಶೇ. ಅರ್ಧದಷ್ಟು ಆಮದು ಕಡಿಮೆಯಾಗಿದ್ದು, ಮಾರುಕಟ್ಟೆಯ ವಹಿವಾಟು ಗಣನೀಯವಾಗಿ ಕ್ಷೀಣಿಸಿದೆ. ಉತ್ಪಾದಕರು, ವ್ಯಾಪಾರಿಗಳು ತಮ್ಮ ಮಾಲುಗಳನ್ನು ಮಾರುಕಟ್ಟೆಗೆ ತಂದು ವಾಪಸ್ ಒಯ್ಯುವಂತಹ ಸನ್ನಿವೇಶಗಳು ಕಂಡು ಬರುತ್ತಿವೆ.
ಬೆಲೆ ಕುಸಿತ – ವ್ಯಾಪಾರಿಗಳು ಕಂಗಾಲು:
ಕಳೆದ ಒಂದು ವಾರದ ಹಿಂದೆ ಹೂವು, ಹಣ್ಣು, ತರಕಾರಿಗಳ ಬೆಲೆಯು 100ರ ಗಡಿ ದಾಟಿತ್ತು. ಆದರೆ ಕೊರೊನಾ ಪ್ರಭಾವದಿಂದ ಇದ್ದಕ್ಕಿದಂತೆ ಮೊದಲ ರೇಟಿನ ಕಾಲು ಭಾಗಕ್ಕೆ ಇಳಿಮುಖವಾಯಿತು. ಈ ನಿಟ್ಟಿನಲ್ಲಿ ವ್ಯಾಪಾರಿಗಳನ್ನು ವಿಚಾರಿಸಿದರೆ ಸೇಬು ಈ ಮೊದಲು ಕೆಜಿಗೆ 100ರಿಂದ 120ರ ಗಡಿಯನ್ನು ದಾಟಿತ್ತು ಆದರೆ ಈಗ ರೂ.70ರಿಂದ 80 ಆಗಿದೆ. ಕಿತ್ತಳೆ ದಾಕ್ಷಿ ಮೂಸಂಬಿಯ ಬೆಲೆಗಳನ್ನು ಕೇಳಿದರೆ ವ್ಯಾಪಾರಿ ಸಪ್ಪೇ ಮೊರೆ ಹಾಕಿ ಕೊಳ್ಳುವವರಿಲ್ಲದೆ ಕೊಳೆತ ಹಣ್ಣುಗಳನ್ನು ಮೋರಿಗೆ ಹಾಕಲಾಗುತ್ತಿದೆ ಎನ್ನುತ್ತಾರೆ ಹಣ್ಣು ವ್ಯಾಪಾರಿ ರಹಮತ್ತುಲ್ಲಾ.
ಕಳೆದ ಒಂದು ವಾರದ ಹಿಂದೆ ಸೇವಂತಿಗೆ ಹೂವು ರೂ.150 ಇದ್ದರೆ ಈಗ 80ಗೆ ಇಳಿಕೆ ಕಂಡಿದೆ. ಇನ್ನು ಬಟಾನ್ಸ್ 100 ರೂ ಇದ್ದದ್ದು, ಈಗ ಕೇವಲ ಕೆಜಿಗೆ 10 ರೂಗೆ ಕೊಟ್ಟರೂ ಕೊಳ್ಳುವವರಿಲ್ಲ. ಗುಲಾಬಿ ಹೂವು ಕೆಜಿಗೆ 100.ರೂ ಇತ್ತು ಆದರೆ ಈಗ 20ರಿಂದ 30ರೂ ಗಳಾಗಿದೆ. ಬೆಳಗ್ಗೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಹೂವನ್ನು ಕೊಳ್ಳುವವರು ಅಲ್ಪಮಟ್ಟದಲ್ಲಿ ಬರುತ್ತಾರೆ. ಆದರೆ ಗಂಟು ಬಿಟ್ಟರೂ ಅವರು ಕೇಳುವ ಬೆಲೆಗೇ ಕೊಡುವ ಸಂಭವ ಎದುರಾಗಿದೆ. ಒಂದು ವಾರದಿಂದ ಮಾರುಕಟ್ಟೆಯಲ್ಲಿ ಜನರೆ ಇಲ್ಲ. ಇನ್ನು ಎರಡು ಮೂರು ದಿನಗಳಲ್ಲಿ ಸಂಪೂರ್ಣ ಮಾರುಕಟ್ಟೆ ಮುಚ್ಚಲು ಎಪಿಎಂಸಿಯವರು ನೋಟೀಸ್ ನೀಡಲಿದ್ದಾರೆ. ಹೂವಿನ ವ್ಯಾಪಾರಿಗಳಿಗೆ ಬಂದ್‍ನಿಂದ ಈಗಾಗಲೇ ಶೇ.60ರಿಂದ 70ರಷ್ಟು ಲಾಸಾಗಿದೆ ಎಂದು ಹೂವಿನ ವ್ಯಾಪಾರಿ ಸತೀಶ್ ಹೇಳುತ್ತಾರೆ.
ಒಂದು ತೂಕ ಮಿಕ್ಸ್ ತರಕಾರಿಗೆ ರೂ 70ರಿಂದ 80ರೂಗಳಿತ್ತು. ಆದರೆ ಈಗ ರೂ.30ರಿಂದ 40ಕ್ಕೆ ಕೊಟ್ಟರೂ ಖರೀದಿಸುವವರಿಲ್ಲದೆ, ತರಕಾರಿಗಳನ್ನು ವಾಪಸ್ ಒಯ್ಯಲಾಗುತ್ತಿದೆ. ಈರುಳ್ಳಿ ಕೆಜಿಗೆ ರೂ.50ರಿಂದ 60ರಷ್ಟಿತ್ತು. ಈಗ 20ಗೆ ಒಂದು ಕೆ.ಜಿ ಈರುಳ್ಳಿ ನೀಡಲಾಗುತ್ತಿದೆ. ಬೆಳ್ಳುಳ್ಳಿ, ಟೊಮಟೊ, ಶುಂಠಿಯಂತೂ ಶೇ.75ರಷ್ಟು ರೇಟು ಇಳಿಮುಖವಾಗಿದೆ. ಕೊರೊನಾ ಎಫೆಕ್ಟ್ ನಿಂದಾಗಿ ಹಣು, ತರಕಾರಿ, ಹೂವುಗಳ ರೇಟು ಶೇ.75ರಿಂದ 80 ರಷ್ಟು ಇಳಿಕೆ ಕಾಣುತ್ತಿದೆ. ವ್ಯಾಪಾರಿಗಳಂತೂ ತಮ್ಮ ಸರಕುಗಳನ್ನು ಮಾರುಕಟ್ಟೆಯಲ್ಲಿ ತಂದಿಟ್ಟುಕೊಂಡು ಬಕಗಳಂತೆ ಗ್ರಾಹಕರಿಗೆ ಕಾಯುತ್ತಾ ಕೂರುವಂತಾಗಿದೆ. ಹಣ್ಣಿನಂಗಡಿಗಳ ವ್ಯಾಪಾರಿಗಳು ಜನರಿಲ್ಲದೆ ಬೇಸತ್ತು ಹೋಗಿದ್ದಾರೆ. ಹಣ್ಣುಗಳು ಮೂರ್ನಾಲ್ಕು ದಿನಗಳಾದರೆ ಕೊಳೆಯುತ್ತವಲ್ಲಾ ಎಂದು ಕಂಗಾಲಾಗಿದ್ದಾರೆ.
ಬಹುತೇಕ ಅಂಗಡಿಗಳು ಬಂದ್:
ಮಾರುಕಟ್ಟೆಯ ಒಂದೊಂದು ಬೀದಿಯಲ್ಲು ಒಂದೆರಡು ಅಂಗಡಿಗಳು ಬಾಗಿಲು ತೆರೆದಿರುವುದನ್ನು ಬಿಟ್ಟರೆ, ಇನ್ನು ಉಳಿದ ಅಂಗಡಿಗಳೆಲ್ಲಾ ಸಂಪೂರ್ಣ ಬಂದ್ ಆಗಿವೆ. ಮಾರುಕಟ್ಟೆಯ ಬೀದಿಗಳು ಗ್ರಾಹರಿಲ್ಲದೆ, ವಾಹನಗಳಿಲ್ಲದೆ ಬಿಕೋ ಎನ್ನುತ್ತಿವೆ. ದಿನಸಿ ಅಂಗಡಿಗಳು, ತರಕಾರಿ ಮಳಿಗೆಗಳು, ಇನ್ನಿತರೆ ಉತ್ಪಾದನಗಳ ಅಂಗಡಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಕ್ಷೀಣಿಸಿದ ವಹಿವಾಟು-ಹಣಕಾಸಿಗೆ ಪೆಟ್ಟು:
ಮಾರುಕಟ್ಟೆಯಲ್ಲಿ ದಿನೇ ದಿನೇ ವಹಿವಾಟು ಕ್ಷೀಣಿಸುತ್ತಾ ಹೋಗುತ್ತಿದೆ. ಈಗಾಗಲೇ ಎಲ್ಲ ಪದಾರ್ಥಗಳ ಬೆಲೆಗಳು ಇಳಿಮುಖವಾಗಿವೆ. ವ್ಯಾಪಾರಿ ನಷ್ಟದ ಕಡೆಗೆ ಮುಖ ಮಾಡಿ ನಿಂತಿದ್ದಾನೆ. ಇನ್ನು ಸರ್ಕಾರ ಬಂದ್ ಅವಧಿಯನ್ನು ಮುಂದೂಡಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲೆ ಎಪಿಎಂಸಿ ಮಾರುಕಟ್ಟೆಯ ವಹಿವಾಟು ಪಾತಾಳ ಮುಟ್ಟುವುದರಲ್ಲಿ ಯಾವ ಅನುಮಾನಗಳು ಇಲ್ಲದಂತಾಗುತ್ತದೆ. ಎಪಿಎಂಸಿ ಮಾರುಕಟ್ಟೆ ಹಣಕಾಸಿನ ಮೇಲೆ ಬರೆ ಎಳೆದಂತಾಗುವುದು ಖಚಿತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ