ಅಪೌಷ್ಠಿಕ ಮಕ್ಕಳ ಸಮೀಕ್ಷೆಗೆ ಜಿ.ಪಂ. ಸಿಇಓ ಸೂಚನೆ

ಚಿತ್ರದುರ್ಗ :

      ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳನ್ನು ಪತ್ತೆ ಮಾಡಿ, ಅಂತಹ ಮಕ್ಕಳ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದ್ದು, ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಸಮೀಕ್ಷೆ ಕೈಗೊಳ್ಳಲು ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಹೇಳಿದರು.

       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯಾಧಿಕಾರಿಗಳು, ಮಕ್ಕಳ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಪೌಷ್ಠಿಕ ಮಕ್ಕಳ ಮಾಪನ ಕೌಶಲ್ಯಗಳ ಪುನರ್ ಮನನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

      ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳನ್ನು ಪತ್ತೆ ಹಚ್ಚಲು ಕ್ಷೇತ್ರ ಮಟ್ಟದ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು. ಅಪೌಷ್ಠಿಕ ಮಕ್ಕಳ ಸಮೀಕ್ಷೆ ಮಾಡಿ ನಿಖರವಾದ ದತ್ತಾಂಶವನ್ನು ಸಿದ್ಧಪಡಿಸಿ, ಅಂತಹ ಮಕ್ಕಳ ಆರೋಗ್ಯ ಸುಧಾರಣೆಗಾಗಿ, ಪೌಷ್ಠಿಕ ಪುನಶ್ಚೇತನ ಕಾರ್ಯವನ್ನು ರೂಪಿಸುವಂತೆ ಜಿಪಂ ಸಿಇಒ ಸತ್ಯಭಾಮ ಹೇಳಿದರು. ಅಲ್ಲದೆ ಸ್ವಚ್ಛತಾ ಅಭಿಯಾನ ಪಾಕ್ಷಿಕದ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಇದೇ ಸಂದರ್ಭದಲ್ಲಿ ಬೋಧಿಸಿದರು,

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಅಧ್ಯಕ್ಷತೆ ವಹಿಸಿ ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಸಮೀಕ್ಷೆಯ ಕುರಿತು ಸಿದ್ಧಪಡಿಸಲಾಗಿರುವ ಕ್ರಿಯಾ ಯೋಜನೆಯನ್ನು ವಿವವರಿಸಿದರು. ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಕುಮಾರಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕವಿತ ಮಕ್ಕಳಲ್ಲಿ ಕಂಡು ಬರುವ ಅಪೌಷ್ಠಿಕತೆ ಗುರುತಿಸುವ ಮಾನದಂಡಗಳ ಬಗ್ಗೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ನಿರೂಪಣಾಧಿಕಾರಿ ರಾಜಾನಾಯಕ್ ಅವರು ಸಮೀಕ್ಷಾ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು. ಡಾ.ರೇಣುಪ್ರಸಾದ್, ಡಾ.ರಂಗನಾಥ, ಡಾ.ಸುರೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap