ಪಾವಗಡ ತಾಲ್ಲೂಕು ರೈತ ಸಂಘದಿಂದ ಜಪಾನಂದಜೀ ಅವರಿಗೆ ಕೃತಜ್ಞತಾ ಸಮರ್ಪಣೆ

ಪಾವಗಡ

        ಎಲ್ಲಿಯವರೆಗೂ ಗೋ ಸಂಪತ್ತನ್ನು ಕಾಪಾಡುವುದಿಲ್ಲವೊ ಅಲ್ಲಿಯವರೆಗೂ ದೇಶದ ಉದ್ದಾರ ಸಾಧ್ಯವಿಲ್ಲ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜಿ ತಿಳಿಸಿದರು.

         ಪಾವಗಡ, ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ತಾಲ್ಲೂಕುಗಳಲ್ಲಿ ಸತತ ಬರಗಾಲದಿಂದ ಜಾನುವಾರುಗಳಿಗೆ ಮೇವು, ಹಿಂಡಿ, ಕ್ಯಾಟಲ್‍ಪೀಡ್ ಹಾಗೂ ಕುಡಿಯುವ ನೀರನ್ನು ಈ ವರ್ಷದ ಜನವರಿಯಿಂದ ಪಾವಗಡ ಪಟ್ಟಣವೂ ಸೇರಿದಂತೆ ನವಿಲುಧಾಮ, ಕೆ. ರಾಂಪುರ ಗ್ರಾಮಕ್ಕೆ ವಿತರಿಸುತ್ತಿರುವ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಗಳಿಗೆ ಪಾವಗಡ ತಾಲ್ಲೂಕು ರೈತ ಸಂಘದಿಂದ ಕೃತಜ್ಞತಾ ಸಮಾರಂಭವನ್ನು ಶನಿವಾರ ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಆರೋಗ್ಯಕೇಂದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

        ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ರೈತ ಸಂಘದಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪೂಜ್ಯ ಜಪಾನಂದ ಸ್ವಾಮಿ, ಜನವರಿಯಿಂದ ಇಲ್ಲಿಯವರೆಗೂ ನಿತ್ಯ 10 ಸಾವಿರ ಹಸುಗಳಿಗೆ ಮೇವು ನೀಡಲಾಗುತ್ತಿದ್ದು, ಪಟ್ಟಣದಲ್ಲಿ 40 ಸಾವಿರ ಲೀಟರ್ ನೀರು ವಿತರಿಸಲಾಗುತ್ತಿದೆ. ಪಾವಗಡ ತಾಲ್ಲೂಕಿನಲ್ಲಿ ಸುಮಾರು 36 ಸಾವಿರ ಕೂಲಿ ಕಾರ್ಮಿಕರು ವಲಸೆ ಹೋಗಿದ್ದು, 698 ಸಾವಿರ ಹೆಕ್ಟೇರ್ ಸಾಗುವಳಿ ಭೂಮಿ ಮರುಭೂಮಿಯಾಗುತ್ತಿದೆ. ಬರ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಮಿನಿ ಗೌವರ್ನಮೆಂಟ್ ತರಹ ನಮ್ಮ ಆಶ್ರಮ ಕೆಲಸ ಮಾಡುತ್ತಿದೆ ಎಂದರು.

        ಮುಖ್ಯ ಅತಿಥಿ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಡಾ. ಎನ್.ಕುಮಾರ್ ಮಾತನಾಡಿ, ಬರದ ಹೆಸರಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಕೊಟ್ಯಂತರ ಹಣ ಅವ್ಯವಹಾರ ಎಸಗುತ್ತಾರೆ. ಆದರೆ ಜಾನುವಾರುಗಳನ್ನು ರಕ್ಷಣೆ ಮಾಡಲು ಮುಂದಾಗುವುದಿಲ್ಲ. ಗೋವುಗಳನ್ನು ಕಸಾಯಿಖಾನೆಗೆ ಮಾರದೆ ರಕ್ಷಣೆ ಮಾಡಬೇಕು. ಗೋವುಗಳನ್ನು ರಕ್ಷಣೆ ಮಾಡಿದರೆ ಧರ್ಮವನ್ನು ಮತ್ತು ಸಮಾಜವನ್ನು ರಕ್ಷಣೆ ಮಾಡಿದ ಹಾಗೆ. ಗೋಮಾತೆಗೆ ತಾಯಿಗಿಂತ ಹೆಚ್ಚಾಗಿ ಗೌರವ ಕೊಡುತ್ತೇವೆ.

        ಗೋವುಗಳಲ್ಲಿ 33 ಕೋಟಿ ದೇವರುಗಳಿದ್ದಾರೆ. ಗೋಮೂತ್ರದಿಂದ ಕ್ಯಾನ್ಸರ್‍ನ್ನು ಗುಣಪಡಿಸುವ ಔಷಧಿಯನ್ನು ಅಮೇರಿಕಾದಲ್ಲಿ ತಯಾರು ಮಾಡಲಾಗುತ್ತಿದೆ. ವಯಸ್ಸಾದ ಗೋವುಗಳನ್ನು ಕಸಾಯಿಖಾನೆಗೆ ಮಾರದೆ ಗೋಮೂತ್ರ ಮತ್ತು ಸಗಣಿಯನ್ನು ಶೇಖರಣೆ ಮಾಡಬಹುದು. ಸ್ವಾಮಿ ಜಪಾನಂದಜೀಯವರು ತಮ್ಮ ಆಶ್ರಮದಲ್ಲಿ ಗೋಮೂತ್ರ ಶೇಖರಣೆ ಮಾಡುವ ಘಟಕವನ್ನು ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.

     ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಡಾ.ಜಿ. ವೆಂಕಟರಾಮಯ್ಯ, ಹಿರಿಯ ವಕೀಲ ಎಂ. ನಾಗೇಂದ್ರಪ್ಪ, ಇನ್ಫೋಸಿಸ್ ಸಂಸ್ಥೆಯ ತಂಡದ ನಾಯಕ ಮಹೇಶ್, ರೈತ ಸಂಘದ ಅಧ್ಯಕ್ಷ ಜಿ. ನರಸಿಂಹರೆಡ್ಡಿ ಮಾತನಾಡಿದರು. ರೈತ ಸಂಘದ ಕೊಂಡಾರೆಡ್ಡಿ, ಟಿ.ಅಂಜಯ್ಯ, ಆಶ್ರಮದ ಜೈಶ್ರೀ, ಶೋಭಾ, ಲಕ್ಷ್ಮೀ ಬಾಬು, ಮಲ್ಲಿಕಾರ್ಜುನ್, ರಮೇಶ್, ದೇವರಾಜ್, ಪ್ರಕಾಶ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap