ದಾವಣಗೆರೆ
ಮಾನಸಿಕ ಖಿನ್ನತೆಗೆ ಒಳಗಾಗಿ ವರ್ಷಕ್ಕೆ ಭಾರತ ಒಂದರಲ್ಲಿಯೇ 1.33 ಲಕ್ಷ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆಂದು ಜೆ.ಜೆ.ಎಂ. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶ್ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗ, ಜಿಲ್ಲಾ ಮನೋವೈದ್ಯಕೀಯ ವಿಭಾಗ, ಜಿಲ್ಲಾ ಚಿಗಟೇರಿ ಆಸ್ಪತ್ರೆ, ದಿ ಅಸೋಸಿಯೇಷನ್ ಆಫ್ ಪೀಪಲ್‍ವಿತ್ ಡಿಸೆಬಿಲಿಟಿ ಆರ್ಗನೈಜೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದಲಾಗುತ್ತಿರುವ ಆಧುನಿಕ ಜೀವನ ಶೈಲಿ ಹಾಗೂ ಅತೀ ವೇಗದ ಜೀವನದ ಫಲವಾಗಿ 2020ರ ವೇಳೆಗೆ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುವ ಸಂಭವ ಇದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಾನಸಿಕ ಖಿನ್ನತೆಗೆ ಒಳಗಾಗಿ ಪ್ರತಿ ವರ್ಷ ವಿಶ್ವಾದ್ಯಂತ 8 ಲಕ್ಷ ಜನ ಹಾಗೂ ಭಾರತದಲ್ಲಿ 1.33 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಮಾನಸಿಕ ಆರೋಗ್ಯದ ಸಮಸ್ಯೆಗಳು ವಿಶ್ವದಾದ್ಯಂತ ಎಲ್ಲರ ಮೇಲೆ ಪ್ರಭಾವ ಬೀರುತ್ತಿವೆ. ಈ ನಿಟ್ಟಿನಲ್ಲಿ ವಿಶ್ವದ ಜನತೆಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ, ಸದೃಢ ಸಮಾಜ ನಿರ್ಮಿಸಲು ವಿಶ್ವ ಮಾನಸಿಕ ಆರೋಗ್ಯ ದಿನಚಾರಣೆಯನ್ನು ಆಚರಿಸಲಾಗುತ್ತಿದೆ. ಶರೀರಕ್ಕೆ ವ್ಯಾಯಾಮ ಅವಶ್ಯಕವಾಗಿದ್ದು, ಬಿಡುವಿನ ವೇಳೆಯಲ್ಲಿ ವ್ಯಾಯಾಮ ಮಾಡುವ ಮೂಲಕ ಪ್ರಶಾಂತಯುತ ಜೀವನ ನಡೆಸಬೇಕೆಂದು ಕಿವಿಮಾತು ಹೇಳಿದರು.
ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಬಹು ಮುಖ್ಯವಾಗಿದೆ. ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯಕ್ಕೂ ಪೆಟ್ಟು ನೀಡುತ್ತದೆ. ಹೀಗಾಗಿ ಮಾನಸಿಕ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಅಂಬಾದಾಸ್ ಕುಲಕರ್ಣಿ, ಆಧುನಿಕ ಯುಗದಲ್ಲಿ ನಾವು ಎಷ್ಟು ಅಭಿವೃದ್ಧಿ ಸಾಧಿಸಿದ್ದೇವೆಯೋ, ಅಷ್ಟೇ ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಒದಗಿ ಬಂದಿರುವುದರಿಂದ ನಾವು ಮಾನಸಿಕ ಖಿನ್ನತೆಗೆ ಒಳಗಾಗುತ್ತೀದ್ದೇವೆ. ಇಂದು ವಿದ್ಯಾವಂತರಲ್ಲೇ ಮಾನಸಿಕ ಖಿನ್ನತೆ ಹೆಚ್ಚಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್ ಮಾತನಾಡಿ, ಮಾನಸಿಕ ರೋಗಿಗಳನ್ನು ಸಾಮಾನ್ಯರಂತೆ ನೋಡಿಕೊಳ್ಳಬೇಕು. ನಾವು ತೋರಿಸುವ ಪ್ರೀತಿ, ವಾತ್ಸಲ್ಯ ಮತ್ತು ವಿಶ್ವಾಸದಿಂದ ರೋಗಿಗಳ ರೋಗವು ಬೇಗ ಗುಣಮುಖವಾಗುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, ನಮ್ಮ ಚೌಕಟ್ಟನ್ನು ಅರಿತು ನಾವು ಜೀವನ ನಡೆಸಬೇಕು. ಸಂಪತ್ತು, ಆಸ್ತಿ ಹಾಗೂ ಇತರೆ ಆಸ್ತಿಗಳ ಹುಚ್ಚು ನಮ್ಮಲ್ಲಿ ಅತಿಯಾದಾಗ ಮಾನಸಿಕ ರೋಗಗಳು ಹೆಚ್ಚಾಗುತ್ತವೆ. ಇಂದು ನಾವು ನಮ್ಮ ಕಷ್ಟಗಳಿಂದ ದುಃಖಗಳನ್ನು ಅನುಭವಿಸುತ್ತಿಲ್ಲ. ಬದಲಾಗಿ ಬೇರೆಯವರ ಸುಖಗಳಿಂದ ನಾವು ಸಂಕಷ್ಟವನ್ನು ಅನುಭವಿಸಿ ಖಿನ್ನತೆಗೆ ಒಳಾಗುಗುತ್ತಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‍ಕುಮಾರ್, ಇಂದು ಯುವಜನತೆಯಲ್ಲಿ ಶೇ% 90 ರಷ್ಟು ಜನರು ಖಿನ್ನತೆಗೆ ಒಳಗಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಕೇವಲ ಮೊಬೈಲ್ ಕಳೆÀದಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೊದಲು ವಿಚಿತ್ರ ವರ್ತನೆ ಇರುವವರನ್ನು ಹುಚ್ಚರೆಂದು ಕರೆಯುತ್ತಿದ್ದರು. ಆದರೆ, ಇಂದು ಕಾಲೇಜಿನ ಯುವ ಜನತೆಯಲ್ಲಿ ಬಹುತೇಕ ಹುಡುಗರು ವಿಚಿತ್ರ ವರ್ತನೆ ಹೊಂದಿರುವುದು ಶೋಚನೀಯ ಎಂದು ವಿಷಾದಿಸಿದರು.ಜಿಲ್ಲಾ ಚೀಗಟೇರಿ ಆಸ್ಪತ್ರೆಯ ಜಿಲ್ಲಾ ಮನೋವೈದ್ಯ ಡಾ.ಹೆಚ್.ನಾಗರಾಜ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್‍ವಿತ್ ಡಿಸೆಬಿಲಿಟಿ ವತಿಯಿಂದ ಮಕ್ಕಳಲ್ಲಿ ಕಂಡು ಬರುವ ಖಿನ್ನತೆ, ಅದರ ಮಾರ್ಗೋಪಾಯ, ಸ್ಕಿಜೋಫ್ರೇನಿಯಾ ಮತ್ತು ಇದರ ಲಕ್ಷಣಗಳು, ಖಿನ್ನತೆ ಮತ್ತು ಇದರ ಲಕ್ಷಣಗಳಿಗೆ ಸಂಬಂಧಿಸಿದ ಭಿತ್ತಿಪತ್ರಗಳನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಅಂಬಾದಾಸ್ ಕುಲಕರ್ಣಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಕುಷ್ಠರೋಗ ನಿವಾರಣಾ ಮತ್ತು ಜಿಲ್ಲಾ ಮಾನಸಿಕ ಕಾರ್ಯಕ್ರಮಾಧಿಕಾರಿ ಡಾ.ಪಿ.ಡಿ.ಮುರುಳೀಧರ್, ಜೆ.ಜೆ.ಎಂ. ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಸಿ.ವೈ.ಸುದರ್ಶನ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಮನೋವೈದ್ಯ ಡಾ.ಗಂಗಂ ಸಿದ್ಧಾರೆಡ್ಡಿ, ಎಪಿಡಿ ಸಂಸ್ಥೆಯ ಎಸ್.ರವಿ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
