ನಿರುದ್ಯೋಗ ಸಮಸ್ಯೆಯನ್ನು ನಿಯಂತ್ರಿಸಲು ಅರವಿಂದ ಲಿಮಿಟೆಡ್ ಕಳೆದ 84 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. –ರಘುಮೂರ್ತಿ

ಚಳ್ಳಕೆರೆ

       ಪ್ರಸ್ತುತ ದಿನಗಳಲ್ಲಿ ಉದ್ಯೋಗಗಳನ್ನು ಪಡೆಯುವುದು ಯುವಕ-ಯುವತಿಯರಿಗೆ ಸುಲಭದ ಮಾತಾಗಿಲ್ಲ. ನಿರುದ್ಯೋಗ ಸಮಸ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಉದ್ಯೋಗಕ್ಕಾಗಿ ನಿರಂತರ ಪ್ರಯತ್ನಿಸುವವರು ಸಂಖ್ಯೆ ಹೆಚ್ಚಿದೆ. ಆದರೆ, ಕಡಿಮೆ ವಿದ್ಯಾಸಭ್ಯಾಸದಲ್ಲಿ ಉತ್ತಮ ಉದ್ಯೋಗವನ್ನು ಪಡೆದು ಬದುಕನ್ನು ರೂಪಿಸಿಕೊಳ್ಳಲು ಅರವಿಂದ ಲಿಮಿಟೆಡ್ ಕೌಶಲ್ಯ ತರಬೇತಿ ನಡೆಸುವ ಮೂಲಕ ನಿರುದ್ಯೋಗದ ಸಮಸ್ಯೆಯನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

        ಅವರು, ಭಾನುವಾರ ಇಲ್ಲಿನ ರೋಟರಿ ಬಾಲಭವನದಲ್ಲಿ ಚಿತ್ರದುರ್ಗದ ಅರವಿಂದ ಲಿಮಿಟೆಡ್‍ವತಿಯಿಂದ ಹಮ್ಮಿಕೊಂಡಿದ್ದ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರ ಮತ್ತು ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಅರವಿಂದ ಲಿಮಿಟೆಡ್ ರಾಜ್ಯದಲ್ಲಿಯೇ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದು, 1935ರಲ್ಲಿ ನಿರುದ್ಯೋಗವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿಯವರು ಅರವಿಂದ ಲಿಮಿಟೆಡ್ ಸ್ಥಾಪನೆ ಮಾಡಿದರು. ಇಂದು ಈ ಸಂಸ್ಥೆ 84 ವರ್ಷಗಳನ್ನು ಪೂರೈಸಿದ್ದು, ಕಡಿಮೆ ಶಿಕ್ಷಣ ಪಡೆದು ಬಡ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಸಲುವಾಗಿ ಇಂತಹ ಮೇಳಗಳನ್ನು ನಡೆಸುತ್ತಿರುವುದು ಸಂತಸದ ವಿಷಯವೆಂದರು.

        ಅರವಿಂದ ಲಿಮಿಟೆಡ್‍ನ ಮಹಂತೇಶ್ ಮಾತನಾಡಿ, ಕಳೆದ 1991ರಿಂದ ರಾಜ್ಯದಲ್ಲಿ ಈ ಕಂಪನಿ ಯಶಸ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚಿತ್ರದುರ್ಗ ನಗರದಲ್ಲಿ 2014ರಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಪ್ರಸ್ತುತ 1400 ಕೂಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬ ಕೂಲಿ ಕಾರ್ಮಿಕನ ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ. ಅರವಿಂದ ಲಿಮಿಟೆಡ್ ಕಂಫನಿಯಲ್ಲಿ ಹೆಚ್ಚಾಗಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ನಿರುದ್ಯೋಗವನ್ನು ನಿಯಂತ್ರಿಸಲು ನಮ್ಮ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

         ಕಾರ್ಯಕ್ರಮದಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಬಳಿಗಾರ್, ಉಪನಿರ್ದೇಶಕ ನೆಗ್ಲೂರ್, ನಗರಸಭಾ ಸದಸ್ಯೆ ಕವಿತಾ, ಆರ್.ಪ್ರಸನ್ನಕುಮಾರ್, ಸರಸ್ವತಿ, ಕಂದಿಕೆರೆ ಸುರೇಶ್‍ಬಾಬು ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link