ಚಳ್ಳಕೆರೆ
ಕಳೆದ ಕೆಲವು ತಿಂಗಳುಗಳಿಂದ ನಿಯಂತ್ರಣದಲ್ಲಿದ್ದ ಅಪಘಾತ ಪ್ರಕರಣಗಳು ಮರುಕಳಿಸುತ್ತಿದ್ದು, ಅಪಘಾತಗಳಲ್ಲಿ ಸಾವುನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚಳ್ಳಕೆರೆ ವೃತ್ತ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇರ್ವರು ಮೃತಪಟ್ಟು, ಐದು ಜನರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಳ್ಳಕೆರೆ ಠಾಣಾ ವ್ಯಾಪ್ತಿಯ ಕುರುಡಿಹಳ್ಳಿ ಲಂಬಾಣಿಹಟ್ಟಿ ಮಾರ್ಗಮಧ್ಯದಲ್ಲಿ ಚಳ್ಳಕೆರೆಯಿಂದ ಚಿತ್ರದುರ್ಗದ ಕಡೆಗೆ ಚಲಿಸುತ್ತಿದ್ದ ಮೋಟಾರ್ ಬೈಕ್‍ಗೆ ಯಾವುದೋ ಅಪರಿಚಿತ ವಾಹನ ಚಿಕ್ಕಿ ಹೊಡೆದ ಪರಿಣಾಮವಾಗಿ ಮೋಟಾರ್ ಬೈಕ್‍ನ ಮುಂಭಾಗದ ಹೆಡ್‍ಲೈಟ್, ಹ್ಯಾಂಡಲ್ ತುಂಡಾಗಿದ್ದು, ಪಿ.ಗೌರಿಪುರದ ಸುಡುಗಾಡು ಸಿದ್ದ ಜನಾಂಗದ ರಾಮಚಂದ್ರಪ್ಪ(28) ತೀರ್ವ ರಕ್ತಗಾಯದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊರ್ವ ಗಾಯಾಳು ಅದೇ ಗ್ರಾಮದ ಶಿವಣ್ಣ(23) ದಾವಣಗೆರೆಯ ಎಸ್‍ಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಾಲ್ಲೂಕಿನ ತಳಕು ಠಾಣಾ ವ್ಯಾಪ್ತಿಯ ಗಿರಿಯಮ್ಮನಹಳ್ಳಿ ಬಳಿ ಆಟೋರಿಕ್ಷಾ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ವರವು ಗ್ರಾಮದ ದೊಡ್ಡಪಾಲಯ್ಯ(55) ರಕ್ತಗಾಯಗಳಿಂದ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ವರವು ಗ್ರಾಮದ ಶಾಂತಮ್ಮ(40), ಶಿವಮ್ಮ(30), ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ತಳಕು ಗ್ರಾಮದ ಮದ್ದಾನಪ್ಪ(75), ಸರ್ವಮ್ಮ(70) ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಆಟೋರಿಕ್ಷಾ ಗಿರಿಯಮ್ಮನಹಳ್ಳಿ ಗೇಟ್‍ನಿಂದ ತಳಕು ಕಡೆಗೆ ತೆರಳುತ್ತಿದ್ದು, ಬೈಕ್ ತಳುಕಿನಿಂದ ಚಳ್ಳಕೆರೆ ಕಡೆಗೆ ಬರುತ್ತಿರುವಾಗ ವೇಗವಾಗಿ ಬಂದ ಆಟೋ ಬೈಕ್‍ಗೆ ಡಿಕ್ಕಿಯಾಗಿ ಪಲ್ಟಿಯಾಗಿರುತ್ತದೆ.
ಜಿಲ್ಲಾ ರಕ್ಷಣಾಧಿಕಾರಿಗಳ ಭೇಟಿ :- ಚಳ್ಳಕೆರೆ ವೃತ್ತವ್ಯಾಪ್ತಿಯಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ನಡೆದಿದ್ದು, ಇಬ್ಬರು ಮೃತಪಟ್ಟ ಹಿನ್ನೆಲ್ಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪೊಲೀಸ್ ಅಧಿಕಾರಿಗಳಿಗೆ ರಕ್ಷಣಾ ಕ್ರಮಗಳ ಬಗ್ಗೆ ಕೆಲವೊಂದು ಸೂಚನೆ ನೀಡಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ರಾಮಲಕ್ಷ್ಮಣ್ ವರಸಿದ್ದಿ, ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
