ಆಶಾ ಕಾರ್ಯಕರ್ತೆಯರ ಆರ್ಥಿಕ ಸದೃಢತೆಗೆ ಸಾಲ ಸೌಲಭ್ಯ

ಚಿತ್ರದುರ್ಗ

      ಕೋವಿಡ್ 19 ವೈರಸ್ ಸೋಂಕು ತಡೆಗಟ್ಟಲು ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ 12.75 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇದರ ಜೊತೆಗೆ ಆಶಾ ಕಾರ್ಯಕರ್ತೆಯರ ಆರ್ಥಿಕ ಸದೃಢತೆಗಾಗಿ ವಿವಿಧ ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಒದಗಿಸಲು ಸರ್ಕಾರ ಶೀಘ್ರದಲ್ಲಿಯೇ ಯೋಜನೆ ರೂಪಿಸಲಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

     ಜಿಲ್ಲಾಡಳಿತ, ಸಹಕಾರ ಇಲಾಖೆ ಮತ್ತು ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಚೆಕ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ, ಪೊಲೀಸ್ ಸೇರಿದಂತೆ ಹಲವು ಇಲಾಖೆಗಳು ಕೈಜೋಡಿಸಿವೆ. ಈ ದಿಸೆಯಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು, ಮುಂಚೂಣಿಯಲ್ಲಿ ನಿಂತು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ ಸೋಂಕು ನಿರ್ಮೂಲನೆ ನಿಟ್ಟಿನಲ್ಲಿ ರಾಜ್ಯದ ಸಹಕಾರಿ ಕ್ಷೇತ್ರದಿಂದ 52 ಕೋಟಿ ರೂ. ಹಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ ಎಂದರು

     ಸಹಕಾರ ಇಲಾಖೆಯೊಂದಿಗೆ ಡಿಸಿಸಿ ಸೇರಿದಂತೆ ಇತರೆ ಸಹಕಾರ ಸಂಸ್ಥೆಗಳು ತಮ್ಮ ಲಾಭದ ಮೊತ್ತವನ್ನು ಕ್ರೋಢೀಕರಿಸಿ, ಇದರ ಲಾಭಾಂಶವನ್ನು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ರೂಪದಲ್ಲಿ ನೀಡಲು ನಿರ್ಧರಿಸಿದ್ದು, ಪ್ರತಿ ಕಾರ್ಯಕರ್ತೆಗೆ ರೂ. 3000 ಗಳಂತೆ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ, ಒಟ್ಟು 12.75 ಕೋಟಿ ರೂ. ಪ್ರೋತ್ಸಾಹಧನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೆ ರಾಜ್ಯದ 13 ಜಿಲ್ಲೆಗಳಲ್ಲಿ ತಾವೇ ಖುದ್ದು ಭೇಟಿ ನೀಡಿ ಪ್ರೋತ್ಸಾಹಧನ ವಿತರಿಸಿದ್ದೇವೆ ಎಂದರು.

    ಇನ್ನು 10 ದಿನಗಳ ಒಳಗಾಗಿ ಉಳಿದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಲಾಗುವುದು. ಪ್ರೋತ್ಸಾಹಧನ ಎಲ್ಲ ಕಾರ್ಯಕರ್ತೆಯರಿಗೂ ದೊರಕಬೇಕು, ಯಾರಿಗಾದರೂ ತಲುಪದೇ ಇದ್ದಲ್ಲಿ, ಅಂತಹವರು ಆಯಾ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಿಗೆ ಭೇಟಿ ನೀಡಿ ಮಾಹಿತಿ ನೀಡಬೇಕು ಎಂದು ಸಚಿವರು ಹೇಳಿದರು.

   ಸಹಕಾರಿ ಬ್ಯಾಂಕ್ ಗಳು, ಡಿಸಿಸಿ ಬ್ಯಾಂಕ್ ಮೂಲಕ ಈಗಾಗಲೆ ಬಡವರ ಬಂಧು ಯೋಜನೆ, ಸ್ವಸಹಾಯ ಗುಂಪುಗಳಿಗೆ, ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುವ ಮೂಲಕ ಅವರ ಆರ್ಥಿಕತೆಗೆ ನೆರವು ನೀಡಲಾಗುತ್ತಿದೆ. ಅದೇ ರೀತಿ ಆಶಾ ಕಾರ್ಯಕರ್ತೆಯರೂ ಕೂಡ ಆರ್ಥಿಕ ಸ್ವಾವಲಂಬಿಗಳಾಗಲು, ವಿವಿಧ ಆರ್ಥಿ ಚಟುವಟಿಕೆ ಕೈಗೊಳ್ಳಲು ಸಹಕಾರಿ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಇಂತಹ ಯೋಜನೆ ರೂಪಿಸಲು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರು ಸಲಹೆ ನೀಡಿದ್ದಾರೆ. ಅವರ ಸಲಹೆ ಸ್ವೀಕಾರಾರ್ಹವಾಗಿದ್ದು, ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸದ್ಯದಲ್ಲಿಯೇ ಈ ಯೋಜನೆ ಜಾರಿಗೆ ತರಲು ಯತ್ನಿಸಲಾಗುವುದು ಎಂದರು.

    ರಾಜ್ಯದಲ್ಲಿ ಈ ವರ್ಷ ಸಹಕಾರಿ ಬ್ಯಾಂಕ್‍ಗಳ ಮೂಲಕ ರೈತರಿಗೆ, ಸಹಕಾರಿಗಳಿಗೆ 14 ಸಾವಿರ ಕೋಟಿ ರೂ. ಸಾಲ ನೀಡಲು ಯೋಜನೆ ರೂಪಿಸಿ, ಈಗಾಗಲೆ ಇದಕ್ಕೆ ಚಾಲನೆ ನೀಡಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಮಾತನಾಡಿ, ಕೋವಿಡ್ ವೈರಸ್ ಸೋಂಕಿನಿಂದ ಇಡೀ ಪ್ರಪಂಚ ತತ್ತರಿಸಿದೆ. ಕಳೆದ ನಾಲ್ಕೈದು ತಿಂಗಳಿನಿಂದಲೂ ಆಶಾ ಕಾರ್ಯಕರ್ತೆಯರು ಸತತ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ನರ್ಸ್, ವೈದ್ಯರು, ಲ್ಯಾಬ್ ಟೆಕ್ನಿಷಿಯನ್‍ಗಳು ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶದ ಪ್ರಧಾನಮಂತ್ರಿಗಳೂ ಕೂಡ ಆಶಾ ಕಾರ್ಯಕರ್ತೆಯರ ಸೇವೆಯನ್ನು ಶ್ಲಾಘಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಬ್ಯಾಂಕ್‍ಗಳ ಮೂಲಕ ನೆರವು ನೀಡುವಂತೆ ಸಹಕಾರ ಸಚಿವರಿಗೆ ಸಲಹೆ ನೀಡಿದ್ದೇನೆ. ಈ ಸಲಹೆಯನ್ನು ಸಚಿವರು ಸ್ವೀಕರಿಸಿದ್ದಾರೆ. ಜಿಲ್ಲೆಯಲ್ಲಿ 1455 ಆಶಾ ಕಾರ್ಯಕರ್ತೆಯರಿದ್ದು, ಎಲ್ಲರಿಗೂ ಹಂತ ಹಂತವಾಗಿ ಪ್ರೋತ್ಸಾಹಧನ ವಿತರಣೆ ಆಗಲಿದೆ ಎಂದರು.

    ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ಶಾಸಕರುಗಳಾದ ಟಿ. ರಘುಮೂರ್ತಿ, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಧಾಕರ್, ತಾ.ಪಂ. ಅಧ್ಯಕ್ಷ ಲಿಂಗರಾಜ್, ಡಿಹೆಚ್‍ಒ ಡಾ. ಪಾಲಾಕ್ಷ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ 101 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link