ಬಳ್ಳಾರಿ :
ಇಂದು ಬಳ್ಳಾರಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದಿಂದ, ಆಶಾ ಕಾರ್ಯಕರ್ತೆಯರ ಕೆಲವು ಪ್ರಮುಖ ಬೇಡಿಕೆಗಳಿಗಾಗಿ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಸಂಘಟಿಸಲಾಗಿತ್ತು. ನಾರಯಣ ರಾವ್ ಉದ್ಯಾನವನದಿಂದ ಪ್ರಾರಂಭವಾದ ಮೆರವಣಿಗೆ ಅನಂತಪುರ ರಸ್ತೆ, ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಯನ್ನು ತಲುಪಿತು. ಮೆರವಣಿಗೆ ಉದ್ದಕ್ಕೂ ‘ಪ್ರೋತ್ಸಾಹ ಧನ ರೂ.12,000 ನಿಗಧಿಮಾಡಲೆಬೇಕು, ಆಶಾ ಸಾಫ್ಟ್ ರದ್ದಾಗಲಿ ! ಮುಂತಾದ ಘೋಷಣೆಗಳನ್ನು ಆಶಾ ಕಾರ್ಯಕರ್ತೆಯರು ಕೂಗಿದರು.
ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿಗಳಾದ ಕಾ.ಸೋಮಶೇಖರ್.ಕೆ ಮಾತನಾಡುತ್ತಾ “ರಾಜ್ಯದ ಆರೋಗ್ಯ ಇಲಾಖೆಯಡಿ ಮಹತ್ತರವಾದ ಕೆಲಸಗಳನ್ನು ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಹಳ್ಳಿ ಮತ್ತು ನಗರದ ಬೇರುಮಟ್ಟದಲ್ಲಿ ಕೆಲಸ ನಿರ್ವಹಿಸುವ ಇವರು, ಗರ್ಭಿಣಿ ಮಹಿಳೆಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು ಮೂಡಿಸುತ್ತ, ಕ್ಷಯ, ಕುಷ್ಠ ರೋಗ, ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಾ, ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿಯ ಕುರಿತು ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಗೆ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಇತ್ತೀಚೆಗೆ ಇವರ ಸೇವೆಯನ್ನು ಗೌರವಿಸಿ,
ಆಂಧ್ರಪ್ರದೇಶದಲ್ಲಿ ರೂ.10000 ಗೌರವಧನ ನಿಗದಿಯಾಗಿದ್ದು, ರಾಜ್ಯದಲ್ಲಿಯೂ ಮಾನ್ಯ ಮುಖ್ಯಮಂತ್ರಿಗಳ ಭರವಸೆಯಂತೆ ರಾಜ್ಯ ಮತ್ತು ಕೇಂದ್ರದ ಅನುದಾನದಿಂದ ರೂ.12000 ನಿಗದಿಯಾಗಬೇಕೆಂಬುದು ಆಶಾ ಕಾರ್ಯಕರ್ತೆಯರ ಆಗ್ರಹವಾಗಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿ(ಎಸ್) ಪಕ್ಷಗಳು ಇಂದು ಕಾರ್ಮಿಕರ, ದುಡಿಯುವ ಜನರ ಜ್ವಲಂತ ಸಮಸ್ಯೆಗಳ ಪರಿಹಾರದ ಬಗ್ಗೆ ಗಂಭೀರವಾಗಿ ಆಲೋಚಿಸುವ ಬದಲು ಕುರ್ಚಿಗಾಗಿ ಕಿತ್ತಾಡುತ್ತಿರುವುದು ಅತ್ಯಂತ ಅಸಹ್ಯಕರ ಬೆಳವಣಿಗೆ. ಈ ಹಿನ್ನಲೆಯಲ್ಲಿ ಕಾರ್ಮಿಕ ವರ್ಗ ಇಂತ ಹೊಲಸು ರಾಜಕೀಯದ ವಿರುದ್ಧವೂ ಧ್ವನಿ ಎತ್ತಬೇಕು. ಹಾಗೆಯೇ ಬಲಿಷ್ಠವಾದ ಹೋರಾಟಗಳನ್ನು ಕಟ್ಟುತ್ತಾ, ತಮ್ಮ ನೈಜ ಬೇಡಿಕೆಗಳನ್ನು ಕಾರ್ಮಿಕರು ಈಡೇರಿಸಿಕೊಳ್ಳಬೇಕೆಂದು” ಕರೆ ನೀಡಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಕಾ.ನಾಗಲಕ್ಷ್ಮಿ ಮಾತನಾಡುತ್ತಾ “ ಪ್ರಮುಖವಾಗಿ ಇಂದಿಗೂ ಆಶಾಗಳು ಪ್ರತೀ ತಿಂಗಳಿಗೊಮ್ಮೆ ವೇತನವಿಲ್ಲದೆ, ಪರದಾಡುವಂತಾಗಿದೆ. ರಾಜ್ಯದಲ್ಲಿ ಕೇಂದ್ರದ ಪ್ರೋತ್ಸಾಹಧನ ನೀಡುವ ಮಾದರಿ ಆಶಾ ಸಾಫ್ಟ್ ವೇತನ ಮಾದರಿಯಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಕಳೆದ ಸುಮಾರು 3 ವರ್ಷದಿಂದ ಸಹಸ್ರಾರು ರೂಪಾಯಿಗಳ ಆರ್ಥಿಕ ನಷ್ಟವಾಗಿದೆ. ಸರ್ಕಾರದ ನೂತನ ವೇತನ ಪಾವತಿ ವಿಧಾನ ಖಜಾನೆ-2 ರಿಂದ ರಾಜ್ಯದ ಮಾಸಿಕ ರೂ.3500 ಗೌರವಧನ ಹಲವಾರು ತಿಂಗಳು ವಿಳಂಬ ಮಾಡಿ ನೀಡಿರುವರು.
ಈಗಲೂ ಸಹ ಕೆಲವೆಡೆ 4-5 ತಿಂಗಳು ಇಂದಿಗೂ ಬಾಕಿ ಇದೆ. ಕಳೆದ 10 ತಿಂಗಳಿಂದ ಕೇಂದ್ರದ ಪ್ರೋತ್ಸಾಹಧನ ಎಂಸಿಟಿಎಸ್ ನಲ್ಲಿ ದಾಖಲಾಗುವಂತಹದು ಬಾಕಿ ಇದೆ. ಈಗ ಆರ್‍ಸಿಎಚ್ ಹೊಸ ಪೋರ್ಟಲ್ ಜಾರಿ ಮಾಡುತ್ತಿರುವರೆಂದು ವಿಳಂಬ ಮಾಡಿರುವರು. ಕಳೆದ 3-4 ವರ್ಷದಿಂದ ಹೊಸ ರೀತಿಯ ವೇತನ ವಿಧಾನ ಪದೇ ಪದೇ ಬದಲಾವಣೆ ಮಾಡುತ್ತಿರುವರು. ಬಡ ಆಶಾಗಳ ಮೇಲೆ ಈ ರೀತಿ ಪ್ರಯೋಗ ಮಾಡಲಾಗುತ್ತಿದೆ. ಯಾವುದೇ ಹೊಸ ವಿಧಾನ ಜಾರಿ ತರುವಾಗ ತಯಾರಿ ಮಾಡಿಕೊಂಡು ಜಾರಿ ಮಾಡಬೇಕು. ತಯಾರಿ ಇಲ್ಲದ ಈ ವಿಧಾನದಿಂದ ಬಡ ಕಾರ್ಯಕರ್ತೆಯರು ಪ್ರತೀ ತಿಂಗಳು ವೇತನವಿಲ್ಲದೆ ಪರದಾಡುವಂತಾಗಿದೆ” ಎಂದು ಕಿಡಿ ಕಾರಿದರು.
ಎಸ್.ಯು.ಸಿ.ಐ (ಕಮ್ಯುನಿಸ್ಟ್) ಜಿಲ್ಲಾ ಕಾರ್ಯದರ್ಶಿಗಳಾದ ಕಾ. ರಾಧಾಕೃಷ್ಣ ಉಪಾದ್ಯ ಮಾತನಾಡುತ್ತಾ “ ಹಗಲಿರುಳು ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಜೀವನ ಯೋಗ್ಯ ಸಂಬಳವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿಲ್ಲ.
ಸರ್ಕಾರಗಳೇ ಕಾರ್ಮಿಕರ ಶೋಷಣೆಗೆ ಮುಂದಾಗಿರುವುದು ಅತ್ಯಂತ ದುರಂತ. ಒಂದೆಡೆ ಕಾರ್ಪೋರೇಟ್ ಮಾಲೀಕರಿಗೆ ಲಕ್ಷಾಂತರ ಕೋಟಿ ತೆರಿಗೆ ವಿನಾಯಿತಿ, ಸಾಲ ಮನ್ನಾ ಮಾಡುವ ಸರ್ಕಾರಗಳು ಆಶಾ ಕಾರ್ಯಕರ್ತೆರಿಗೆ ಕನಿಷ್ಠ ವೇತನ ನೀಡಲು ಮೀನಾಮೇಷ ಎಣಿಸುತ್ತಿರುವುದು ಅತ್ಯಂತ ನಾಚಿಕೆ ತರುವಂತಹ ಸಂಗತಿ. ಈ ಹಿನ್ನಲೆಯಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗಾಗಿ ಧ್ವನಿ ಎತ್ತುವುದರ ಜೊತೆಗೆ ಕಾರ್ಮಿಕ ವಿರೋಧಿಯಾದ ಈ ವ್ಯವಸ್ಥೆಯ ವಿರುದ್ಧವೂ ಹೋರಾಟ ಕಟ್ಟಬೇಕು” ಎಂದರು.
ಎಐಎಂಎಸ್‍ಎಸ್ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಮಂಜುಳಾ ಎಂ.ಎನ್ ಈ ಸಂದರ್ಭದಲ್ಲಿ ಮಾತನಾಡಿದರು. ಎಐಯುಟಿಯುಸಿ ಜಿಲ್ಲಾ ನಾಯಕರಾದ ಎ.ದೇವದಾಸ್ ಅಧ್ಯಕ್ಷತೆ ವಹಿಸಿದ್ದರು. ಇನ್ನಿತರ ನಾಯಕರುಗಳಾದ ಎ.ಶಾಂತಾ, ಗೀತಾ, ವೀರಮ್ಮ, ಮಂಗಳಾ, ರಾಜೇಶ್ವರಿ, ನೇತ್ರಾವತಿ, ಅನಂತಲಕ್ಷ್ಮಿ, ಚೆನ್ನಮ್ಮ, ಗೌರಮ್ಮ ಹೋರಾಟದ ನೇತೃತ್ವ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
