ಬೆಂಗಳೂರು
ಶಿವಾಜಿನಗರ ಠಾಣೆಯ ಸಹಾಯಕ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್(ಎಎಸ್‍ಐ) ರಾಮಸೋಮಪ್ಪ ಅವರು ಅನಾರೋಗ್ಯದಿಂದ ನೊಂದು ನೇಣಿಗೆ ಶರಣಾಗಿರುವ ದುರ್ಘಟನೆ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಾಜಿನಗರದ ಪೊಲೀಸ್ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ರಾಮಸೋಮಪ್ಪ (58) ಅವರು ಶುಕ್ರವಾರ ಬೆಳಿಗ್ಗೆ 11.30ರ ವೇಳೆ ಪತ್ನಿಯನ್ನು ಜ್ಯೂಸ್ ತರಲು ಅಂಗಡಿಗೆ ಕಳುಹಿಸಿ, ನೀನು ಜ್ಯೂಸ್ ಕುಡಿದುಕೊಂಡು ತಡವಾಗಿ ಬಾ ಎಂದು ಹೇಳಿದ್ದಾರೆ. ಪತ್ನಿಯು ಸ್ವಲ್ಪ ಸಮಯ ಬಿಟ್ಟು ಬರುವಷ್ಟರಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮಸೋಮಪ್ಪ ಅವರಿಗೆ ಇಬ್ಬರು ಮಕ್ಕಳಿದ್ದು, ಅವರು ಕೆಲಸಕ್ಕೆ ಹೋದ ನಂತರ ಈ ದುರ್ಘಟನೆ ನಡೆದಿದೆ.
ಕಿಡ್ನಿ ಸಮಸ್ಯೆ ಮತ್ತು ಇನ್ನಿತರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕಳೆದ ಕೆಲವು ದಿನಗಳಿಂದ ರಜೆಯ ಮೇಲೆ ತೆರಳಿದ್ದರು. ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶಿವಾಜಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು, ಅಗಲಿದ ಸಹೋದ್ಯೋಗಿಗೆ ಶಿವಾಜಿನಗರ ಪೊಲೀಸರು ಕಂಬನಿ ಮಿಡಿದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








