ಸಂಘಟನೆಯನ್ನೇ ಮೂಲ ಮಂತ್ರ ಮಾಡಿಕೊಂಡಿದ್ದ ಅಶೋಕ್ ಗಸ್ತಿಯವರು ನಮ್ಮ ಸಮಾಜದ ಆಸ್ತಿ

ಚಿಕ್ಕನಾಯಕನಹಳ್ಳಿ

    ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿಯವರ ನಿಧನಕ್ಕೆ ಸಂತಾಪ ಸೂಚಿಸಿ ತಾಲ್ಲೂಕಿನ ಸವಿತಾ ಸಮಾಜ ಹಾಗೂ ವಿವಿಧ ಸಂಘಟನೆಗಳು ಪಟ್ಟಣದ ನೆಹರು ಸರ್ಕಲ್ ನಲ್ಲಿ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.

    ರಾಜ್ಯ ಸವಿತಾ ಸಮಾಜದ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಸಂಘಟನೆಯನ್ನೇ ಮೂಲ ಮಂತ್ರ ಮಾಡಿಕೊಂಡಿದ್ದ ಅಶೋಕ್ ಗಸ್ತಿಯವರು ನಮ್ಮ ಸಮಾಜದ ಆಸ್ತಿ, ಬಡತನದಲ್ಲೇ ಹುಟ್ಟಿ, ಸಂಘಟನೆಯ ಮೂಲಕ ಗುರುತಿಸಿಕೊಂಡು ರಾಜ್ಯ ಸಭೆಗೆ ನೇಮಕಗೊಂಡ ಬೆರಳೆಣಿಕೆಯಷ್ಟು ಮಂದಿಯಲ್ಲಿ ಇವರು ಇತ್ತೀಚೆಗೆ ಮುಂಚೂಣಿಯಲ್ಲಿದ್ದವರು, ಇವರನ್ನು ಕಳೆದುಕೊಂಡ ತಳ ಸಮುದಾಯಗಳು ಬಡವಾಗಿವೆ ಎಂದರು.

    ಬಿಜೆಪಿ ಮುಖಂಡ ಶ್ರೀನಿವಾಸಮೂರ್ತಿ ಮಾತನಾಡಿ, ಅಶೋಕ್ ಗಸ್ತಿಯವರು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದರು, ಪಕ್ಷದಲ್ಲಿ ಅವರ ಗುಣವನ್ನು ನೋಡಿ ಮೆಚ್ಚಿ ಅವರ ಆಯ್ಕೆಯಾಗಿತ್ತು, ಅವರು ಪಕ್ಷದ ನಿಷ್ಠೆ, ತತ್ವಕ್ಕೆ ಬದ್ದರಾಗಿದ್ದರು. ಇವರ ನಿಧನದಿಂದ ಪಕ್ಷಕ್ಕೆ ನಷ್ಟವಾಗಿದೆ ಎಂದರು.

   ಮಾಜಿ ಪುರಸಭಾಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, ರಾಯಚೂರು ಜಿಲ್ಲೆಯ ಲಿಂಗಸೂರುನಲ್ಲಿ ಜನಿಸಿದ ಸಾಮಾನ್ಯ ವಿದ್ಯಾರ್ಥಿ ನಾಯಕ, ವಿದ್ಯಾರ್ಥಿ ಪರಿಷತ್ ಮೂಲಕ ಅನೇಕ ಹೋರಾಟ ಮಾಡಿದಂತಹ ವ್ಯಕ್ತಿ, ನಂತರ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ರಾಜ್ಯಸಭೆಗೆ ಆಯ್ಕೆಯಾಗಿದ್ದರು, ಕಳೆದ ನಾಲ್ಕು ತಿಂಗಳ ಹಿಂದೆ ಆಯ್ಕೆಯಾಗಿದ್ದ ಅವರ ಆಯ್ಕೆಯಿಂದ ಎಲ್ಲಾ ಹಿಂದುಳಿದ ವರ್ಗದ ಜನರಿಗೆ ಸಂತಸವಾಗಿತ್ತು. ಇವರ ಪ್ರಾಮಾಣಿಕತೆಗೆ ಅನುಗುಣವಾಗಿ ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅವರು ಹಿಂದುಳಿದ ವರ್ಗದವರಿಗೆ ಒಂದು ಶಕ್ತಿಯಾಗಿದ್ದರು ಎಂದರು.

   ಮಾಜಿ ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ಅಶೋಕ್ ಗಸ್ತಿಯವರಂತಹ ತಳಮಟ್ಟದಲ್ಲಿದ್ದ ಒಬ್ಬ ಕಾರ್ಯಕರ್ತನನ್ನು ಗುರುತಿಸಿ ರಾಜ್ಯ ಸಭೆಗೆ ಆಯ್ಕೆ ಮಾಡಲಾಗಿತ್ತು, ಇವರು ಎಲ್ಲಾ ತಳಮಟ್ಟದ ಕಾರ್ಯಕರ್ತರಿಗೆ ಆಶಾಕಿರಣವಾಗಿದ್ದರು ಹಾಗೂ ಅಶೋಕ್ ಗಸ್ತಿಯವರು ಸಂಘಟನಾ ವ್ಯಕ್ತಿಯಾಗಿದ್ದರು, ಅವರು ಕೊರೋನಾ ಎಂಬ ರೋಗದಿಂದ ಮೃತಪಟ್ಟಿರುವುದು ಸಮಾಜಕ್ಕೆ ನಷ್ಠವುಂಟಾಗಿದೆ ಎಂದರು. ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಕುಂಚಾಂಕುರ ಕಲಾಸಂಘದ ಅಧ್ಯಕ್ಷ ಸಿ.ಎಚ್.ಗಂಗಾಧರ್, ಸವಿತಾ ಸಮಾಜದ ಮುಖಂಡ ಶಿವಣ್ಣ, ಸವಿತಾ ಸಮಾಜದ ಮುಖಂಡರು, ತಾಲ್ಲೂಕಿನ ಹಲವು ಸಂಘಟನೆಯ ಮುಖಂಡರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link