ದಾವಣಗೆರೆ:
ರೈತರಿಗೆ ನೋಟೀಸ್ ನೀಡಿ, ಬಲವಂತದ ಸಾಲ ವಸೂಲಾತಿಗೆ ಮುಂದಾಗಿರುವ ಎಕ್ಸಿಸ್ ಬ್ಯಾಂಕ್ ಶಾಖೆಗೆ ಬೀಗ ಜಡಿದು, ಮುತ್ತಿಗೆ ಹಾಕಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಪಿಬಿ ರಸ್ತೆಯಲ್ಲಿರುವ ಎಕ್ಸಿಸ್ ಬ್ಯಾಂಕ್ ಶಾಖೆ ಎದುರು ಜಮಾಯಿಸಿದ ರೈತರು, ಬ್ಯಾಂಕ್ ಅಧಿಕಾರಿಗಳ ವರ್ತನೆಯ ವಿರುದ್ಧ ಘೋಷಣೆ ಕೂಗಿ, ಶಾಖೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಕರ್ನಾಟಕ ನಿರಂತರವಾಗಿ ಬರಗಾಲಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಬ್ಯಾಂಕ್‍ಗಳು ರೈತರಿಂದ ಬಲವಂತದ ಸಾಲ ವಸೂಲಿ ಮಾಡಬಾರದು ನೋಟೀಸ್ ನೀಡಬಾರದು ಎಂಬುದಾಗಿ ಸೂಚಸಿದ್ದರೂ ಸಹ ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೆಳಗಾವಿ ರೈತರಿಗೆ ನೋಟೀಸ್ ನೀಡಿ, ಬಲವಂತವಾಗಿ ಸಾಲ ವಸೂಲಾತಿಗೆ ಮುಂದಾಗಿದ್ದಾರೆ. ಅಕಸ್ಮಾತ್ ರೈತರ ಸಾಲ ಪಾವತಿಸದಿದ್ದಲ್ಲಿ ಕೊಲ್ಕತ್ತಾ, ಚೆನ್ನೈ ನ್ಯಾಯಾಲಯಗಳಿಂದ ವಾರಂಟ್ ಹೊರಡಿಸಿ, ರೈತರಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಲ ತಿರುವಳಿ ಮಾಡದ ಅಸಾಹಯಕ ರೈತರ ವಿರುದ್ಧ ಕೊಲ್ಕತ್ತಾ, ಚೆನ್ನೈ ಸೇರಿದಂತೆ ಹೊರ ರಾಜ್ಯಗಳ ನ್ಯಾಯಾಲಯಗಳಲ್ಲಿ ಕೇಸ್ ದಾಖಲಿಸಿ ರೈತರಿಗೆ ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಚಿತ್ರಹಿಂಸೆ ನೀಡುತ್ತಿದ್ದಾರೆ. ಅಧಿಕಾರಿಗಳ ಇಂಥಹ ವರ್ತನೆಗಳಿಂದ ಬೆಸತ್ತಿರುವ ರೈತರು ಮಾನಕ್ಕೆ ಅಂಜಿ ವಿಧಿ ಇಲ್ಲದೇ, ಆತ್ಮಹತ್ಯೆಯ ಕಡೆಗೆ ಮುಖ ಮಾಡಿದ್ದಾರೆಂದು ಕಿಡಿಕಾರಿದರು.
ರಾಜ್ಯ ಸರ್ಕಾರ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಬ್ಯಾಂಕ್‍ಗಳು ರೈತರಿಂದ ಬಲವಂತದ ಸಾಲ ವಸೂಲಾತಿ ಮಾಡಬಾರದು. ಇನ್ನೂ ಮುಂದೆಯೂ ಎಕ್ಸಿಸ್ ಬ್ಯಾಂಕ್ ನೋಟೀಸ್ ನೀಡುವುದು, ಬಲವಂತದ ಸಾಲ ವಸೂಲಾತಿ ಮಾಡುವುದು ಹಾಗೂ ನ್ಯಾಯಾಲಯಗಳಲ್ಲಿ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದರೆ, ಎಕ್ಸಿಸ್ ಬ್ಯಾಂಕ್ ಅನ್ನು ಕರ್ನಾಟಕ ರಾಜ್ಯದಿಂದಲೇ ಓಡಿಸಬೇಕಾಗುತ್ತದೆ.
ಒಂದು ವೇಳೆ ಸಾಲ ವಸೂಲಿಗೆ ಹಳ್ಳಿಗೆ ಕಾಲಿಟ್ಟರೆ, ಎಕ್ಸಿಸ್ ಬ್ಯಾಂಕ್ ಅಧಿಕಾರಿ, ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ, ಬಾರಿಕೋಲಿನಿಂದ ಬಾರಿಸುವ ಕೆಲಸವನ್ನು ರೈತ ಸಂಘ ಇನ್ನೂ ಮುಂದೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಮಾತನಾಡಿ, ಸಾಲ ಪಡೆದ ರೈತರಿಗೆ ನೋಟೀಸ್, ವಾರಂಟ್ ನೀಡುವ ಮೂಲಕ ಎಕ್ಸಿಸ್ ಬ್ಯಾಂಕ್ ಉದ್ಧಟತನ ಪ್ರದರ್ಶಿಸುತ್ತಿದೆ. ಇದರ ವಿರುದ್ಧ ರಾಜ್ಯಾದ್ಯಂತ ಎಕ್ಸಿಸ್ ಬ್ಯಾಂಕ್‍ಗಳ ಎದುರು ರೈತ ಸಂಘ ಮತ್ತು ಹಸಿರು ಸೇನೆ ಹೋರಾಟ ನಡೆಸಿವೆ. ಎಕ್ಸಿಸ್ ಬ್ಯಾಂಕ್ ಅನ್ನದಾತ ರೈತರ ವಿಚಾರದಲ್ಲಿ ಸೌಜನ್ಯದಿಂದ ವರ್ತಿಸದಿದ್ದರೆ ಕರ್ನಾಟಕದಿಂದಲೇ ಎಕ್ಸಿಸ್ ಬ್ಯಾಂಕನ್ನು ಓಡಿಸಬೇಕಾಗುತ್ತದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಎಕ್ಸಿಸ್ ಬ್ಯಾಂಕ್ ವ್ಯವಹಾರ ನಡೆಸಬೇಕೆಂದರೆ ರಾಜ್ಯದ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ತಕ್ಷಣವೇ ರಾಜ್ಯ ಸರ್ಕಾರ ಇಂತಹ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೆಳಗಾವಿ ರೈತರ ವಿರುದ್ಧದ ಕೇಸ್‍ನ್ನು ಬೇಷರತ್ ವಾಪಾಸ್ಸು ಪಡೆಯಬೇಕು. ಬಲವಂತದ ಸಾಲ ವಸೂಲಾತಿಯನ್ನು ತಕ್ಷಣ ಕೈಬಿಡಬೇಕೆಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಚಿನ್ನಸಮುದ್ರ ಶೇಖರ ನಾಯ್ಕ, ಚಿಕ್ಕನಹಳ್ಳಿ ರೇವಣಸಿದ್ಧಪ್ಪ, ಹುಚ್ಚವ್ವನಹಳ್ಳಿ ಗಣೇಶ, ಹುಚ್ಚವ್ವನಹಳ್ಳಿ ಶೇಖರಪ್ಪ, ಹೆದ್ನೆ ಅಂಜಿನಪ್ಪ, ಹೊನ್ನೂರು ರಾಜು, ಮಲ್ಲೇನಹಳ್ಳಿ ಅಜ್ಜಯ್ಯ, ಅಣ್ಣಪ್ಪ ಕಣಿವೆಬಿಳಚಿ, ಸಂತೋಷ ನಾಯ್ಕ, ಖಲೀಮ್‍ವುಲ್ಲಾ ಮತ್ತಿತರರು ಭಾಗವಹಿಸಿದ್ದರು.