ದಾವಣಗೆರೆ:
ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಬೈಕ್ ತಡೆದ ಕರ್ತವ್ಯನಿರತ ಸಂಚಾರಿ ಪೊಲೀಸರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ನಗರದ ಹದಡಿ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ನಗರದ ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಅಂಜಿನಪ್ಪ ಹಾಗೂ ಪೇದೆ ನಾರಾಯಣರಾಜ್ ಅರಸ್ ಹಲ್ಲೆಗೊಳಗಾಗಿರುವ ಸಂಚಾರಿ ಪೊಲೀಸರಾಗಿದ್ದಾರೆ.
ಇಲ್ಲಿನ ಹದಡಿ ರಸ್ತೆಯಲ್ಲಿರುವ ಡಿಆರ್‍ಆರ್ ಪಾಲಿಟೆಕ್ನಿಕ್ ಕಾಲೇಜು ಬಳಿ ಇವರಿಬ್ಬರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆಯಲ್ಲಿ ಜಿಲ್ಲಾ ಕ್ರೀಡಾಂಗಣದ ಕಡೆಯಿಂದ ವ್ಯಕ್ತಿಯೊಬ್ಬರು ಹೆಲ್ಮೆಟ್ ಧರಿಸದೇ, ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಹೀಗಾಗಿ ಪೇದೆ ನಾರಾಯಣರಾಜ್ ಅರಸ್ ಬೈಕ್ ತಡೆದು ಹೆಲ್ಮೆಟ್ ಧರಿಸದ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬೈಕ್ ಸವಾರ ಪೇದೆ ನಾರಾಯಣರಾಜ್ ಅರಸ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಹಲ್ಲೆ ತಡೆಯಲು ಮುಂದಾದ ಎಎಸ್‍ಐ ಅಂಜಿನಪ್ಪ ಅವರ ಮೇಲೂ ಸಹ ಹಲ್ಲೆ ನಡೆಸಿದ್ದಾರೆ.
ಇಲ್ಲಿನ ಶ್ರೀಸಿದ್ದಗಂಗಾ ಶಾಲೆ ಸಮೀಪದ ಶ್ರೀಸಿದ್ದರಾಮೇಶ್ವರ ಬಡಾವಣೆ ನಿವಾಸಿ ಕೆ.ಎಚ್.ರುದ್ರಪ್ಪ ಎಂಬುವರೇ ಸಂಚಾರಿ ಪೊಲೀಸರ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಬೈಕ್ ಸವಾರನಾಗಿದ್ದು, ರುದ್ರಪ್ಪ ಬೈಕ್ ಸ್ಟ್ಯಾಂಡ್ ಸಹ ಹಾಕದೇ ಕೆಳಗಿಳಿದವನೇ ಏಕಾಏಕಿ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೇ, ಪಕ್ಕದಲ್ಲೇ ಬೀದಿ ಬದಿ ವ್ಯಾಪಾರಸ್ಥರು ಮಾರಾಟಕ್ಕೆ ಇಟ್ಟಿದ್ದ ಮಣ್ಣಿನ ವಸ್ತುಗಳಿಂದ ಅರಸು ತಲೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಪೇದೆ ಅರಸುಗೆ ತೀವ್ರ ರಕ್ತಗಾಯವಾಗಿ, ತಲೆಯಿಂದ ರಕ್ತಸ್ರಾವವಾಗುತ್ತಿದೆ.
ಇನ್ನೂ ಪೇದೆಯ ರಕ್ಷಣೆಗೆ ಎಎಸ್‍ಐ ಅಂಜಿನಪ್ಪ ಮುಂದಾಗುತ್ತಿದ್ದಂತೆ ಬೈಕ್ ಸವಾರ ರುದ್ರಪ್ಪ ಎಎಸ್‍ಐ ಅಂಜಿನಪ್ಪ ಕೊರಳ ಪಟ್ಟಿಗೆ ಕೈ ಹಾಕಿದಲ್ಲದೇ, ಹಿಡಿದುಯ ಎಳೆದಾಡಿ ಅವಾಚ್ಯವಾಗಿ ನಿಂದಿಸುತ್ತಾ, ರಸ್ತೆಯಲ್ಲೆಲ್ಲಾ ಉರುಳಾಡಿಸಿ, ಹಲ್ಲೆ ಮಾಡಿದ್ದಾನೆ.
ಹಲ್ಲೆ ನಡೆಸಿರುವ ರುದ್ರಪ್ಪ ತಾನೊಬ್ಬ ವಕೀಲನಾಗಿದ್ದೇನೆಂದು ಹೇಳಿಕೊಂಡಿದ್ದಾನೆ. ಹಲ್ಲೆಯನ್ನು ಗಮನಿಸಿದ ದಾರಿಹೋಕರು, ಪಾದಚಾರಿಗಳು ಪೆಲೀಸರ ರಕ್ಷಣೆಗೆ ಧಾವಿಸಿ, ಬೈಕ್ ಸವಾರನನ್ನು ಹಿಡಿದುಕೊಂಡು, ಕೆಟಿಜೆ ನಗರ ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇಡೀ ಘಟನೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿವೆ.
ಹಲ್ಲೆಯಿಂದ ಗಾಯಗೊಂಡಿರುವ ಪೇದೆ ಅರಸು, ಎಎಸ್‍ಐ ಅಂಜಿನಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಗಾಯಾಳು ಅರಸು ತಲೆಗೆ 5 ಹೊಲಿಗೆ ಬಿದ್ದಿವೆ. ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್ ಹಾಗೂ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದರು.
ಪೊಲೀಸ್ ಪೇದೆ, ಸಹಾಯಕ ಸಬ್ ಇನ್ಸಪೆಕ್ಟರ್ ಮೇಲೆ ತೀವ್ರ ಹಲ್ಲೆ ನಡೆಸಿದ ಬೈಕ್ ಸವಾರ ಕೆ.ಎಚ್.ರುದ್ರಪ್ಪನ ಮೇಲೆ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಹಿನ್ನೆಲೆಯಲ್ಲಿ ಐಪಿಸಿ 353, 333ರಡಿ ಕೇಸು ದಾಖಲಾಗಿರುವ ಸಾಧ್ಯತೆ ಇದೆ. ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ