ಬೆಂಗಳೂರು
ರಾಜ್ಯ ಹಾಗೂ ದೇಶದ ಗಮನ ಸೆಳೆದಿರುವ ಆಪರೇಷನ್ ಕಮಲ ಸಿ.ಡಿ. ಇದೀಗ ವಿಧಾನಮಂಡಲದಲ್ಲಿ ಭಾರೀ ಚರ್ಚೆ, ಆರೋಪ, ಪ್ರತ್ಯಾರೋಪ, ಕೋಲಾಹಲಕ್ಕೆ ವೇದಿಕೆ ಸೃಷ್ಟಿಯಾಗಿದ್ದು, ಇದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ನಡುವೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಇದು ವಿಧಾನಮಂಡಲವಷ್ಟೇ ಅಲ್ಲದೇ ಸಂಸತ್ತಿನಲ್ಲೂ ಪ್ರತಿಧ್ವನಿಸಲಿದ್ದು, ಏಕ ಕಾಲಕ್ಕೆ ಎರಡೂ ಕಡೆಗಳಲ್ಲಿ ಭಾರೀ ಗದ್ದಲಕ್ಕೆ ನಾಂದಿಯಾಗುವ ನಿರೀಕ್ಷೆಯಿದೆ. ಬಹುಶಃ ಒಂದೇ ದಿನ ವಿಧಾನಮಂಡಲ ಮತ್ತು ಸಂಸತ್ತಿನಲ್ಲಿ ಈ ಘಟನೆ ಮಾರ್ದನಿಸುತ್ತಿರುವುದು ವಿಶೇಷವಾಗಿದೆ.
ಇಡೀ ದೇಶ ಆಡಿಯೋ ಸಿಡಿ ಬಗ್ಗೆ ಸದನದಲ್ಲಿ ಯಾವ ರೀತಿ ಚರ್ಚೆ ನಡೆಯಬಹುದು. ಈ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಅಥವಾ ಪ್ರತಿಪಕ್ಷ ನಾಯಕರ ತಲೆದಂಡವಾಗಲಿದೆಯೇ?. ರಾಜಕೀಯ ನಿವೃತ್ತಿ ಪಡೆಯುವವರು ಯಾರು ಎನ್ನುವ ಎನ್ನುವ ಚರ್ಚೆ ನಡೆಯಲಿದೆ. ಸವಾಲು. ಪ್ರತಿ ಸವಾಲುಗಳು ತೀವ್ರಗೊಳ್ಳಲಿದೆ. ಈ ಪ್ರಕರಣ ಸದನದಲ್ಲಿ ನಾಳೆ ತಾರ್ಕಿಕ ಅಂತ್ಯ ಕಾಣಲಿದೆಯೆ ಎನ್ನುವ ಕುತೂಹಲ ಸಹ ಕೆರಳಿಸಿದೆ.
ಆಡಿಯೋ ಸಿಡಿಯಲ್ಲಿ ತಮ್ಮ ಧ್ವನಿ ಇರುವುದನ್ನು ಸಾಬೀತುಪಡಿಸಿದರೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದರೆ, ಇದಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಸಹ ಪ್ರತಿ ಸವಾಲು ಹಾಕಿ ಈ ಸಿಡಿಯಲ್ಲಿ ಇರುವುದು ತಮ್ಮ ಧ್ವನಿ ಅಲ್ಲ ಎಂದು ಸಾಬೀತುಪಡಿಸಿದರೆ ತಾವೂ ಸಹ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಸದನಲ್ಲಿ ಈ ಇಬ್ಬರೂ ನಾಯಕರು ಏನು ಹೇಳುತ್ತಾರೆ ಎನ್ನುವುದು ಇದೀಗ ರಾಜಕೀಯದ ಕೇಂದ್ರ ಬಿಂದುವಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯಲ್ಲಿ ಐಐಟಿ, ಐಐಐಟಿ ನಿರ್ಮಾಣಕ್ಕೆ ಚಾಲನೆ ನೀಡಿ ಮೈತ್ರಿ ಸರ್ಕಾರದ ವಿರುದ್ಧ ರಾಜಕೀಯವಾಗಿ ವಾಗ್ದಾಳಿ ನಡೆಸಿದ ಮರು ದಿನ ಸಂಸತ್ತು ಮತ್ತು ಶಾಸನ ಸಭೆಗಳಲ್ಲಿ ರಾಜ್ಯ ರಾಜಕೀಯದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವುದು ವಿಶೇಷವಾಗಿದೆ.
ಈ ಬೆಳವಣಿಗೆ ಮೇಲ್ನೋಟಕ್ಕೆ ಬಿಜೆಪಿಯ ಜಂಘಾವಲವನ್ನು ಸ್ವಲ್ಪ ಮಟ್ಟಿಗೆ ಉಡುಗಿಸಿದ್ದರೆ, ಜೆಡಿಎಸ್ ಪಾಳಯದಲ್ಲೂ ಕಳವಳ ವ್ಯಕ್ತವಾಗಿದೆ. ಆದರೆ ಕಾಂಗ್ರೆಸ್ ವಲಯದಲ್ಲಿ ಉತ್ಸಾಹ ಪುಟಿದೆದ್ದಿದೆ.
ಈ ಪ್ರಕರಣವನ್ನು ಕಾಂಗ್ರೆಸ್ ಭಾರೀ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ದೆಹಲಿ ಮಟ್ಟದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡಲು ಸಜ್ಜಾಗಿದೆ. ಈ ಪ್ರಕರಣದ ದೆಹಲಿಯಲ್ಲಿ ಕಾಂಗ್ರೆಸ್ ಚಿಂತಕರ ಚಾವಡಿಯಲ್ಲಿ ವ್ಯಾಪಕ ಚರ್ಚೆ ನಡೆಸಲಾಗಿದೆ. ಕಾನೂನು ಪಂಡಿತರು ಪ್ರಕರಣದ ಎಲ್ಲಾ ಮಗ್ಗುಲುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೀಗಾಗಿ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಈ ಪ್ರಕರಣ ಭಾರೀ ಪ್ರಕರಣ ಭಾರೀ ಸದ್ದು ಮಾಡಲಿದೆ.
ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು, ಇದು ವಿಧಾನಪರಿಷತ್ತಿನಲ್ಲೂ ಭಾರೀ ಸದ್ದು ಮಾಡುವುದನ್ನು ತಳ್ಳಿ ಹಾಕುವಂತಿಲ್ಲ.