ಔರಾದ್ ಕರ್ ವರದಿ ಜಾರಿ: ಸಿ ಎಂ ಜೊತೆ ಚರ್ಚೆ : ಬೊಮ್ಮಾಯಿ

ಬೆಂಗಳೂರು

     ಪೊಲೀಸ್ ಸಿಬ್ಬಂದಿಗೆ ವೇತನ ಪರಿಷ್ಕರಣೆ ಮಾಡುವ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್‍ಕರ್ ನೇತೃತ್ವದ ಸಮಿತಿ ವರದಿ ಜಾರಿ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜಬೊಮ್ಮಾಯಿ ಅವರು ಇಂದಿಲ್ಲಿ ತಿಳಿಸಿದರು.

     ಬೆಳಗಾವಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಗರಕ್ಕೆ ವಾಪಸ್ಸಾದ ಕೂಡಲೇ ಔರಾದ್‍ಕರ್ ಸಮಿತಿ ವರದಿಯನ್ನು ಜಾರಿಗೊಳಿಸುವ ಸಂಬಂಧ ಚರ್ಚಿಸಲಾಗುವುದು ಎಂದು ಅವರು ವಿಕಾಸಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ವೇತನ ಆಯೋಗದ ಶಿಫಾರಸ್ಸುಗಳು ಮತ್ತು ಔರಾದ್‍ಕರ್ ಸಮಿತಿ ವರದಿ ಜಾರಿ ವಿಚಾರದಲ್ಲಿ ಉಂಟಾಗಿದ್ದ ಗೊಂದಲಗಳನ್ನು ಪರಿಹರಿಸುವ ಸಂಬಂಧ ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ.

     ಪೊಲೀಸ್ ಸಿಬ್ಬಂದಿ ವೇತನ ಪರಿಷ್ಕರಣೆಗೆ ಹಣಕಾಸು ಇಲಾಖೆ ಸಹ ಒಪ್ಪಿಗೆ ನೀಡಿದೆ. ಪೂರ್ವಾನ್ವಯವಾಗುವಂತೆ ಅನುಷ್ಠಾನಕ್ಕೆ ತರಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದರು. ಔರಾದ್‍ಕರ್ ಸಮಿತಿ ವರದಿ ಅನುಷ್ಠಾನ ಸಂಬಂಧ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಿ ಈ ಎಲ್ಲ ಸೌಲಭ್ಯಗಳು ಸಿಬ್ಬಂದಿಗೆ ದೊರಕುವಂತೆ ಮಾಡಲಾಗುವುದು ಎಂದರು.

    ಕೇಂದ್ರದಿಂದ ಶೀಘ್ರ ಪರಿಹಾರ ನೆರೆ ಪೀಡಿತ ರಾಜ್ಯದ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರದಿಂದ ಹೆಚ್ಚಿನ ಆರ್ಥಿಕ ನೆರವು ಇನ್ನೊಂದು ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೇಂದ್ರದಿಂದ ಪರಿಹಾರ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿ ತಿರಸ್ಕಾರವಾಗಿದೆ ಎಂಬ ಅಭಿಪ್ರಾಯ ಸರಿಯಲ್ಲ ಕೆಲವು ಸ್ಪಷ್ಟೀಕರಣಗಳನ್ನು ಕೇಂದ್ರ ಸರ್ಕಾರ ಕೇಳಿದೆ ಇದೊಂದು ಸಹಜ ಪ್ರಕ್ರಿಯೆ.

     ಕೇಂದ್ರ ಸರ್ಕಾರ ಕೇಳಿರುವ ಮಾಹಿತಿಯನ್ನು ನಮ್ಮ ಅಧಿಕಾರಿಗಳು ಒದಗಿಸಲಿದ್ದಾರೆ ಎಂದರು. ಯಾವುದೇ ರಾಜ್ಯದಲ್ಲಿ ಪ್ರವಾಹ ಉಂಟಾದಾಗ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಜವಾಬ್ದಾರಿ ಆಯಾ ಸರ್ಕಾರಕ್ಕಿರುತ್ತದೆ. ಅದರಂತೆ ಈಗಾಗಲೇ ನಾವು ಕಾರ್ಯೋನ್ಮುಖರಾಗಿದ್ದೇವೆ. ನೆರೆ ಸಂತ್ರಸ್ತ ಕುಟುಂಬಗಳಿಗೆ ತಲಾ 10ಸಾವಿರ ರೂ.ಗಳಂತೆ ಪರಿಹಾರ ಒದಗಿಸಲಾಗಿದೆ.

     ಮನೆ ಕಳೆದುಕೊಂಡವರಿಗೆ ಹೊಸದಾಗಿ ಕಟ್ಟಿಕೊಳ್ಳಲು 5 ಲಕ್ಷ ರೂ. ಬಿಡುಗಡೆ ಮಾಡಲಾಗುತ್ತಿದೆ. ಯಾವುದೇ ಜಿಲ್ಲೆಯಲ್ಲೂ ಪರಿಹಾರ ಕಾರ್ಯ ನಿಂತಿಲ್ಲ. ಕೇಂದ್ರದಿಂದ ಪರಿಹಾರ ಬಂದರೆ ಪರಿಹಾರ ಕಾರ್ಯಗಳ ವೇಗ ಹೆಚ್ಚಾಗಲಿದೆ ಎಂದರು. ಕಳೆದ ವರ್ಷವೂ ಒಂದೂವರೆ ತಿಂಗಳ ನಂತರ ಕೇಂದ್ರದಿಂದ ಪರಿಹಾರ ಬಿಡುಗಡೆಯಾಗಿತ್ತು ಎಂದ ಅವರು, ಪ್ರವಾಹ ಉಂಟಾದಾಗ ಕೇಂದ್ರದ ನೆರವು ಕೋರಿ ಮನವಿ ಸಲ್ಲಿಸುವುದು ರಾಜ್ಯ ಸರ್ಕರಾದ ಧರ್ಮ.

     ಅದರಂತೆ ನಾವು ಕೇಂದ್ರಕ್ಕೆ ವರದಿ ಸಲ್ಲಿಸಿದ್ದೇವೆ ಎಂದರು. ಪರಿಹಾರ ಬಿಡುಗಡೆ ಸಂಬಂಧ ಪಕ್ಷದ ಮುಖಂಡರಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಅವರ ಗಮನ ಸೆಳೆದಾಗ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ. ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. ಅದನ್ನೇ ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap