ಬಳ್ಳಾರಿ :
ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ನ ಶಂಕಿತ 2 ಪ್ರಕರಣಗಳು ಪತ್ತೆಯಾಗಿವೆ.
ಹೊಸಪೇಟೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು, ದುಬೈನಿಂದ ಬಂದ ವ್ಯಕ್ತಿಯಲ್ಲಿ ವೈರಸ್ ಲಕ್ಷಣಗಳು ಪತ್ತೆಯಾಗಿವೆ. ಕೊರೊನಾ ರೋಗದ ಕೆಲವು ಗುಣ ಲಕ್ಷಣಗಳು ಕಂಡು ಬಂದಿರುವುದರಿಂದ ಆತನಿಗೆ ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ದೃಢಪಡಿಸಿಕೊಳ್ಳಲು ಪರೀಕ್ಷೆ ಮಾಡಲು ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.
ಮತ್ತೊಂದು ಪ್ರಕರಣ ತೋರಣಗಲ್ಲಿನ ಜಿಂದಾಲ್ ಪ್ರದೇಶದಲ್ಲಿ ವರದಿಯಾಗಿದ್ದು ಇದನ್ನು ಇಂದು ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ನಕುಲ್ ಸುದ್ದಿಗಾರರ ಜತೆ ಮಾತನಾಡಿ, ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಹೊರಗಿನಿಂದ ಬಂದ ವ್ಯಕ್ತಿಗಳಿಗೆ ಸೋಂಕು ಇರಬಹುದು ಎಂಬ ಶಂಕೆ ಮೇರೆಗೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ.
ನಮ್ಮಲ್ಲಿನ ಜನರಲ್ಲಿ ಕರೋನಾ ಲಕ್ಷಣಗಳು ಕಂಡುಬಂದಿಲ್ಲ. ಜನರು ಯಾವುದೇ ಕಾರಣಕ್ಕೆ ಈ ಕುರಿತು ವದಂತಿ ಸುದ್ದಿಗಳಿಗೆ ಕಿವಿಗಿಡಬೇಡಿ. ಇಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಇಂದು ಎರಡು ಪ್ರಕರಣಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
