ಕುಣಿಗಲ್
ಆಟೋ ರಿಕ್ಷಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಒಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಉರ್ಕಿಹಳ್ಳಿ ರಾಷ್ಟ್ರೀಯ ಹೆದ್ದಾರಿ-75ರ ಬೈಪಾಸ್ ಹೇರೂರು ಗೇಟ್ ಬಳಿ ಆಟೋಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಮೃತರು ನಾಗಮಂಗಲ ತಾಲ್ಲೂಕಿನ ಕಾಡೇನಹಳ್ಳಿ ನಾರಾಯಣ(40), ಪತ್ನಿ ಪದ್ಮ(35) ಸ್ಥಳದಲ್ಲೇ ಮೃತಪಟ್ಟು, ಮಗ ಸಿದ್ದಾರ್ಥ ತೀವ್ರ ತರಹದ ಗಾಯಗೊಂಡು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಕಾರಿನಲ್ಲಿದ್ದ ವೈದ್ಯರಾದ ಡಾ ಭವ್ಯ, ಆಕೆಯ ತಮ್ಮ ಇಂಜಿನಿಯರ್ ಅರಸೀಕೆರೆಯಿಂದ ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ಹೋಗುವಾಗ ಈ ಅವಘಡ ಸಂಭವಿಸಲಾಗಿದೆ ಎನ್ನಲಾಗಿದೆ.
ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಪಕ್ಕದ ಸರ್ವಿಸ್ ರಸ್ತೆಗೆ ಆಟೋ ಮತ್ತು ಕಾರು ಉರುಳಿ ಬಿದ್ದಿವೆ. ಆಟೋ ಮತ್ತು ಕಾರು ಸಂಪೂರ್ಣವಾಗಿ ಜಜ್ಜಿಹೋಗಿದ್ದು, ಕಾರಿನಲ್ಲಿದ್ದ ಇಬ್ಬರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್‍ಪಿ ರಾಮಲಿಂಗೇಗೌಡ ಭೇಟಿ ನೀಡಿದರು. ಕುಣಿಗಲ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.