ಬೆಂಗಳೂರು
ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ತ್ವರಿತ ಬೆಳವಣಿಗೆಗೆ ಹೊಸ ಐಟಿ ನೀತಿ ಜಾರಿ, ನೂತನ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲು ಹೊಸದಾಗಿ ಆವಿಷ್ಕಾರ ಪ್ರಾಧಿಕಾರ ಸ್ಥಾಪನೆ, ನವೋದ್ಯಮಗಳಿಗೆ ಹೆಚ್ಚಿನ ಸೌಲಭ್ಯ ನೀಡಲು ವಿಷನ್ ಗ್ರೂಪ್ ಸ್ಥಾಪನೆಯಂತಹ ಮಹತ್ವದ ನಿರ್ಧಾರಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದರು.
ನಗರದ ಖಾಸಗಿ ಪಂಚತಾರಾ ಹೋಟೆಲ್ ತಾಜ್‍ವೆಸ್ಟೆಂಡ್‍ನಲ್ಲಿಂದು ಐಟಿ ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೊಡ್ಡ ಬಂಡವಾಳ ಆಕರ್ಷಿಸುವ ಮತ್ತು ಹೆಚ್ಚು ಉದ್ಯೋಗ ಸೃಷ್ಠಿಗೆ ಒತ್ತು ನೀಡುವ ಪರಿಷ್ಕೃತ ನೂತನ ಮಾಹಿತಿ ತಂತ್ರಜ್ಞಾನ ನೀತಿಯನ್ನು ಸದ್ಯದಲ್ಲೇ ಜಾರಿಗೊಳಿಸಲಾಗುವುದು ಎಂದರು.
ರಾಜ್ಯದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರಗಳಲ್ಲಿ ಐಟಿ- ಬಿಟಿ ಉದ್ಯಮಗಳ ಆರಂಭಕ್ಕೆ ಅಗತ್ಯವಾದ ವಾತಾವರಣವನ್ನು ಸೃಷ್ಠಿಸಲಾಗಿದೆ. ಈ ನಗರಗಳಲ್ಲಿ ಐಟಿ-ಬಿಟಿ ಉದ್ಯಮಿಗಳ ಸ್ಥಾಪನೆಗೆ ಈ ಹೊಸ ಪರಿಷ್ಕೃತ ನೀತಿಯನ್ನು ಹೆಚ್ಚು ಒತ್ತು ನೀಡಲಾಗುವುದು ಎಂದು ಅವರು ಹೇಳಿದರು. ರಾಜ್ಯ ಸರ್ಕಾರ ಕ್ಷಿಪ್ರ, ತ್ವರಿತ ಮತ್ತು ಸಮಗ್ರ ಕೈಗಾರಿಕಾ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದು, ಈ ಗುರಿ ಸಾಧನೆಗೆ ಐಟಿ ವಲಯದ ಮಹತ್ವವನ್ನು ಗುರುತಿಸಿದ್ದೇವೆ. ಹಾಗಾಗಿ ಗುರಿ ಸಾಧನೆಗಾಗಿ ಹೊಸ ಪರಿಷ್ಕೃತ ಐಟಿ ನೀತಿಯನ್ನು ಮುಂದಿನ ದಿನಗಳಲ್ಲಿ ಜಾರಿ ಮಾಡುತ್ತೇವೆ ಎಂದರು.
ಇತ್ತೀಚಿನ ತಂತ್ರಜ್ಞಾನಗಳಿಗೆ ಬೆಂಬಲ ಮತ್ತು ಉತ್ತೇಜನ ನೀಡಲು ತಮ್ಮ ಅಧ್ಯಕ್ಷತೆಯಲ್ಲಿ ಕರ್ನಾಟಕ ಆವಿಷ್ಕಾರ ಪ್ರಾಧಿಕಾರವನ್ನು ರಚಿಸುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿದ ಅವರು, ಈ ಪ್ರಾಧಿಕಾರಕ್ಕೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್‍ನಾರಾಯಣ ಸಹ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದರು. ನವೋದ್ಯಮಗಳಿಗೆ ಹೆಚ್ಚು ಉತ್ತೇಜನ ನೀಡಲು ನವೋದ್ಯಮ ವಿಷನ್ ಗ್ರೂಪ್ ಸ್ಥಾಪಿಸುವುದಾಗಿಯೂ ಅವರು ಹೇಳಿದರು. ಈ ನವೋದ್ಯಮ ವಿಷನ್ ಗ್ರೂಪ್ ಸ್ಥಾಪನೆ ಮೂಲಕ ನವೋದ್ಯಮಗಳ ಬೆಳವಣಿಗೆಗೆ ಅಗತ್ಯವಾದ ಪೂರಕ ವಾತಾವರಣ ಸೃಷ್ಠಿಸಿ ಉದ್ಯಮಿಗಳನ್ನು ಬಳಸಿಕೊಂಡು ನವೋದ್ಯಮಗಳನ್ನು ಬಲಪಡಿಸುವ ಚಿಂತನೆ ಇದೆ ಎಂದು ಅವರು ಹೇಳಿದರು.
ರಾಜ್ಯವನ್ನು ಕೈಗಾರಿಕೆಯಲ್ಲಿ ಮುನ್ನಡೆಸಲು .ಅಗತ್ಯ ಸಲಹೆ- ಸೂಚನೆಗಳನ್ನು ನೀಡುವಂತೆ ಉದ್ಯಮಿಗಳಿಗೆ ಮನವಿ ಮಾಡಿದ ಅವರು, ಉದ್ಯಮಿಗಳ ಸಲಹೆ ಸೂಚನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನೀತಿ ನಿರೂಪಣೆಯ ಅನುಷ್ಠಾನದ ಜತೆ ಅವುಗಳನ್ನು ಅಳವಡಿಸುವ ಭರವಸೆಯನ್ನು ಅವರು ನೀಡಿದರು.
ಕರ್ನಾಟಕ ದೇಶದಲ್ಲೇ ಅತ್ಯಂತ ಪ್ರಗತಿಪರ ರಾಜ್ಯವಾಗಿದ್ದು, 230 ಬಿಲಿಯನ್ ಡಾಲರ್ ಬಿಎಸ್‍ಡಿಪಿ ಯನ್ನು ಹೊಂದಿದೆ. ಐಟಿ-ಬಿಟಿ, ಆಟೋ ಮೊಬೈಲ್, ಆಗ್ರೋ, ಏರೋಸ್ಪೈಸ್, ಜವಳಿ, ಗಾರ್ಮೆಂಟ್ಸ್ ಮತ್ತು ಭಾರೀ ಇಂಜಿನಿಯರಿಂಗ್ ಕೈಗಾರಿಕಾ ವಲಯಗಳಲ್ಲೂ ಹೊಂದುವ ಮೂಲಕ ದೇಶದಲ್ಲೇ ಕೈಗಾರಿಕಾ ಅಭಿವೃದ್ಧಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಬಂಡವಾಳ ಹೂಡಿಕೆಯಲ್ಲೂ ದೇಶದಲ್ಲೇ ಮಹಾರಾಷ್ಟ್ರ, ನವದೆಹಲಿ ನಂತರ 3ನೇ ಸ್ಥಾನ ಪಡೆದಿದೆ. 2000 ರಿಂದ 2018 ರವರೆಗೆ ಕರ್ನಾಟಕದಲ್ಲಿ 35.69 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯಾಗಿದೆ ಎಂದು ಅವರು ಹೇಳಿದರು.
ಐಟಿ-ಬಿಟಿ, ಆಹಾರ ಸಂಸ್ಕರಣ, ಏರೋಸ್ಪೈಸ್ ಸೇರಿದಂತೆ ಹಲವು ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸಲಾಗಿದೆ ಎಂದ ಅವರು, ತಂತ್ರಜ್ಞಾನ ಬೆಳವಣಿಗೆ ಮತ್ತು ಆವಿಷ್ಕಾರಕ್ಕೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಕರ್ನಾಟಕ ಜಾಗತಿಕ ಮಟ್ಟದಲ್ಲಿ ಬಂಡವಾಳ ಹೂಡಿಕೆಗೆ ಪ್ರಶಸ್ತ ಸ್ಥಾನ ಎಂಬ ಗರಿಮೆಯನ್ನು ಹೊಂದಿದೆ.
ಈ ಹಿರಿಮೆ-ಗರಿಮೆಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ಕೈಗಾರಿಕಾ ಸ್ನೇಹಿ, ಬಂಡವಾಳ ಹೂಡಿಕೆದಾರರ ಸ್ನೇಹಿ ನೀತಿಗಳನ್ನು ಜಾರಿಗೊಳಿಸಲಾಗಿದೆ. ಬಂಡವಾಳ ಹೂಡಿಕೆದಾರರಿಗೆ ಏಕಗವಾಕ್ಷಿಯ ಮೂಲಕ ಎಲ್ಲ ನೆರವು, ಬೆಂಬಲವನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಅವರು ಹೇಳಿದರು. ಐಟಿ-ಬಿಟಿ ಉದ್ಯಮಿಗಳಿಗೆ ಅಗತ್ಯವಾದ ರಿಯಾಯ್ತಿ, ಉತ್ತೇಜನವನ್ನು ನೀಡುತ್ತಿದ್ದೇವೆ. ಐಟಿ ಪಾರ್ಕ್‍ಗಳ ಸ್ಥಾಪನೆಗೂ ಗಮನ ಹರಿಸಲಾಗಿದೆ.
ಸ್ಟಾಂಪ್ ಡ್ಯೂಟಿಯಲ್ಲೂ ಐಟಿ ಉದ್ಯಮಿಗಳಿಗೆ ರಿಯಾಯ್ತಿ ನೀಡಿದ್ದೇವೆ. ಜತೆಗೆ ಮಾರುಕಟ್ಟೆ ಬೆಂಬಲ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಬಿಎಸ್‍ಡಿಪಿ ದರದ ಬೆಳವಣಿಗೆಗೆ ಪೂರಕವಾಗಿ ರಫ್ತನ್ನು ಹೆಚ್ಚು ಮಾಡಲು ಹೆಚ್ಚು ಬಂಡವಾಳವನ್ನು ಆಕರ್ಷಿಸುವ ಕೆಲಸ ನಡೆದಿದೆ ಎಂದು ಅವರು ಹೇಳಿದರು. ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಂದ ವಿದೇಶಿ ನೇರ ಬಂಡವಾಳ ಹೂಡಿಕೆಯೂ ರಾಜ್ಯಕ್ಕೆ ಹರಿದು ಬರುತ್ತಿದೆ ಎಂದರು.
ಐಟಿ ವಲಯಕ್ಕೆ ಅಗತ್ಯವಾದ ವಾತಾವರಣವನ್ನು ಸೃಷ್ಠಿಸಲು ಐಟಿ-ಬಿಟಿ ಉದ್ಯಮಿಗಳ ದಿಗ್ಗಜ್ಜರನ್ನು ಒಳಗೊಂಡ ವಿಷನ್ ಗ್ರೂಪ್‍ನ್ನು ಸರ್ಕಾರ ಸ್ಥಾಪಿಸಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಐಟಿ ಬೆಳವಣಿಗೆಗೆ ಎಲ್ಲ ಉತ್ತೇಜನವನ್ನು ಸರ್ಕಾರ ನೀಡುವುದಕ್ಕೆ ಬದ್ಧವಾಗಿದೆ ಎಂದು ಅವರು ಹೇಳಿದರು. ನೆರೆಯಿಂದ ತೊಂದರೆಗೊಳಗಾಗಿರುವ ಸಂತ್ರಸ್ಥರ ಪುನರ್ವಸತಿಗೆ ಉದಾರ ನೆರವು ನೀಡುವಂತೆಯೂ ಅವರು ಐಟಿ-ಬಿಟಿ ಉದ್ಯಮಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್‍ನಾರಾಯಣ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸೇರಿದಂತೆ ಐಟಿ-ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಐಟಿ-ಬಿಟಿ ಉದ್ಯಮಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
