ಗಮನಸೆಳೆದ ಮನರಂಜನೆ ಮೂಲಕ ಮತದಾನ ಜಾಗೃತಿ

ಬಳ್ಳಾರಿ

       ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೇ ಅತ್ಯಂತ ವಿವೇಚನಾಯುಕ್ತವಾಗಿ ಯೋಗ್ಯ ವ್ಯಕ್ತಿಗೆ ತಪ್ಪದೇ ಮತಚಲಾಯಿಸಬೇಕು ಎಂದು ಸ್ವೀಟ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ನಿತೀಶ್ ಹೇಳಿದರು.ಲೋಕಸಭಾ ಚುನಾವಣೆ-2019ರ ಹಿನ್ನೆಲೆ ಮತದಾನ ಜಾಗೃತಿ ಮೂಡಿಸಲು ಸ್ವೀಪ್ ಸಮಿತಿ ವತಿಯಿಂದ ನಗರದ ಎಚ್.ಆರ್.ಗವಿಯಪ್ಪ ವೃತ್ತ(ಮೋತಿ ವೃತ್ತ)ದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

        ಯಾವುದೇ ಕಾರಣಕ್ಕೂ ಸಣ್ಣಪುಟ್ಟ ಆಮಿಷಗಳಿಗೆ ಬಲಿಯಾಗಿ ಮತ ಮಾಡಿಕೊಳ್ಳ ಬೇಡಿ: ಮತ ಮಾರಿಕೊಂಡರೇ ತಮ್ಮನ್ನು ತಾವೇ ಮಾರಿಕೊಂಡಂತೆ ಎಂಬುದನ್ನು ಅರಿತುಕೊಳ್ಳಿ ಎಂದು ಸೂಚ್ಯವಾಗಿ ಹೇಳಿದ ಜಿಪಂ ಸಿಇಒ ನಿತೀಶ್ ಆವರು 18ವರ್ಷದ ತುಂಬಿದ ಎಲ್ಲರು ಕಡ್ಡಾಯವಾಗಿ ಮತಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸಿ ಎಂದರು.

          ತಾವು ಮತಚಲಾಯಿಸಿ ಮತ್ತು ತಮ್ಮ ಸುತ್ತಮುತ್ತಲಿನವರಿಗೂ ಮತಚಲಾಯಿಸಲು ಪ್ರೇರೆಪಿಸಿ, ಪ್ರಜಾಪ್ರಭುತ್ವದ ಹಬ್ಬ ಎಂದೆ ಪರಿಗಣಿತವಾದ ಏ.23ರಂದು ಮತದಾನದ ಜಾತ್ರೆ ನಡೆಯಲಿದ್ದು, ಎಲ್ಲರು ಸಂಭ್ರಮದಿಂದ ಭಾಗವಹಿಸಿ ಎಂದರು.ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ತುಣಾರಮಣಿ ಅವರು ಮಾತನಾಡಿ, ಕಡ್ಡಾಯವಾಗಿ ಎಲ್ಲರು ಮತದಾನ ಮಾಡಬೇಕು; ಮತದಾನದ ಗುರುತಿನ ಚೀಟಿ ಇರದಿದ್ದರೂ ಚುನಾವಣಾ ಆಯೋಗ ತಮ್ಮ ಗುರುತಿಗಾಗಿ ಪರಿಗಣಿಸಿರುವ 14 ಐಡಿ ಕಾರ್ಡ್ ಗಳಲ್ಲಿ ಒಂದನ್ನಾದರೂ ತಂದು ಮತದಾನ ಮಾಡಿ ಎಂದರು.

          ಮತದಾನಕ್ಕೆ ಸಂಬಂಧಿಸಿದಂತೆ ಸುತ್ತಮುತ್ತಲಿನವರಿಗೆ ಹಾಗೂ ಸಂಬಂಧಿಕರಿಗೆ ತಿಳಿಹೇಳಿ; ಬಿಸಿಲಿದೆ ಅಂತ ಮನೆಯೊಳಗೆ ಇರಬೇಡಿ, ಮತಗಟ್ಟೆ ಬಳಿ ನೀರು ನೆರಳು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಅವರು ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

           ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಅನೇಕರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link