ಆಯೋಗದ ಮಿತಿಯಲ್ಲಿ ವೆಚ್ಚ ನಿರ್ವಹಿಸಿ-ಕ್ರಿಮಿನಲ್ ಅಪರಾಧವಿದ್ದರೆ ಜಾಹೀರುಪಡಿಸಿ : ಕೃಷ್ಣ ಬಾಜಪೇಯಿ

ಹಾವೇರಿ

       ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚವಾಗಿ 70 ಲಕ್ಷ ರೂ.ಗಳನ್ನು ಭಾರತ ಚುನಾವಣಾ ಆಯೋಗ ನಿಗಧಿಪಡಿಸಿದೆ. ಈ ವೆಚ್ಚದ ನಿರ್ವಹಣೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಿ ಕಾಲಕಾಲಕ್ಕೆ ಆಯೋಗಕ್ಕೆ ಮಾಹಿತಿ ನೀಡುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾಹಿತಿ ನೀಡಿದರು.

        ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೊದಲ ಹಂತದ ಮತಯಂತ್ರ, ವಿವಿಪ್ಯಾಟ್, ಬ್ಯಾಲೆಟ್ ಯುನಿಟ್‍ಗಳ ಯಾದೃಚಿಕರಣ ಕಾರ್ಯವನ್ನು ನಡೆಸಿ ನಾಮಪತ್ರ ಸಲ್ಲಿಕೆ ಕುರಿತಂತೆ ಪಾಲಿಸಬೇಕಾದ ನಿಯಮಾವಳಿಯನ್ನು ವಿವರಿಸಿದರು.
ಚುನಾವಣಾ ವೆಚ್ಚದ ಬಗ್ಗೆ ಎಲ್ಲ ಅಭ್ಯರ್ಥಿಗಳು ತೀವ್ರ ನಿಗಾವಹಿಸಬೇಕು. ಚುನಾವಣಾ ಆಯೋಗ ಈ ಕುರಿತಂತೆ ಗಂಭೀರವಾಗಿ ಪರಿಗಣಿಸಲಿದೆ. ನಾಮಪತ್ರ ಸಲ್ಲಿಕೆ ಮುಂಚಿತವಾಗಿ ಚುನಾವಣಾ ವೆಚ್ಚಕ್ಕಾಗಿಯೇ ಪ್ರತ್ಯೇಕ ಬ್ಯಾಂಕ್ ಅಕೌಂಟ್‍ನ್ನು ತೆರೆಯಬೇಕು ಎಂದು ತಿಳಿಸಿದರು.

         ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಮ್ಮ ಮೇಲೆ ದಾಖಲಾಗಿರುವ ಅಪರಾಧ ಪ್ರಕರಣಗಳ ಕುರಿತಂತೆ ವಿವರವಾಗಿ ನಮೂದಿಸಬೇಕು. ಈ ಪ್ರಕರಣ ಕುರಿತಂತೆ ರಾಜ್ಯ ಮಟ್ಟದ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಕನಿಷ್ಠ ಮೂರುಬಾರಿ ಜಾಹೀರಾತು ರೂಪದಲ್ಲಿ ಪ್ರಕಟಿಸಬೇಕು ಎಂದು ತಿಳಿಸಿದರು.

        ಇದೇ ಮಾರ್ಚ್ 28 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಎಪ್ರಿಲ್ 4ರವರೆಗೆ ನಾಮಪತ್ರ ಸಲ್ಲಿಸಬಹುದು. ನಿಗದಿತ ದಿನಾಂಕದ ಒಳಗೆ ಸಾರ್ವಜನಿಕ ರಜಾ ದಿನ ಹೊರತುಪಡಿಸಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕು ಎಂದು ತಿಳಿಸಿದರು.

        ಭಾರತ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸುವವರು ಈ ಕ್ಷೇತ್ರದ ಓರ್ವ ಸೂಚಕರನ್ನು ಹಾಗೂ ಮಾನ್ಯತೆ ಪಡೆದ ನೋಂದಾಯಿತ ಪಕ್ಷದಿಂದ ಹಾಗೂ ಪಕ್ಷೇತರರಾಗಿ ಸ್ಪರ್ಧಿಸುವ ಅಭ್ಯರ್ಥಿಗಳು 10 ಜನ ಸೂಚಕರ ಬೆಂಬಲದೊಂದಿಗೆ ನಮೂನೆ 2-ಎ ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಸೂಚಕರು ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಾಗಿರಬೇಕು. ಈ ಕುರಿತಂತೆ ದೃಢೀಕರಣ ಪತ್ರ ಸಲ್ಲಿಸಬೇಕು. ಅನುಬಂಧ-1ರಲ್ಲಿ ಆಸ್ತಿಋಣಬಾರ ಸಲ್ಲಿಸಬೇಕು, ನಾಮಪತ್ರ ಸಲ್ಲಿಸುವ ನಮೂನೆ-26ರಲ್ಲಿ ಯಾವುದೇ ಅಂಕಣವನ್ನು ಖಾಲಿ ಬಿಡಬಾರದು ಎಂದು ತಿಳಿಸಿದರು.

         ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಗಳು ಸೇರಿದಂತೆ ಐದು ಜನರಿಗೆ ಮಾತ್ರ ಚುನಾವಣಾ ಅಧಿಕಾರಿಗಳ ಕಚೇರಿಯೊಳಗೆ ಬರಲು ಅವಕಾಶವಿದೆ. ಚುನಾವಣಾಧಿಕಾರಿ ಕಚೇರಿಯ 100 ಮೀಟರ್ ಪತಿಮಿತಿಯೊಳಗೆ ಕೇವಲ ಮೂರು ವಾಹನಗಳನ್ನು ತರಲು ಅವಕಾಶವಿದೆ ಎಂದು ತಿಳಿಸಿದರು.

        ಯಾವುದೇ ಒಬ್ಬ ಅಭ್ಯರ್ಥಿಯು ಗರಿಷ್ಠ ಎರಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾತ್ರ ಅವಕಾಶವಿದೆ. ಅಭ್ಯರ್ಥಿಯು ಕನಿಷ್ಠ 25 ವರ್ಷ ವಯೋಮಿತಿ ಪೂರೈಸಿರಬೇಕು. ಲೋಕಸಭಾ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು ಹಾಗೂ ಭಾರತೀಯ ನಾಗರಿಕನಾಗಿರಬೇಕು ಎಂದು ತಿಳಿಸಿದರು.

        ನಾಮಪತ್ರದೊಂದಿಗೆ ಸಾಮಾನ್ಯ ಅಭ್ಯರ್ಥಿ 25 ಸಾವಿರ ರೂ. ಠೇವಣಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 12,500 ರೂ.ಗಳನ್ನು ನಗದು ರೂಪದಲ್ಲಿ ಪಾವತಿಸಬೇಕಾಗುವುದು. ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ನಿಗದಿತ ನಮೂನೆ 26ರನ್ನು ಮೂರು ಪ್ರತಿಗಳಲ್ಲಿ ಅಫಿಡವಿಟ್ ಸಲ್ಲಿಸಬೇಕು. ಪೈಕಿ ಎರಡು ಸೆಟ್ ಮೂಲ ಪ್ರತಿ, ಒಂದು ಪ್ರತಿ ಝರಾಕ್ಸ್ ಪ್ರತಿ ಒಳಗೊಂಡಿರಬೇಕು ಎಂದು ತಿಳಿಸಿದರು.

         ಚುನಾವಣಾ ವೆಚ್ಚ ನಿರ್ವಹಣೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಬೇಕು. ಭಾಗ –ಎ ರಲ್ಲಿ ದೈನಂದಿನ ಎಲ್ಲಾ ಚುನಾವಣಾ ವೆಚ್ಚಗಗಳು, ಭಾಗ-ಬಿರಲ್ಲಿ ನಗದು ವ್ಯವಹಾರಗಳು, ಭಾಗ-ಸಿ ರಲ್ಲಿ ಬ್ಯಾಂಕ್ ವ್ಯವಹಾರಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಒಬ್ಬ ಅಭ್ಯರ್ಥಿಗೆ 70 ಲಕ್ಷ ರೂ. ವೆಚ್ಚದ ಮಿತಿಯನ್ನು ಭಾರತ ಚುನಾವಣಾ ಆಯೋಗ ನಿಗದಿಪಡಿಸಿದೆ. ರಾಜಕೀಯ ಪಕ್ಷಗಳಿಗೆ ಯಾವುದೇ ಮಿತಿ ಇರುವುದಿಲ್ಲ ಆದರೂ ಪ್ರತ್ಯೇಕ ಲೆಕ್ಕವನ್ನು ನಿರ್ವಹಿಸಬೇಕು.

        20 ಸಾವಿರ ರೂ.ಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡಬಾರದು. ಎಲ್ಲ ವ್ಯವಹಾರಗಳನ್ನೂ ಕಡ್ಡಾಯವಾಗಿ ಚೆಕ್ ನಿಗದಿಪಡಿಸಿದ ಬ್ಯಾಂಕ್ ಅಕೌಂಟ್ ಮೂಲಕವೇ ನಿರ್ವಹಿಸಬೇಕು. ಚುನಾವಣಾ ವೆಚ್ಚ ವೀಕ್ಷಕರಿಗೆ ಕಾಲಕಾಲಕ್ಕೆ ವೆಚ್ಚದ ವಿವರ ಸಲ್ಲಿಸಬೇಕು. ಮತದಾನ ಮುಕ್ತಾಯವಾದ 30 ದಿನದೊಳಗಾಗಿ ನಿಗದಿತ ನಮೂನೆಯಲ್ಲಿ ವೆಚ್ಚದ ವಿವರವನ್ನು ಸಲ್ಲಿಸಬೇಕು. ಯಾವುದೇ ಚುನಾವಣಾ ಸಾಮಗ್ರಿ, ಜಾಹೀರಾತುಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ನಿಗದಿಪಡಿಸಿದ ದರ ಅನ್ವಯಿಸಲಾಗುವುದು. ಭಾರತ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯನ್ನು ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದ ಅಭ್ಯರ್ಥಿಗಳ ಮೇಲೆ ಪ್ರಜಾಪ್ರಾತಿನಿಧಿಕ ಕಾಯ್ದೆ ಅನ್ವಯ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

        ಇದೇ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲಿ ಇ.ವಿ.ಎಂ., ಬ್ಯಾಲೆಟ್ ಯುನಿಟ್ ಹಾಗೂ ವಿವಿಪ್ಯಾಟ್‍ಗಳ ಮೊದಲ ಹಂತದ ರ್ಯಾಂಡಮೈಜೇಶನ್ ಕಾರ್ಯವನ್ನು ನಡೆಸಲಾಯಿತು. ಇಂದು 2141 ಬ್ಯಾಲೆಟ್ ಯುನಿಟ್, 1779 ವಿವಿಪ್ಯಾಟ್‍ಗಳನ್ನು ಯಾದೃಚಿಕರಣಗೊಳಿಸಲಾಯಿತು. ಎರಡನೆಯ ಹಂತದ ರ್ಯಾಂಡಮೈಜೇಶನ್ ವಿಧಾನಸಭಾ ಕ್ಷೇತ್ರವಾರು ಕೇಂದ್ರ ಚುನಾವಣಾ ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ನಡೆಸಲಾಗುವುದು ಎಂದು ವಿವರಿಸಿದರು.

          ಅಪರ ಜಿಲ್ಲಾಧಿಕಾರಿ ಚಂದ್ರಶೇಖರ ಎಚ್. ಅವರು ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಾವಳಿಗಳನ್ನು ವಿವರಿಸಿದರು. ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ರಾಷ್ಟ್ರೀಯ ಮಾಹಿತಿ ಕೇಂದ್ರದ ಅಧಿಕಾರಿ ಹೆಗಡೆ ಹಾಗೂ ವಿವಿಧ ರಾಜಕೀಯ ಪಕ್ಷದ ಪದಾಧಿಕಾರಿಗಳಾದ ರುದ್ರಪ್ಪ, ಶಂಕ್ರಪ್ಪ ದೇಸಾಯಿ, ಅಶೋಕ ಮಾರಣ್ಣನವರ, ಶಿವಕುಮಾರ ಟಿ., ಬಸವರಾಜ ದೇಸಾಯಿ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link