ಬೆಂಗಳೂರು
ಗುತ್ತಿಗೆ ಆಯುಷ್ ವೈದ್ಯರುಗಳ ವೇತನ ತಾರತಮ್ಯ,ಸೇವಾ ಭದ್ರತೆ ಹಾಗೂ ಇತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ನಿರ್ಲಕ್ಷ್ಯವಹಿಸಿದ ಸರ್ಕಾರಕ್ಕೆ ಆಯಷ್ ವೈದ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ರಾಜ್ಯದ 2000 ಗುತ್ತಿಗೆ ವೈದ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದು,ಆಯುಷ್ ವೈದ್ಯರನ್ನು ಬೆಂಬಲಿಸಿ 27000 ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ ಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದಾರೆ.ಅಲ್ಲದೆ ಆಯುಷ್ ವೈದ್ಯಕೀಯ ವಿದ್ಯಾರ್ಥಿಗಳು,ಆಯುಷ್ ಫೆಡರೇಷನ್ ಆಫ್ ಇಂಡಿಯಾ ಸಹ ವೈದ್ಯರ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಜುಲೈ 5ರಿಂದಲೇ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕಿಳಿದಿದ್ದ ಆಯುಷ್ ವೈದ್ಯರು ಸರ್ಕಾರಕ್ಕೆ 7 ಗಡವು ನೀಡಿದ್ದರು.ಜುಲೈ 14ರ ಸಂಜೆಯವರೆಗೂ ಸರ್ಕಾರ ಬೇಡಿಕೆ ಈಡೇರಿಸಿದಿದ್ದಲ್ಲಿ ರಾಜೀನಾಮೆ ನೀಡು ವುದಾಗಿ ಎಚ್ಚರಿಕೆ ನೀಡಿದ್ದರು.ನಿನ್ನೆ ಸಂಜೆಯವರೆಗೂ ಸರ್ಕಾರದಿಂದ ಯಾವುದೇ ಆದೇಶ,ಸಂದೇಶ ಹೊರಬೀಳದ ಹಿನ್ನಲೆಯಲ್ಲಿ ಎಲ್ಲಾ 2000 ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ಆಯುಷ್ ವೈದ್ಯರು ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಫ್ರೆಂಟ್ ಲೈನ್ ವಾರಿಯರ್ ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಫಿವರ್ ಕ್ಲಿನಿಕ್ ನಿಂದ ಪ್ರಾರಂಭವಾಗಿ ಆ?ಯಂಬುಲೆನ್ಸ್ ಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು,ಕೋವಿಡ್ ಸೆಂಟರ್ ಗಳಲ್ಲಿ ಆಯಷ್ ವೈದ್ಯರು ಕಳೆದ 4 ತಿಂಗಳಿಂದ ವಿಶ್ರಾಂತಿಯಿಲ್ಲದೆ ಹಗಲಿರುಳು ದುಡಿಯುತ್ತಿದ್ದಾರೆ.ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಆಯುಷ್ ವೈದ್ಯರಲ್ಲಿ 20ಕ್ಕೂ ಹೆಚ್ಚು ವೈದ್ಯರಿಗೆ ಕೊರೋನಾ ಸೋಂಕು ತಗುಲಿದೆ. ಒಂದೆಡೆ ವೇತನವಿಲ್ಲ ಮತ್ತೊಂದೆಡೆ ಉದ್ಯೋಗ ಭದ್ರತೆಯಿಲ್ಲ.ನಮಗೆ ವಿಮಾ ಸೌಲಭ್ಯವನ್ನು ಸರ್ಕಾಕ ಕಲ್ಪಿಸದೆ ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ತಮ್ಮಅಳಲನ್ನು ತೋಡಿಕೊಂಡಿದ್ದಾರೆ.
ಆಯುಷ್ ವೈದ್ಯರ ನಿರಂತರ ಹೋರಾಟ ಮತ್ತು ಬೇಡಿಕೆಗಳು :
ಆಯುಷ್ ವೈದ್ಯರಿಗೆ ಇತರೆ ಹೊಮಿಯೋಪತಿಕ್ ವೈದ್ಯರಂತೆ ವೇತನ,ಸೇವಾ ಭದ್ರತೆ ಕಲ್ಪಿಸುವುದಾಗಿ ಮೇ 26 ರಂದು ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿಲಾಗಿತ್ತು.ಸರ್ಕಾರದ ಭರವಸೆ ನೀಡಿ ಎರಡು ತಿಂಗಳು ಕಳೆದರೂ ಕೊಟ್ಟ ಭರವಸೆ ಈಡೇರಿಸುವ ಗೋಜಿಗೆ ಸಚಿವರು,ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.ಹೀಗಾಗಿ ಅನಿವಾರ್ಯಾವಾಗಿ ಜು.5ರಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಆಯುಷ್ ವೈದ್ಯರು ಹಾಜರಾಗುವ ಮೂಲಕ ಸರ್ಕಾರ ಕ್ಕೆ ಎಚ್ಚರಿಕೆ ನೀಡಿದ್ದರು.
ಬೇಡಿಕೆ ಈಡೇರಿಸುವಂತೆ ಆರೋಗ್ಯ ಸಚಿವರು ಮತ್ತು ಮುಖ್ಯಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದ್ದ ವೈದ್ಯರು ಜುಲೈ 14 ರ ಸಂಜೆಯವರೆಗೂ ತಮ್ಮ ಬೇಡಿಕೆ ಗಳ ಈಡೇರಿಕೆಗೆ ಗಡವು ನೀಡಿದ್ದರು.ತಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಜುಲೈ 15 ರಂದು 2000 ಸಾಮೂಹಿಕ ರಾಜೀನಾಮೆ ನೀಡುವುದಲ್ಲದೆ,ಖಾಸಗಿ ಆಯುಷ್ ವೈದ್ಯರು ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಬಗ್ಗೆ ಯುಎನ್‍ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಆಯುಷ್ ಫೆಡರೇಷನ್ ಇಂಡಿಯಾದ ಮಾಜಿ ಕಾರ್ಯಕಾರಿ ಸದಸ್ಯ ಡಾ. ಆನಂದ್ ಕಿರಿಶ್ಯಾಳ,ಬೇಡಿಕೆ ಈಡೇರಿಸುವಂತೆ ಮೇ 5 ರಂದು 7 ದಿನಗಳ ಕಾಲ ಕಪ್ಪು ಪಟ್ಟಿ ಧರಿಸಿ ಸೇವೆ ಸಲ್ಲಿಸುವ ಮೂಲಕ ಸರ್ಕಾರಕ್ಕೆ ನಮ್ಮ ಆಗ್ರಹಪೂರ್ವಕ ಮನವಿ ಮಾಡಿದ್ದೇವೆ.
ಸರ್ಕಾರ ಸಕಾಲದಲ್ಲಿ ಯಾವುದೇ ತೀರ್ಮಾನ ಪ್ರಕಟಿಸದ ಹಿನ್ನಲೆಯಲ್ಲಿ ಮೇ 12ರಂದು ಸಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದೆವು.ಈ ನಡುವೆ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಮೇ26ರಂದು ನಡೆದ ಸಭೆಯಲ್ಲಿ ಎನ್‍ಆರ್ ಎಚ್‍ಎಂ,ಆರ್ ಬಿಎಸ್ಕೆ, ಹಾಗೂ ಅಲೋಪತಿ ವೈದ್ಯರಿಗೆ ಪರ್ಯಾಯವಾಗಿ ಕೆಲಸ ನಿರ್ವಹಿಸುತ್ತಿರುವ ವೈದ್ಯರಿಗೆ ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆ ಕಲ್ಪಿಸುವುದಾಗಿ ಸಭೆಯಲ್ಲಿ ತೀರ್ಮಾನವಾಗಿತ್ತು.
ಅಂತೆಯೇ ಆಯುಷ್ ವೈದ್ಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹೆಚ್ಚಳ,ಆಯುಷ್ ವೈದ್ಯರು ಆಲೋಪತಿ ಚಿಕಿತ್ಸೆ ನೀಡಲು ಅನುಮತಿಯನ್ನು ವಿಸ್ತರಿಸಬೇಕೆಂಬ ನಮ್ಮ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತ ಕ್ರಮದ ಭರವಸೆಯನ್ನು ಸಚಿವರು ನೀಡಿದ್ದರು.ಆರೋಗ್ಯ ಸಚಿವರ ಭರವಸೆ ಇದುವರೆಗೂ ಈಡೇರಿಲ್ಲ.ಅಲೋಪತಿ ವೈದ್ಯರಿಗೆ ಸಿಗುವ ವೇತನ,ಭತ್ಯೆ ಹಾಗೂ ಸೇವಾ ಖಾಯಮಾತಿಗೆ ಒತ್ತಾಯಿಸಿ ಇಂದು ಸಾಮೂಹಿಕ ರಾಜೀನಾಮೆ ನೀಡಿದ್ದೇವೆ.
ದೇಶದ 11 ರಾಜ್ಯಗಳಲ್ಲಿ ಆಯುಷ್ ವೈದ್ಯರಿಗೆ ವೇತನ,ಹಾಗೂ ಸೇವಾ ಭದ್ರತೆ ನೀಡಲಾಗಿದೆ.ಆದರೆ ಕರ್ನಾಟಕದಲ್ಲಿ ಮಾತ್ರ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಪ್ರಕಾರವೇ ಅರ್ಹ ಆಯುಷ್ ವೈದ್ಯರಿಗೆ ವೇತನ ನೀಡುವಂತೆ ನಿರ್ದೇಶನ ನೀಡಲಾಗಿದೆ.ಜಮ್ಮು ಮತ್ತು ಕಾಶ್ಮೀರ ದಲ್ಲಿ ಆಯುಷ್ ವೈದ್ಯರಿಗೆ 95 ಸಾವಿರ ವೇತನ ನೀಡಲಾಗುತ್ತಿದೆ.ಹಿಮಾಚಲ ಪ್ರದೇಶದಲ್ಲಿ 65 ಸಾವಿರ ರೂ,ಆಂಧ್ರಪ್ರದೇಶದಲ್ಲಿ 45 ಸಾವಿರ ರೂ ನೀಡುತ್ತಿದ್ದಾರೆ.ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ 25 ಸಾವಿರೂ ವೇತನ ನೀಡಲಾಗುತ್ತಿಗೆ.ಅದೂ ಮೂರು ತಿಂಗಳು ಅಥವಾ ಆರು ತಿಂಗಳಿಗೊಮ್ಮೆ ವೇತನ ಪಾವತಿ ಮಾಡಲಾಗುತ್ತಿದೆ.ಕೋವಿಡ್ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಸರ್ಕಾರ ನಮ್ಮ ಸೇವೆಯನ್ನು ಬಳಸಿಕೊಳ್ಳುತ್ತಿದೆ ಹೊರತು ನಮಗೆ ನ್ಯಾಯಯುತ ವೇತನ ಪಾವತಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೆಲ್ಲರದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಹೋರಾಟಕ್ಕಿಳಿದಿದ್ದೇವೆ.ಕೋವಿಡ್ 19 ಸಾಂಕ್ರಾಮಿಕ ರೋಗ ರಾಜ್ಯದಲ್ಲಿ ತೀವ್ರವಾಗಿ ಉಲ್ಬಣಿಸುತ್ತಿರುವ ಹಿನ್ನಲೆಯಲ್ಲಿ ಆಯುಷ್ ವೈದ್ಯರು ಸೇವೆ ಹಾಗೂ ಆಯುಷ್ ವಿದ್ಯಾರ್ಥಿಗಳ ಹಿತವನ್ನು ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಹಾಗೂ ಬದ್ದತೆಯಾಗಿದ್ದೂ ಸಚಿವರು ಮತ್ತು ಅಧಿಕಾರಗಳ ದಿವ್ಯ ನಿರ್ಲಕ್ಷ್ಯ ಸೋಂಕಿತರ ಚಿಕಿತ್ಸೆ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ