ದಾವಣಗೆರೆ:
ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ, ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ನೀವು ಜಾಗೃತರಾಗಿ ಎಚ್ಚರ ವಹಿಸಿ ಸುಸಜ್ಜಿತ ಸಂಯುಕ್ತ ಆಯುಷ್ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೂಚನೆ ನೀಡಿದರು.
ಸಮೀಪದ ನಾಗಮ್ಮ ಕೇಶವ ಮೂರ್ತಿ ಬಡಾವಣೆಯಲ್ಲಿ ಸೋಮವಾರ ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಂಜನಿಯರಿಂಗ್ ಘಟಕ ಶಿವಮೊಗ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮದಲ್ಲಿ 50 ಹಾಸಿಗೆಗಳ ಸಾಮಥ್ರ್ಯದ ಸಂಯುಕ್ತ ಆಯುಷ್ ಆಸ್ಪತ್ರೆ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಆಸ್ಪತ್ರೆಗಳ ಉತ್ತಮ ಆರೋಗ್ಯ ಸೇವೆಯಿಂದಾಗಿ, ಆರೋಗ್ಯದ ಗುಣಮಟ್ಟದಲ್ಲಿ ಸಾಕಷ್ಟು ಬದಲಾವಣೆಗಳಾಗಿ, ಮಾನವನ ಜೀವಿತಾವಧಿಯೂ ಹೆಚ್ಚಿದೆ. ಆದ್ದರಿಂದ ಜಿಲ್ಲೆಯಲ್ಲಿ ಸುಸಜ್ಜಿತ ಸಂಯುಕ್ತ ಆಯುಷ್ ಆಸ್ಪತ್ರೆ ನಿರ್ಮಾಣ ಮಾಡಿ, ಆದಷ್ಟು ಬೇಗ ಜನರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಪ್ರಸ್ತುತ ಜನತೆ ಅಲೋಪಥಿ ಚಿಕಿತ್ಸೆಯ ಜೊತೆಗೆ ಆಯುರ್ವೇದ ಪದ್ದತಿಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಹೆಚ್ಚು ಜನಪ್ರಿಯವಾಗುತ್ತಿದೆ. ಆದ್ದರಿಂದ ನಮ್ಮ ಜಿಲ್ಲೆಯ ಜನರಿಗೆ ಆಯುರ್ವೇದ ಚಿಕಿತ್ಸೆಯನ್ನು ಒದಗಿಸುವ ಉದ್ದೇಶದಿಂದ ಆಯುಷ್ ಆಸ್ಪತ್ರೆಯನ್ನು ಕಟ್ಟಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ, ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿ ಎಂದು ಇದೇ ವೇಳೆ ಆಶಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಪ್ರಕೃತಿಯ ಮಡಿಲಲ್ಲಿರುವ ಈ ಜಾಗ ಪ್ರಕೃತಿಯ ಚಿಕಿತ್ಸೆಗೆ ಉತ್ತಮವಾಗಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಯು.ಸಿದ್ದೇಶಿ ಮಾತನಾಡಿ, ನಗರದಲ್ಲಿ 7.5 ಕೋಟಿ ವೆಚ್ಚದಲ್ಲಿ 50 ಹಾಸಿಗೆಗಳ ಸಾಮಥ್ರ್ಯದ ಸಂಯುಕ್ತ ಆಯುಷ್ ಆಸ್ಪತ್ರೆ ನಿರ್ಮಾಣವಾಗಲಿದೆ. ಆಯುಷ್ ಆಸ್ಪತ್ರೆಯು ಚಿಕಿತ್ಸೆಗೆ ಬರುವ ರೋಗಿಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉತ್ತಮ ಚಿಕಿತ್ಸೆ ನೀಡಲಿದೆ ಎಂದರು.ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಜೆ.ಸಿ. ನಿಂಗಪ್ಪ ಹದಡಿ, ಶಿರಮಗೊಂಡನಹಳ್ಳಿ ಗ್ರಾಂ.ಪಂ ಸದಸ್ಯ ಚಂದ್ರಣ್ಣ, ಕಾರ್ಯಪಾಲಕ ಇಂಜಿನಿಯರ್ ನವೀನ್ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ