ಬೆಂಕಿಗಾಹುತಿಯಾಗಿದ್ದ ಗುಡಿಸಲುಗಳನ್ನು ಪರಿಶೀಲಿಸಿದ ಹಿಂದುಳಿದ ಆಯೋಗದ ಅಧ್ಯಕ್ಷರು

ಕೊರಟಗೆರೆ

       ಅಲೆಮಾರಿ ಕುಟುಂಬಗಳನ್ನು ಹೊಕ್ಕಲೆಬ್ಬಿಸುವ ಹುನ್ನಾರದಲ್ಲಿ ಕೆಲವು ದುಷ್ಕರ್ಮಿಗಳು ಇತ್ತೀಚೆಗೆ ಹಚ್ಚಿದ ಬೆಂಕಿಯಿಂದ 11 ಕುಟುಂಬಗಳು ಬೀದಿಗೆ ಬಿದ್ದು, ಮೂಲ ಸೌಕರ್ಯಗಳಿಲ್ಲದೆ ಬೀದಿಯಲ್ಲಿ ಜೀವನ ನಡೆಸುತ್ತಿವೆ. ಈ ಕುಟುಂಬಗಳಿಗೆ ಸ್ಪಂದಿಸಿರುವ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕಾಂತರಾಜು ಜಿಲ್ಲಾಡಳಿತ ಹಾಗೂ ತಾಲ್ಲೂಕ್ ಆಡಳಿತದೊಂದಿಗೆ ಚರ್ಚಿಸಿ ಶೀಘ್ರ ಪರಿಹಾರ ಕಲ್ಪಿಸಲಾಗುವುದು ಎಂದು ಮಂಗಳವಾರ ಭರವಸೆ ನೀಡಿದರು

ತಾಲ್ಲೂಕಿನ ಕೋಳಾಲ ಹೋಬಳಿ ನೀಲಗೊಂಡಹನಳ್ಳಿ ಗ್ರಾಪಂ ವ್ಯಾಪ್ತಿಯ ಐ.ಕೆ.ಕಾಲನಿಯ ಪಿಡ್ಲ್ಯೂಡಿ ಇಲಾಖೆಯ ಕಚೇರಿ ಆವರಣದಲ್ಲಿ ಕಳೆದ 30 ವರ್ಷದಿಂದ 11 ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿರುವ ಗುಡಿಸಲಿಗೆ ದುಷ್ಕರ್ಮಿಗಳು ಅ.12 ಮತ್ತು 13 ರಂದು ಎರಡು ದಿನ ಬೆಂಕಿ ಹಚ್ಚಿ ನಾಶಪಡಿಸಿರುವ ಹಿನ್ನೆಲೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ಉಪ ವಿಭಾಗಾಧಿಕಾರಿ ಚಂದ್ರಶೇಖರ್ ಹಾಗೂ ತಹಸೀಲ್ದಾರ್ ನಾಗರಾಜು ಅವರಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಸೂಚಿಸಿದರು.

       ಅಲೆಮಾರಿ ಕುಟುಂಬ ವಾಸಿಸುತ್ತಿರುವ ಗುಡಿಸಲುಗಳಿಗೆ ಎರಡು ಬಾರಿ ಬೆಂಕಿ ಹಚ್ಚುವ ಮೂಲಕ ಹೊಕ್ಕಲೆಬ್ಬಿಸುವ ಹುನ್ನಾರದ ದುಷ್ಕರ್ಮಿಗಳ ವಿರುದ್ದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಈ ಕುಟುಂಬದ ಜನರಿಗೆ ವಾಸಿಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದು. ಇಲ್ಲವೇ ಇದೇ ಗುಡಿಸಲುಗಳ ಜಾಗದಲ್ಲಿ ಶೆಡ್‍ರೂಪದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು. ಜೊತೆಗೆ ಇವರು ಭಯದ ವಾತಾವರಣದಲ್ಲಿ ಬದುಕುತ್ತಿರುವುದು ಕಂಡು ಬರುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ ಸಂಬಂಧಪಟ್ಟ ಗ್ರಾಮ ಪಂಚಾಯ್ತಿಯಿಂದ ತಾತ್ಕಾಲಿಕವಾಗಿ ಮೂಲಭೂತ ಸೌಕರ್ಯಒದಗಿಸುವ ನಿಟ್ಟಿನಲ್ಲಿ ಮುಂದಾಗುವಂತೆ ಸೂಚನೆ ನೀಡಿದರು.

      ನೀಲಗೊಂಡನಹಳ್ಳಿ ಗ್ರಾ, ಪಂ ನ ವ್ಯಾಪ್ತಿಯ ಇರಕಸಂದ್ರ ಕಾಲನಿಯಲ್ಲಿ ಕಳೆದ 30 ವರ್ಷದಿಂದ ವಾಸಿಸುತ್ತಿರುವ ಅರಸಮ್ಮ, ಮಂಜಮ್ಮ, ನಾಗರಾಜು, ಗಂಗಮ್ಮ, ರಾಮಕ್ಕ, ಮಂಜಮ್ಮ, ಶಶಿಕಲಾ, ರಂಗ, ರಾಮಣ್ಣ, ಗಂಗಮ್ಮ, ಮಂಜಮ್ಮ ಮುಂತಾದ ಅಲೆಮಾರಿ ಜನಾಂಗಕ್ಕೆ ಸೇರಿದ 11 ಕುಟುಂಬ ವಾಸವಿದ್ದಾರೆ. ಅವರ 8 ಗುಡಿಸಲುಗಳು ಕಿಡಿಗೇಡಿಗಳು ಹಚ್ಚಿರುವ ಬೆಂಕಿಯಿಂದ ನಾಶವಾಗಿವೆ. ಈ ಬಗ್ಗೆ ಕೂಲಂಕಶವಾಗಿ ಪ್ರತಿ ಗುಡಿಸಲಿಗೂ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕಾಂತರಾಜು ಹಾಗೂ ಅವರ ತಂಡ ಭೇಟಿ ನೀಡಿ, ಜಿಲ್ಲಾ ಮತ್ತು ತಾಲ್ಲೂಕ್ ಮಟ್ಟದ ಅಧಿಕಾರಿಗಳ ಜೊತೆ ಕೂಲಂಕಶವಾಗಿ ಪರಿಶೀಲನೆ ನಡೆಸಿದರು. ಅಲ್ಲದೆ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

      ಸೂರು ಕಳೆದುಕೊಂಡ ನಿರಾಶ್ರಿತರಾದ ಮಹಿಳೆಯರು ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಭೇಟಿ ನೀಡಿದ ವೇಳೆ ಗೋಗರೆದು ನಮಗೆ ಶಾಶ್ವತವಾದ ಸೂರು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಆಗ ಅಧ್ಯಕ್ಷರು ಸ್ಪಂದಿಸಿ ನಾವು ತಕ್ಷಣವೇ ಸರಕಾರದ ಗಮನಕ್ಕೆ ತರುತ್ತೇವೆ. ನೀವು ಈ ಘಟನೆಯಿಂದ ಧೃತಿಗೆಡುವ ಅವಶ್ಯಕತೆಯಿಲ್ಲ. ಸರ್ಕಾರ ನಿಮ್ಮಗಳ ರಕ್ಷಣೆಗಾಗಿಯೇ 100 ಕೋಟಿ ಮೀಸಲಿಟ್ಟಿದೆ. ಅಸಹಾಯಕ ಜನರಿಗೆ ಇದರ ಸದುಪಯೋಗ ಪಡೆದುಕೊಳ್ಳುವ ಅವಕಾಶವಿರುವ್ಯದರಿಂದ ಯಾರೊಬ್ಬರೂ ಹೆದರುವ ಅವಶ್ಯಕತೆಯಿಲ್ಲ ಎಂದು ರಾಜ್ಯಾದ್ಯಕ್ಷರು ನಿರಾಶ್ರಿತರಿಗೆ ಭರವಸೆ ನೀಡಿದರು.

       ಮಧುಗಿರಿ ಉಪ ವಿಭಾಗಾಧಿಕಾರಿ ಚಂದ್ರಶೇಖರ್ ಮಾತನಾಡಿ, ಕೊರಟಗೆರೆ ತಾಲ್ಲೂಕಿನ ಇನ್ನೂ ಹಲವು ಪ್ರದೇಶಗಳಲ್ಲಿ ಅಲೆಮಾರಿ ಕುಟುಂಬಗಳು ವಾಸವಿರುವುದು ಗಮನಕ್ಕೆ ಬಂದಿದೆ. ಇದರಲ್ಲಿ ಹುಲೀಕುಂಟೆ ಕೆರೆ ಅಂಗಳದಲ್ಲಿ 6 ಕುಟುಂಬಗಳು, ಕ್ಯಾಮೇನಹಳ್ಳಿ ಗ್ರಾ, ಪಂ ವ್ಯಾಪ್ತಿಯ ಕ್ಯಾಮೇನಹಳ್ಳಿಯಲ್ಲಿ 12 ಕುಟುಂಬಗಳು ಹಾಗೂ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಸರಿ ಸುಮಾರು 20 ಕುಟುಂಬಗಳು, ಗೊರವನಹಳ್ಳಿ ತೀತಾ ಜಲಾಶಯದ ಬಳಿ 12 ಕುಟುಂಬ ಮತ್ತು ಐ.ಕೆ.ಕಾಲನಿಯಲ್ಲಿ 10 ಕುಟುಂಬ ಸೇರಿ, ಹಲವು ಪ್ರದೇಶಗಳಲ್ಲಿ ಅಲೆಮಾರಿ ಕುಟುಂಬದ ಜನರು ವಾಸಿಸುತ್ತಿರುವ ಬಗ್ಗೆ ಈಗಾಗಲೇ ಮಾಹಿತಿ ಪಡೆದಿದ್ದೇವೆ. ಅತಿ ಶೀಘ್ರವಾಗಿ ಸ್ಥಳ ಪರಿಶೀಲನೆ ನಡೆಸಿ ವಾಸಿಸಲು ಯೋಗ್ಯವಾದ ಸ್ಥಳ ಗುರುತಿಸಿ ಸೂರು ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

       ಪರಿಶೀಲನೆ ವೇಳೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗ ಇಲಾಖೆ ಅಧಿಕಾರಿ ಸುಬ್ಬಾನಾಯ್ಕ, ತಾಲ್ಲೂಕು ಅಧಿಕಾರಿ ಅನಂತರಾಜು, ತಹಸೀಲ್ದಾರ್ ನಾಗರಾಜು, ಪಿಎಸ್‍ಐ ಸಂತೋಷ್, ಕಂದಾಯ ಅಧಿಕಾರಿ ಚಂದ್ರಮೌಳಿ, ಪಿಡಿಓ ಹನುಮಂತರಾಜು ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap