ಚಳ್ಳಕೆರೆ
ಕಳೆದ ಕೆಲವು ತಿಂಗಳುಗಳಿಂದ ತಾಲ್ಲೂಕಿನ ಕೆಲವು ಗ್ರಾಮಗಳ ಬಗರ್ ಹುಕ್ಕುಂ ಸಾಗುವಳಿದಾರರು ಅರ್ಜಿ ಸಲ್ಲಿಸಲು ಇಲ್ಲಿನ ತಾಲೂಕು ಕಚೇರಿಗೆ ಆಗಮಿಸುತ್ತಿದ್ದು, ಗಂಟೆ ಗಟ್ಟಲೇ ಕಾದರೂ ಸಹ ಯಾರೂ ಸಹ ಅರ್ಜಿಗಳನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ನೊಂದ ಗ್ರಾಮಸ್ಥರು ತಹಶೀಲ್ದಾರ್ ಕೊಠಡಿ ಮುಂದೆ ಕುಳಿತು ತಾಲ್ಲೂಕು ಆಡಳಿತದ ವಿರುದ್ದ ತಮ್ಮ ಅಸಮದಾನವನ್ನು ವ್ಯಕ್ತ ಪಡಿಸದರು.
ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಚಂದ್ರಣ್ಣ, ತಿಪ್ಪೇಸ್ವಾಮಿ ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ, ಪ್ರತಿನಿತ್ಯವೂ ನಾವು ಬೆಳಂಬೆಳ್ಳಗೆಯೇ ನಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅರ್ಜಿ ಸಲ್ಲಿಸಲು ಇಲ್ಲಿಗೆ ಆಗಮಿಸುತ್ತಿದ್ದೇವೆ. ತಾಲ್ಲೂಕಿನ ಬೆಳಗೆರೆ, ಹೆಗ್ಗೆರೆ, ದುಗ್ಗವಾರ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಗ್ರಾಮದ ಬಡ ಜನರು ಮುಂಜಾನೆ 4 ರಿಂದ ಮಧ್ಯಾಹ್ನದ ತನಕ ಕಾದರೂ ಇಲ್ಲಿನ ಸಿಬ್ಬಂದಿ ವರ್ಗ ನಮ್ಮ ಬಗ್ಗೆ ಗಮನಹರಿಸದೆ ಯಾವುದೇ ಮಾಹಿತಿ ನೀಡದೇ ನಿರ್ಲಕ್ಷಿಸುತ್ತಾರೆ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ಸಹ ಸೂಕ್ತ ಸ್ಪಂದನವಿಲ್ಲ. ಮಾನ್ಯ ತಹಶೀಲ್ದಾರ್‍ರವರು ಈ ಕೂಡಲೇ ನಮ್ಮ ಅರ್ಜಿಗಳನ್ನು ಪಡೆದು ನಮಗೆ ಸ್ವಿಕೃತಿಯನ್ನು ನೀಡಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಕಚೇರಿಗೆ ಆಗಮಿಸಿದಾಗ ತಮ್ಮ ಕೊಠಡಿಯ ಮುಂದೆ ಕುಳಿತ ಗ್ರಾಮಸ್ಥರನ್ನು ಕಂಡು ಕಸಿವಿಸಿಗೊಂಡರು. ಈ ಬಗ್ಗೆ ವಿಚಾರಿಸಿದಾಗ ಗ್ರಾಮಸ್ಥರು ಬಗರ್ ಹುಕ್ಕುಂ ಅರ್ಜಿ ನೀಡಲು ಬಂದಿರುವುದಾಗಿ ತಿಳಿದು ಎಲ್ಲರನ್ನೂ ತಮ್ಮ ಕೊಠಡಿಗೆ ಕರೆದು ಪ್ರಸ್ತುತ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಗಳನ್ನು ಹೊರತು ಪಡಿಸಿ ಬೇರೆಯಾವುದೇ ರೀತಿಯ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಅರ್ಜಿ ಸ್ವೀಕೃತಿ ಕುರಿತಂತೆ ಯಾವುದೇ ದಾಖಲಾತಿ ನೀಡಲು ಇಂದಿನ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಚುನಾವಣೆ ಮುಗಿದ ನಂತರ ನೀತಿ ಸಂಹಿತೆ ಅವಧಿ ತೆರವಾದಾಗ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ತಾವೆಲ್ಲರೂ ಗ್ರಾಮಸ್ಥರು ಚುನಾವಣಾ ಕಾರ್ಯಗಳನ್ನು ನಡೆಸಿಕೊಂಡು ಹೋಗಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ್ ಮನವಿ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಅವಧಿ ಮುಗಿದ ನಂತರ ತಮ್ಮ ಅರ್ಜಿಗಳನ್ನು ದಯಮಾಡಿ ಸ್ವೀಕರಿಸಬೇಕು. ಬಡವರಾದ ನಮಗೆ ಬಗರ್ ಹುಕ್ಕುಂ ಸಾಗುವಳಿ ಯೋಜನೆಯಡಿ ಜಮೀನು ಒದಗಿಸುವಂತೆ ಮನವಿ ಮಾಡಿ ತೆರಳಿದರು. ಗಣಕಯಂತ್ರ ನಿರ್ವಾಹಕ ಕಾಂತರಾಜರನ್ನು ಪ್ರಶ್ನಿಸಿದಾಗ, ಪ್ರಸ್ತುತ ಸರ್ಕಾರವೇ ಕೆಲವು ಯೋಜನೆಗಳ ಅರ್ಜಿಗಳನ್ನು ಪಡೆಯಲು ಅವಕಾಶ ನೀಡಿಲ್ಲ. ಅರ್ಜಿ ಹಿಂಬರಹದ ಭೂಮಿ ಸಾಪ್ಟ್‍ವೇರ್ ಕಾರ್ಯನಿರ್ವಹಿಸುತ್ತಿಲ್ಲ. ಚುನಾವಣೆ ನಂತರ ತಹಶೀಲ್ದಾರ್‍ರವರ ಅನುಮತಿ ಪಡೆದ ನಂತರವೇ ಅರ್ಜಿಗಳನ್ನು ಸ್ವೀಕಾರ ಮಾಡಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
