ಪೋಕ್ಸೋ ಪ್ರಕರಣ: ಜಾಮೀನು ಅರ್ಜಿ ವಜಾ

ತುಮಕೂರು:

    2019ರ ಅಕ್ಟೋಬರ್ ತಿಂಗಳಿನಲ್ಲಿ ನಗರದ ಈದ್ಗಾ ಮೊಹಲ್ಲಾ ಪ್ರದೇಶದಲ್ಲಿ ನಡೆದಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.

    5.10.2019 ರಂದು ಸಂಜೆ 5 ಗಂಟೆ ಸಮಯದಲ್ಲಿ ಬಾಲಕಿಯು ಐರನ್ ಬಟ್ಟೆಗಳನ್ನು ತರಲು ಹೋಗಿದ್ದಾಗ ನಸ್ರುಲ್ಲಾ ಎಂಬಾತ ಗ್ಯಾರೇಜ್ ಅಂಗಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಆರೋಪಿಸಲಾಗಿತ್ತು. ಆ ಸಂದರ್ಭದಲ್ಲಿ ಬಡಾವಣೆಯ ನಾಗರಿಕರು ಈ ಕೃತ್ಯವನ್ನು ಖಂಡಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು.

    ಆನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ನಸ್ರುಲ್ಲಾ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕಲಂ 8 ಮತ್ತು 6 ಅನ್ವಯ, ಐಪಿಸಿ 506 ಮತ್ತು 376 ಅನ್ವಯ ಕೇಸು ದಾಖಲಾಗಿತ್ತು.ಸದರಿ ಪ್ರಕರಣದಲ್ಲಿ ಆರೋಪಿ ನಸ್ರುಲ್ಲಾ ಖಾನ್ ಅವರು ಇಲ್ಲಿನ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ನೊಂದ ಬಾಲಕಿ ತಾಯಿ ಪರ ಪ್ರತಿನಿಧಿಸಿದ ವಕೀಲರಾದ ಸೈಯದ್ ಮುಜಾಮಿಲ್ ಪಾಷಾ, ಟಿಪ್ಪು ಅವರುಗಳು ಆರೋಪಿಯು ರಾಜಕೀಯ ಹಾಗೂ ಆರ್ಥಿಕವಾಗಿ ಬಲಾಢ್ಯರಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷಿದಾರರನ್ನು ಹೆದರಿಸುವ ಅಥವಾ ಪ್ರಭಾವ ಬೀರುವ ಸಾಧ್ಯತೆಗಳಿರುವುದರಿಂದ ಜಾಮೀನು ನೀಡಬಾರದು ಎಂದು ತಕರಾರು ಅರ್ಜಿ ಸಲ್ಲಿಸಿದ್ದರು.

    ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ಅಭಿಯೋಜಕರಾದ ಗಾಯತ್ರಿ ರಾಜು ಅವರೂ ಸಹ ತಕರಾರು ಸಲ್ಲಿಸಿ ದಾಖಲಾಗಿರುವ ದೂರಿನ ಬಗ್ಗೆ ಗಮನ ಸೆಳೆದಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಮಲ್ಲಿಕಾರ್ಜುನಸ್ವಾಮಿ ಅವರು ಆರೋಪಿಗೆ ಜಾಮೀನು ನೀಡಲು ನಿರಾಕರಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link