ಬಾಕಿ ವೇತನ ಕೊಡಿಸಲು ಡಿ ಗ್ರೂಪ್ ನೌಕರರ ಒತ್ತಾಯ

ದಾವಣಗೆರೆ:

      ಗುತ್ತಿಗೆದಾರರಿಂದ ಬಾಕಿ ವೇತನ ಕೊಡಿಸಬೇಕೆಂದು ಒತ್ತಾಯಿಸಿ, ಸರ್ಕಾರಿ ಚಿಗಟೇರಿ ಜಿಲ್ಲಾಸ್ಪತ್ರೆ ದಿನಗೂಲಿ ನೌಕರರ ಡಿ-ಗ್ರೂಪ್ಸ್ ಸಂಘದ ನೇತೃತ್ವದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಗ್ರೂಪ್ ನೌಕರರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

     ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ಆರಂಭಿಸಿದ ಡಿ ಗ್ರೂಪ್ ನೌಕರರು ಸಕಾಲದಲ್ಲಿ ಹಾಗೂ ನಿಗದಿತ ವೇತನ ನೀಡದ ಗುತ್ತಿಗೆದಾರರ ವಿರುದ್ಧ ಹಾಗೂ ಗುತ್ತಿಗೆದಾರರಿಂದ ಸರಿಯಾಗಿ ವೇತನ ಕೊಡಿಸದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಟೆಂಡರ್‍ದಾರರಾದ ಪೂಜ್ಯಾಯ ಕಂಪನಿಯವರು ಕೆಲಸಕ್ಕೆ ಸೇರಿಸಿಕೊಳ್ಳುವ ಮೊದಲು 15 ಸಾವಿರ ರೂ. ವೇತನ ಕೊಡುವುದಾಗಿ ಹೇಳಿದ್ದರು. ಇದೀಗ ಕೇವಲ 4-5 ಸಾವಿರ ಮಾತ್ರ ವೇತನ ನೀಡುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಕೆಲಸದಿಂದ ತೆಗೆದುಹಾಕಿಸುವುದಾಗಿ ಬೆದರಿಸುತ್ತಾರೆಂದು ಆರೋಪಿಸಿದರು.

       ಸಮರ್ಪಕ ವೇತನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನೇತೃತ್ವ ವಹಿಸಿದ್ದ ನೌಕರರನ್ನು ಈಗಾಗಲೇ ಕೆಲಸದಿಂದ ಕಿತ್ತು ಹಾಕಿರುವುದು, ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ನೌಕರರ ದನಿ ಅಡಗಿಸುವ ಪ್ರಯತ್ನವಾಗಿದ್ದು, ಇದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಹೊರಗುತ್ತಿದೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಡಿ ಗ್ರೂಪ್‍ನಲ್ಲಿ ಬಹುತೇಕ ವಿಧವೆಯರು, ಬಡವರು ಕೆಲಸ ಮಾಡುತ್ತಿದ್ದಾರೆ. ಕಳೆದ 5 ತಿಂಗಳಿನಿಂದ ವೇತನವಿಲ್ಲದೆ ದುಡಿಯುತ್ತಿದ್ದೇವೆ. ತರಗತಿಗಳು ಆರಂಭವಾಗಿದ್ದರೂ ಸಹ ಮಕ್ಕಳನ್ನು ಶಾಲೆಗೆ ಸೇರಿಸಲು ಹಣ ಇಲ್ಲವಾಗಿದೆ. ಅಲ್ಲದೇ, ಜೀವನ ನಡೆಸುವುದೇ ಕಷ್ಟವಾಗಿದೆ. ಶ್ರಮ ವಹಿಸಿ ದುಡಿಯುವ ನಮಗೆ ನ್ಯಾಯ ಒದಗಿಸಬೇಕು. ಕೂಡಲೇ ಗುತ್ತಿಗೆ ಕಂಪನಿಯವರನ್ನು ಕರೆಯಿಸಿ, ನೌಕರರ ಬಾಕಿ ವೇತನ ಕೊಡಿಸುವ ಮೂಲಕ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

        ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಜಿ.ಎಚ್.ಮಾಲತೇಶ್, ಪದಾಧಿಕಾರಿಗಳಾದ ಎಚ್.ತಿಪ್ಪೇಸ್ವಾಮಿ, ಎಚ್.ಡಿ.ಸುರೇಂದ್ರ, ಕಮಲಮ್ಮ, ದುಗ್ಗಮ್ಮ, ಕೆ.ಭೀಮಪ್ಪ, ಎ.ಸುರೇಶ, ನವೀನ, ಮುರುಗೇಶ ಬಸವರಾಜ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link