ಚಳ್ಳಕೆರೆ
ಕಳೆದ ಹಲವಾರು ದಶಕಗಳಿಂದಲೂ ಏನೂ ಅರಿಯದ ಮುಗ್ಧ ಬಾಲಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮೂಲಕ ಅವರ ಎಲ್ಲಾ ರೀತಿಯ ಸ್ವಾತಂತ್ರಗಳನ್ನು ಬಲವಂತವಾಗಿ ಕಸಿದುಕೊಳ್ಳಲಾಗುತ್ತಿದೆ. ಭವಿಷ್ಯದ ಬದುಕನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲೇ ಅವರನ್ನು ಕೆಲಸಕ್ಕೆ ತೆಗೆದುಕೊಂಡು ಅವರ ಮೇಲೆ ದೌರ್ಜನ್ಯ ನಡೆಸುವ ಪದ್ದತಿಯನ್ನು ಕೈಬಿಡಬೇಕೆಂದು ಸಿವಿಲ್ ನ್ಯಾಯಾಯಲಯದ ಹಿರಿಯ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.
ಅವರು, ಬುಧವಾರ ಕಾರ್ಮಿಕ ಇಲಾಖೆ, ಕಾನೂನು ಸೇವಾ ಸಮಿತಿ, ಶಿಕ್ಷಣ ಇಲಾಖೆ, ನಗರಸಭೆ ಕಾರ್ಯಾಲಯ, ಸಿಡಿಪಿಒ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಬಾಲಕಾರ್ಮಿಕ ದಿನಾಚರಣೆ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಗ್ದ ಬಾಲಕರನ್ನು ಶೋಷಣೆ ಮಾಡುವವರ ವಿರುದ್ದ ಸರ್ಕಾರ ವಿಶೇಷ ಕಾನೂನನ್ನು ರೂಪಿಸಿದೆ. ಎಲ್ಲಿಯೇಯಾಗಲಿ 18 ವರ್ಷ ವಯಸ್ಸಿನ ಒಳಗಿರುವ ಬಾಲಕ ಬಾಲಕಿಯರನ್ನು ಕೆಲಸಕ್ಕೆ ನೇಮಿಸಿಕೊಂಡು ಅವರಿಂದ ದುಡಿಸಿಕೊಳ್ಳುವವರ ವಿರುದ್ದ ಕಠಿಣವಾದ ಕಾನೂನು ಜಾರಿಯಲ್ಲಿದ್ದು, ಅಂತವರಿಗೆ ಅಧಿಕ ದಂಡ ಹಾಗೂ ಜೈಲು ಶಿಕ್ಷೆಯನ್ನು ವಿಧಿಸುವ ಕಾನೂನು ಇದೆ ಅದ್ದರಿಂದ ಯಾರೂ ಸಹ ಬಾಲಕಾರ್ಮಿಕರ ನೇಮಕಕ್ಕೆ ಮುಂದಾಗಬಾರದು. ಸಾರ್ವಜನಿಕರು ಸಹ ಅಂಗಡಿ, ಹೋಟೆಲ್, ಖಾಸಗಿ ಕಂಪನಿಗಳು,ಗ್ಯಾರೇಜ್, ಕಟ್ಟಡ ನಿರ್ಮಾಣ ಇಂತಹ ಕಡೆ ಕಾರ್ಯನಿರ್ವಹಿಸುವ ಬಾಲಕಾರ್ಮಿಕರ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಮಿಕ ಇಲಾಕೆ ಇನ್ಸ್‍ಪೆಕ್ಟರ್ ಮಹಮ್ಮದ್ ಶಫೀವುಲ್ಲಾ, ಈ ಹಿಂದೆ ಇಂತಹ ಪ್ರಕರಣಗಳಿಗೆ ಹೆಚ್ಚು ಶಿಕ್ಷೆ ಆಗುತ್ತಿರಲಿಲ್ಲ. ಕಾರಣ, ಇಲಾಖೆಗೆ ಸುಳ್ಳು ಮಾಹಿತಿ ನೀಡಿ ತಪ್ಪಿಸಿಕೊಳ್ಳುವ ಪ್ರವೃತ್ತಿ ಇತ್ತು. ಆದರೆ, ಈಗ ಇಲಾಖೆ ಎಲ್ಲಾ ಹಂತದಲ್ಲೂ ಜಾಗೃತವಾಗಿದ್ದು, ನಿರಂತರವಾಗಿ ವಿವಿಧೆಡೆ ತಪಾಸಣೆ ನಡೆಸುವ ಮೂಲಕ ಬಾಲಕಾರ್ಮಿಕರನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ ಎಂದರು. ಜಾಗೃತಿ ಜಾಥ ಇಲ್ಲಿನ ವಾಲ್ಮೀಕಿ ವತ್ತದಿಂದ ಹೊರಟು ಚಿತ್ರದುರ್ಗ ರಸ್ತೆ ಮೂಲಕ ನೆಹರೂ ರಸ್ತೆಗೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ, ಬಾಲಕಾರ್ಮಿಕ ಪದ್ದತಿಯನ್ನು ತೊಡೆದು ಹಾಕುವ ಶಪತ ಕೈಗೊಳ್ಳಲಾಯಿತು.
ಜಾಗೃತಿ ಜಾಥದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಾಲತಿ, ಶಿಶು ಅಭಿವೃದ್ಧಿ ಅಧಿಕಾರಿ ಸಿ.ಕೆ.ಗಿರಿಜಾಂಬ, ಕಂದಾಯಾಧಿಕಾರಿ ಶರಣಬಸಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ಬೋರಯ್ಯ, ಎಚ್‍ಟಿಟಿ ಶಾಲೆಯ ದೈಹಿಕ ಶಿಕ್ಷಕ ಪ್ರಾಣೇಶ್ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.